September 8, 2024

ಸಿ.ಅಶ್ವತ್ಥ್ ಸ್ವರ ಸಂಯೋಜಿಸಿದ ಚಿತ್ರಗೀತೆಗಳ ‘ಇದು ಎಂಥಾ ಲೋಕವಯ್ಯ’ ಗಾಯನ ಕಾರ್ಯಕ್ರಮ

0
‘ಇದು ಎಂಥಾ ಲೋಕವಯ್ಯ’ ಗಾಯನ ಕಾರ್ಯಕ್ರಮ

‘ಇದು ಎಂಥಾ ಲೋಕವಯ್ಯ’ ಗಾಯನ ಕಾರ್ಯಕ್ರಮ

ಚಿಕ್ಕಮಗಳೂರು: ಊರು, ಮನೆಯಲ್ಲಿ ಒಂದು ಚಟುವಟಿಕೆ ಇರುವಲ್ಲಿ ಒಂದಲ್ಲ ಒಂದು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು; ಹಾಗಿದ್ದರೆ ಮಾತ್ರ ಸಮಾನ ಆಸಕ್ತರಿಗೆ ರಂಜನೆಯ ಜೊತೆಗೆ ಪರಸ್ಪರ ಭೇಟಿಗೆ ಅವಕಾಶವಾಗುತ್ತದೆ ಎಂದು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ನಿರ್ದೇಶಕಿ ಹಾಗೂ ಸಂಜೀವಿನಿ ವಿದ್ಯಾಸಂಸ್ಥೆ ಅಧ್ಯಕ್ಷೆ ಎಸ್.ಶಾಂತಕುಮಾರಿ ಹೇಳಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಕರ್ನಾಟಕ sಸುಗಮ ಸಂಗೀತ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಬಸವನಹಳ್ಳಿಯ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಖ್ಯಾತ ಗಾಯಕ ಡಾ.ಸಿ.ಅಶ್ವತ್ಥ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸಿ.ಅಶ್ವತ್ಥ್ ಸ್ವರ ಸಂಯೋಜಿಸಿದ ಚಿತ್ರಗೀತೆಗಳ ‘ಇದು ಎಂಥಾ ಲೋಕವಯ್ಯ’ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟ್ರಸ್ಟ್ ಪ್ರತೀ ತಿಂಗಳು ಆಸಕ್ತ ಕಲಾಭಿಮಾನಿಗಳ ಅಭಿರುಚಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುತ್ತಾ ಇದೀಗ ೯೬ನೇ ಗಾನಯಾನ ಸರಣಿಯನ್ನು ನಡೆಸುತ್ತಿರುವ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಸಾಧನೆ ಅಮೋಘವಾಗಿದೆ. ಮುಂದಿನ ಮೇ ತಿಂಗಳಿನಲ್ಲಿ ೧೦೦ನೇ ಸರಣಿ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಸಂಘಟಕರು ತಿಳಿಸಿದ್ದು, ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಪೂರ್ವಿ ತಂಡದ ಮುಖ್ಯಸ್ಥ ಎಂ.ಎಸ್.ಸುಧೀರ್ ಅವರ ಸಾಧನೆ ವಿಶೇಷವಾದದ್ದು ಎಂದರು.

ನಿವೃತ್ತ ಪ್ರಾಚಾರ್ಯ, ಲಯನ್ಸ್ ಸಂಸ್ಥೆಯ ಎಸ್.ಆರ್.ವೈದ್ಯ ಮಾತನಾಡಿ, ಡಾ.ಸಿ.ಅಶ್ವತ್ಥ್ ಅವರ ಸವಿನೆನಪಿಗಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರ ಸ್ಮರಣೆ ಮಾಡುತ್ತಿರುವುದು ವಿಶೇಷ. ಅವರು ೧೨ ವರ್ಷಗಳ ಕಾಲ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿ ಮಹತ್ವದ ಕೊಡುಗೆ ನೀಡಿದ್ದಾರೆ. ಎಲ್.ವೈದ್ಯನಾಥನ್ ಅವರ ಜೊತೆಗೂಡಿ ಕಾಕನಕೋಟೆ ಚಿತ್ರಕ್ಕೆ ಸಂಗೀತ ಸ್ವರ ಸಂಯೋಜನೆ ಮಾಡಿದ್ದಾರೆ.

ತದನಂತರ ಸ್ಪಂದನ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಸಂಗೀತ ಸಂಯೋಜಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಸಂಗೀತಕ್ಕೆ ಸಾಹಿತ್ಯವಿರಬೇಕು. ಸಾಹಿತ್ಯದ ಜೊತೆಗೆ ಗಾಯನ ಇರಬೇಕು. ಗಾಯನಕ್ಕೆ ಗೇಯತೆ ಇರಬೇಕು ಎನ್ನುವುದು ಅವರ ಸಿದ್ಧಾಂತ. ಸಿ.ಅಶ್ವತ್ಥ್ ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಮೇಲೆ ಭಾವವಿಲ್ಲದ ಸಂಗೀತ ಸಂಗೀತವೇ ಅಲ್ಲ ಎಂದಿದ್ದರು. ಹಾಗಾಗಿಯೇ ಅವರು ಭಾವಪ್ರಧಾನವಾದ ಗೀತೆಗಳನ್ನು ಕನ್ನಡ ಸಂಗೀತ ಲೋಕಕ್ಕೆ ಪರಿಚಯಿಸಿದರು ಎಂದರು.

ಕೇವಲ ೧೨ ವರ್ಷ ಕಾಲ ಸಂಗೀತ ಕ್ಷೇತ್ರದಲ್ಲಿ ಸಂಭ್ರಮಿಸಿದ ಅಶ್ವತ್ಥ್ ಅವರು ಹಾಡಿದ ರೈತಗೀತೆ ರಾಷ್ಟ್ರಗೀತೆಯಾಗಿ ಪರಿಗಣಿತವಾಗಿದೆ. ಅದನ್ನು ಅಷ್ಟೊಂದು ಭಾವಪೂರ್ಣವಾಗಿ ಹಾಡಿರುವುದೇ ಇದಕ್ಕೆ ಕಾರಣ. ಸಂತ ಶಿಶುನಾಳ ಷರೀಫರ ಗೀತೆಗಳನ್ನು ಕೂಡ ಅಷ್ಟೇ ಭಾವಪೂರ್ಣವಾಗಿ ಹಾಡಿದ್ದರಿಂದ ಇಂದು ಅವು ಜನಮಾನಸದಲ್ಲುಳಿದಿವೆ ಎಂದು ಹೇಳಿದರು.

ಅಶ್ವತ್ಥ್ ನುಡಿನಮನವನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಮಾತನಾಡಿ, ಡಾ.ಸಿ.ಅಶ್ವತ್ಥ್ ಅವರು ಅದೆಷ್ಟೋ ಅಜ್ಞಾತ ಕವಿಗಳನ್ನು, ಅವರ ಕಾವ್ಯಗಳನ್ನು, ಭಾವನೆಗಳನ್ನು ಸ್ವರ ಸಂಯೋಜನೆಯ ಮೂಲಕ ನಾಡಿನ ಮನೆ, ಮನಗಳಿಗೆ ತಲುಪಿಸಿದವರು ಎಂದು ಬಣ್ಣಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವೂ ಇಂದೆ. ಕುವೆಂಪು ಅವರ ಗೀತೆಗಳೆಂದರೆ ಗಾಯಕ ಶಿವಮೊಗ್ಗದ ಸುಬ್ಬಣ್ಣ ನೆನಪಾಗುತ್ತಾರೆ. ಸುಬ್ಬಣ್ಣ ಅವರ ಅದೆಷ್ಟೋ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿದ ಕೀರ್ತಿ ಡಾ.ಸಿ.ಅಶ್ವತ್ಥ್ ಅವರದು. ಅವರು ಬೆಳೆಸಿದ ಅನೇಕ ಪ್ರತಿಭೆಗಳು ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಬೆಳೆಯುತ್ತಿರುವುದು ವಿಶೇಷ ಎಂದು ಹೇಳಿದರು.

ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಡಾ.ಸಿ.ಅಶ್ವತ್ಥ್ ಅವರಲ್ಲಿದ್ದ ಜೀವನೋತ್ಸಾಹ ಅವರನ್ನು ಅಷ್ಟೊಂದು ಮೇಲುಸ್ತರಕ್ಕೆ ಕೊಂಡೊಯ್ದಿತು. ಕನ್ನಡ ನಾಡು ಕಂಡ ಶ್ರೇಷ್ಟ ಕವಿ ಕುವೆಂಪು ಅವರ ಜನ್ಮದಿನವೂ ಇಂದೇ ಆಗಿದ್ದು, ಅವರು ನೀಡಿದ ವಿಶ್ವಮಾನವ ಸಂದೇಶ ಇಡೀ ಪ್ರಪಂಚಕ್ಕೆ ಬೆಳಕನ್ನು ಕೊಟ್ಟಿದೆ ಎಂದರು.

ಶಾಂತಾ ವೈದ್ಯ ಕಾರ್ಯಕ್ರಮದಲ್ಲಿದ್ದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಮುಖ್ಯಸ್ಥ ಎಂ.ಎಸ್.ಸುಧೀರ್ ಸ್ವಾಗತ, ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಣೆ, ಗಾಯಕ ರಾಯನಾಯಕ ವಂದನಾರ್ಪಣೆ ನೆರವೇರಿಸಿದರು.

ಗಾಯಕರಾದ ಸುಧೀರ್ ಎಂಎಸ್. ಸಾರಥ್ಯದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ರಾಯನಾಯಕ್, ಸುರೇಂದ್ರ ನಾಯ್ಕ್ ಡಿ., ದರ್ಶನ್, ದೀಪಕ್ ಪಿ.ಎಸ್., ಚೇತನ್ ರಾಮ್, ರೂಪಾ ಅಶ್ವಿನ್, ಅನುಷ, ಪೂಜ್ಯ ಎಂ., ಲಾಲಿತ್ಯ ಅಣ್ವೇಕರ್, ಪಂಚಮಿ ಚಂದ್ರಶೇಖರ್ ಹಾಗೂ ಪೃಥ್ವಿಶ್ರೀ ಎಸ್.ಕೆ. ಡಾ.ಸಿ.ಅಶ್ವತ್ಥ್ ಅವರ ಗೀತೆಗಳಿಗೆ ಧ್ವನಿಯಾಗಿ ರಂಜಿಸಿದರು.

‘Itu Entha Lokavayya’ singing program

About Author

Leave a Reply

Your email address will not be published. Required fields are marked *

You may have missed