September 8, 2024
ಎಐಟಿ ಕಾಲೇಜಿನ ಆಂಪಿ ಥಿಯೇಟರ್ ನಲ್ಲಿ ನಡೆದ ಸಿರಿಧಾನ್ಯ ಹಬ್ಬ -೨೦೨೩ರ ಕಾರ್ಯಕ್ರಮ

ಎಐಟಿ ಕಾಲೇಜಿನ ಆಂಪಿ ಥಿಯೇಟರ್ ನಲ್ಲಿ ನಡೆದ ಸಿರಿಧಾನ್ಯ ಹಬ್ಬ -೨೦೨೩ರ ಕಾರ್ಯಕ್ರಮ

ಚಿಕ್ಕಮಗಳೂರು:  ಹೆಚ್ಚು ಇಳುವರಿಗಾಗಿ ರಾಸಾಯನಿಕ ಗೊಬ್ಬರ, ಕೀಟ ನಾಶಕ ಬಳಸುತ್ತಿರುವುದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಿರಿಧಾನ್ಯ ಬಳಸುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ  ತಿಳಿಸಿದರು.

ನಗರದ ಎಐಟಿ ಕಾಲೇಜಿನ ಆಂಪಿ ಥಿಯೇಟರ್ ನಲ್ಲಿ ನಡೆದ ಸಿರಿಧಾನ್ಯ ಹಬ್ಬ -೨೦೨೩ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಉತ್ಪಾದನೆ ಮಾಡುವಂತೆ ಪ್ರೋತ್ಸಾಹ ಕೊಡಬೇಕಾದ ಅವಶ್ಯಕತೆ ಇದೆ. ಗ್ರಾಹಕರೂ ಕೂಡ ಹೆಚ್ಚು ಸಿರಿಧಾನ್ಯ ಬಳಸುವ ಮೂಲಕ ಬೆಳೆಯುವವರಿಗೆ ಉತ್ತೇಜನ ಕೊಡಬೇಕು ಎಂದು ಮನವಿ ಮಾಡಿದರು.

ಸಿರಿಧಾನ್ಯ ಹೆಚ್ಚು ಬಳಸುವುದರಿಂದ ಲಾಭವಾಗುವುದು ಅದನ್ನು ಬಳಸುವವರಿಗೆ. ೪೦ ವರ್ಷಗಳ ಹಿಂದಿನ ಜನರ ಆರೋಗ್ಯ ಹಾಗೂ ಅವರ ಜೀವನ ಶೈಲಿಯನ್ನು ನೋಡಿದರೆ ಇಂದು ಸಿರಿಧಾನ್ಯಕ್ಕೆ ಹೆಚ್ಚು ಮಹತ್ವ ಕೊಡಬೇಕಿದೆ ಎನ್ನುವುದು ತಿಳಿಯಲಿದೆ ಎಂದರು.

ಕಡಿಮೆ ಮಳೆ ಬರುವ ಪ್ರದ್ರೇಶದಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳೆಯುವ ಪದಾರ್ಥಗಳೆಂದರೆ ಸಿರಿಧಾನ್ಯ ಬೆಳೆಗಳಾಗಿವೆ. ರಾಗಿಯನ್ನು  ಹೆಚ್ಚಾಗಿ ಉಪಯೋಗಿಸುವುದರಿಂದ ಸಕ್ಕರೆ ಖಾಯಿಲೆ ಬಳಿಗೂ ಸುಳಿಯುತ್ತಿರಲಿಲ್ಲ, ಕೃಷಿಯನ್ನೇ ಅವಲಂಭಿಸಿದ ಏಕೈಕ ದೇಶ ಇದ್ದರೆ ಅದು ಭಾರತ. ದೇಶದಲ್ಲಿ ಸತತವಾಗಿ ಎರಡು ವರ್ಷ ಬರಗಾಲ ಬಂದರೂ ದೇಶದ ಜನ ಎಂದೂ ಉಪವಾಸ ಇಲ್ಲ. ಆ ಒಂದು ಶಕ್ತಿ ನಮ್ಮ ದೇಶದ ರೈತರಿಗಿದೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಸಿರಿಧಾನ್ಯ ಬಳಕೆಯಿಂದಾಗಿ ನಮಗೆ ಮೂರು ರೀತಿಯ ಉಪಯೋಗಸಿಗುತ್ತದೆ. ಸಿರಿಧಾನ್ಯ ಒಂದು ಆರೋಗ್ಯಕರ ಪದಾರ್ಥವಾಗಿದ್ದು, ಹವಾಮಾನ ವೈಪರೀತ್ಯದಲ್ಲೂ ರೈತರ ಕೈ ಹಿಡಿಯುವ ಬೆಳೆಯಾಗಿದೆ. ಪ್ರಪಂಚದಾದ್ಯಂತ ಆರೋಗ್ಯಕ್ಕಾಗಿ ಬೆಲೆಗೆ ಮಹತ್ವ ಕೊಡದೆ ಖರೀದಿಸುವ ಪದಾರ್ಥವಾಗಿದೆ ಎಂದರು.

ಇಂತಹ ಸಿರಿಧಾನ್ಯ ಪದಾರ್ಥಗಳು ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಉಪಯುಕ್ತವಾಗಿರುವುದರಿಂದ ಸಿರಿಧಾನ್ಯ ಬಳಕೆಯ ಪ್ರಮಾಣ ಹೆಚ್ಚಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನರೇಂದ್ರ ಬಿ.ಸಿ., ಎ.ಐ.ಟಿ. ಕಾಲೇಜಿನ ಪ್ರಾಂಶುಪಾಲರು ಜೈದೇವ್, ವಿವಿಧ  ತಾಲ್ಲೂಕುಗಳ ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷರುಗಳು ಹಾಗೂ ರೈತ ಸಂಘದ ಮುಖಂಡರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Cereal Festival-2023 program held at Amp Theater of AIT College

About Author

Leave a Reply

Your email address will not be published. Required fields are marked *

You may have missed