September 16, 2024

ವೇದ ಉಪನಿಷತ್ತುಗಳು ಕೂಡ ವಿಶ್ವ ಮಾನವ ಗುಣವಾಗಿಯೇ ಇದೆ

0
ಕರ್ನಾಟಕ ಸುವರ್ಣ ಸಂಭ್ರಮ

ಕರ್ನಾಟಕ ಸುವರ್ಣ ಸಂಭ್ರಮ

ಶೃಂಗೇರಿ: ‘ವೇದ ಉಪನಿಷತ್ತುಗಳು ಕೂಡ ವಿಶ್ವ ಮಾನವ ಗುಣವಾಗಿಯೇ ಇದೆ. ಮನುಜಮತ ವಿಶ್ವಪಥ, ನಾವೆಲ್ಲರೂ ಮನುಷ್ಯ ಜಾತಿ ಎಂದು ಕುವೆಂಪು ನಂಬಿದ್ದರು. ಬಸವಣ್ಣ, ಕುವೆಂಪು, ಬುದ್ಧ, ಕೆಂಪೇಗೌಡರು, ಕನಕದಾಸರು, ವಾಲ್ಮೀಕಿ, ಮಡಿವಾಳ ಮಾಚಿದೇವ ಇವರೆಲ್ಲರೂ ಯಾವುದೇ ಒಂದು ಜಾತಿಗೆ ಸೀಮಿತವಾಗಿದವರಲ್ಲ. ಸಮಾಜಮುಖಿಯಾಗಿ ದುಡಿದು ಸಮಾಜದ ಏಳಿಗೆಗಾಗಿ ಆದರ್ಶ ಮೆರೆದವರಾಗಿದ್ದಾರೆ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಶೃಂಗೇರಿಯ ಆದಿಚುಂಚನಗಿರಿಯ ಬಿಜಿಎಸ್ ಅವರಣದಲ್ಲಿ ಆಯೋಜಿಸಿದ ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ರಾಷ್ಟ್ರಕವಿ ಕುವೆಂಪುರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಮಾಯಣ ದರ್ಶನಂ ಅಮೂಲ್ಯ ಕೃತಿಯಾಗಿದೆ. ಕುವೆಂಪುರವರು ಕುಗ್ರಾಮದಲ್ಲಿ ಹುಟ್ಟಿ ಅನೇಕ ಗ್ರಂಥಗಳನ್ನು ರಚಿಸಿ, ನಾಡಿಗೆ ಉತ್ತಮ ಸಂದೇಶ ನೀಡಿದವರು. ಇಂತಹ ಮಹಾಜನರು ಮಾಡಿದ ಸಾಧನೆ ಮೈಗೂಡಿಸಿಕೊಂಡಾಗ ಮನುಷ್ಯ ಜನ್ಮಕ್ಕೆ ಅರ್ಥ ಬರುತ್ತದೆ.

ಇತಿಹಾಸಕಾರ ಪ್ರಭುದ್ಧನಾಗಿದ್ದಾಗ ಮಾತ್ರ ಆತನ ರಚನೆಗಳು ಜಾತ್ಯಾತೀತವಾಗಿ ಮತ್ತು ವಸ್ತುನಿಷ್ಠವಾಗಿ ಇರುತ್ತದೆ. ನಮ್ಮ ಹಿರಿಯರು ಜಾತಿ-ಬೇಧವನ್ನು ಎಂದೂ ಆಚರಣೆಗೆ ತಂದಿರಲಿಲ್ಲ. ನಾವು ಮಾಡುವ ವೃತ್ತಿಗೆ ಸಂಬಂಧಿಸಿ, ಒಂದೊಂದು ಜಾತಿಯನ್ನು ಅಳವಡಿಸಿಕೊಂಡಿದ್ದೇವೆ. ಒಂದು ದೇಶದ ಸಂಪನ್ಮೂಲ ಆ ದೇಶದ ನಾಗರೀಕರು ಮತ್ತು ಮಕ್ಕಳು. ಶಿಕ್ಷಣ, ಸಂಸ್ಕಾರ, ಜಾಗೃತಿ, ಬುದ್ಧಿ, ವಿಚಾರ ಸರಣಿ ಇದೇ ತನ್ನ ಜೀವನದ ಕಾರ್ಯರಂಗ ಎಂಬ ಘನ ಸತ್ಯದ ಅರಿವು ಮಕ್ಕಳಲ್ಲಿ ಪರಿಮೂಡಬೇಕು. ಶಿಕ್ಷಣದಿಂದ ಉತ್ತಮ ಶೀಲ, ಮಾನಸಿಕ ಶಕ್ತಿ ಹೆಚ್ಚಬೇಕು. ಆಗ ಮಾತ್ರ ನಾವು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯ’ ಎಂದರು.

ಆದಿಚುಂಚನಗಿರಿಯ ಶೃಂಗೇರಿ ಶಾಖಾ ಮಠದ ಗುರುಗಳಾದ ಗುಣನಾಥ ಸ್ವಾಮೀಜಿ ಮಾತನಾಡಿ, ‘ಜಾತಿ, ಮತ, ಪಂಥಗಳನ್ನು ಮೀರಿದ್ದು ಮಾನವೀಯ ಮೌಲ್ಯ, ಅಧುನಿಕ ಜೀವನದಲ್ಲಿ ಮೌಲ್ಯಗಳು ಅಪಮೌಲ್ಯವಾಗುತ್ತಿದ್ದು, ಕುವೆಂಪುರವರ ಜೀವನದ ಮೌಲ್ಯಗಳು ಸರ್ವರಿಗೂ ಮಾದರಿಯಾಗಬೇಕು. ಭಗವತ್ ಪ್ರೇಮ, ಮಾನವ ಪ್ರೇಮ, ಮಾನವ ಸಂಬಂಧಗಳಲ್ಲಿ ನೀತಿನ್ಯಾಯ, ಮನುಷ್ಯರ ಸಡುವೆ ಸಮಾನತೆ ಮುಂತಾದ ಉನ್ನತ ಭಾವನೆಗಳನ್ನು ಮಾನವನು ಬೆಳೆಸಿಕೊಳ್ಳಬೇಕಾದ ಮುಖ್ಯ ಗುಣಗಳನ್ನು ಶಿಕ್ಷಣ ಮತ್ತು ಶಾಲೆ ನೀಡುತ್ತದೆ. ಆದರೆ ಜೀವನದಲ್ಲಿ ನಾವು ಕಲಿಯುವ ಶಿಕ್ಷಣ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠದ ಕುರಿತು ಧ್ವನಿಸುರಳಿ ಬಿಡುಗಡೆ ಮಾಡಿದರು. ಹಿನ್ನಲೆ ಗಾಯಕಿ ಶಮಿತಾ ಮಲ್ನಾಡ್, ಭಾಗ್ಯಶ್ರೀ ಗೌಡ, ಚಲನಚಿತ್ರ ನಾಯಕಿ ನಟಿ ನಾಗಶ್ರೀ ಬೇಗಾರ್, ನೈದೀಲೆ, ನಾಟ್ಯ ನವೀನ್ ಗೌಡರವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಆಶ್ರಮದ ಗುರುಗಳಾದ ಶಿವಲಿಂಗಾನಂದ ಸ್ವಾಮೀಜಿ, ಮಾದಾರಚನ್ನಯ್ಯ ಸ್ವಾಮೀಜಿ, ಶಿವನಂದಪುರಿ ಸ್ವಾಮೀಜಿ, ಮಂಜುನಾಥ ಭಾರತೀ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಶಂಕರಾರೂಢ ಸ್ವಾಮೀಜಿ, ರಮಾಣನಂದ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಶಾಖಾ ಮಠದ ಎಲ್ಲಾ ಸ್ವಾಮೀಜಿಗಳು, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಎಸ್ ವೆಂಕಟೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಎಮ್.ಎ ಶೇಖರ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಎ.ಟಿ ಶಿವರಾಮ್, ಕಲಾವಿದ ಜಯರಾಮ್ ಆಲತಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಸಿ.ಕೆ ಸುಬ್ಬರಾಯ, ತರೀಕೆರೆ ಶಾಸಕ ಶ್ರೀನಿವಾಸ್, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಮೇಶ್, ಹಿನ್ನಲೆ ಗಾಯಕಿ ಶಮಿತಾ ಮಲ್ನಾಡ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ್ ಗೌಡ, ಡಿ.ಸಿ ಶಂಕರಪ್ಪ, ನವೀನ್, ಭಾಗೀರಥಿ, ಜ್ಯೋತಿ, ಎನ್.ಜಿ ರಾಘವೇಂದ್ರ, ಬಿಜಿಎಸ್ ಕಾಲೇಜಿನ ಪಾಂಶುಪಾಲ ಡಾ.ಕೆ.ಸಿ ನಾಗೇಶ್, ಮುಖ್ಯೋಪಧ್ಯಾಯರಾದ ಕಿರಣ್ ಕುಮಾರ್, ಹರೀಶ್, ರಮೇಶ್ ಇದ್ದರು.

Karnataka Golden Celebration organized at BGS Avarana Adichunchanagiri Sringeri

 

About Author

Leave a Reply

Your email address will not be published. Required fields are marked *