September 8, 2024

ಉಪ ವಿಭಾಗಾಧಿಕಾರಿ ರಾಜೇಶ್ ಬೀಳ್ಕೊಡುಗೆ ಸಮಾರಂಭ

0
ರಾಜೇಶ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭ

ರಾಜೇಶ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭ

ಚಿಕ್ಕಮಗಳೂರು: ಉಪ ವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಅವರ ಕರ್ತವ್ಯ ನಿಷ್ಠೆಯಿಂದಾಗಿ ನಮ್ಮಲ್ಲಿ ಸಾಕಷ್ಟು ತೊಡಕುಗಳ ನಡುವೆಯೂ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್ ತಿಳಿಸಿದರು.

ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಜಿ.ಪಂ.ಸಭಾಂಗಣದಲ್ಲಿ ರಾಜೇಶ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳಿಗೆ ಎಡ, ಬಲ ಕೈಗಳ ಹಾಗೆ ಉಪ ವಿಭಾಗಾಧಿಕಾರಿಗಳು ಪಾತ್ರ ವಹಿಸುತ್ತಾರೆ. ಈ ವಿಚಾರದಲ್ಲಿ ಎಸಿಗಳಾದ ರಾಜೇಶ್ ಮತ್ತು ಕಾಂತರಾಜ್ ಇಬ್ಬರೂ ಸಮಯಕ್ಕೆ ಸರಿಯಾಗಿ ಅಂಕಿ ಆಂಶಗಳು, ಮಾಹಿತಿಗಳನ್ನು ಸಿದ್ಧಪಡಿಸಿ ಸಮರ್ಪಕವಾಗಿ ಕಡತಗಳನ್ನು ಸಲ್ಲಿಸಿದ್ದಾರೆ. ಇದರಿಂದ ನಮ್ಮ ಕೆಲಸವೂ ಒಂದಷ್ಟು ಸುಲಭವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಭಿನಂದಿಸುತ್ತೇವೆ ಎಂದರು.

ನಕಾರಾತ್ಮಕ ಸಮಸ್ಯೆಗಳಿವೆ ಎಂದೆಲ್ಲ ಸಬೂಬು ಹೇಳುವವರು ಕೆಲಸ ಮಾಡಲಾಗದವರು. ಆದರೆ ರಾಜೇಶ್ ಅವರು ಸೇನೆಯಲ್ಲಿ ಕೆಲಸ ಮಾಡಿದವರು, ಎಸಿಯಾಗಿಯೂ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಎಲ್ಲಾ ಕಡತಗಳು ನಿಯಮಾನುಸಾರ ಬರುತ್ತಾ ಹೋದರೆ ಜಿಲ್ಲಾಧಿಕಾರಿಗಳ ಕೆಲಸವೂ ಅಷ್ಟೇ ಸುಲಭವಾಗುತ್ತಾ ಹೋಗುತ್ತದೆ ಎಂದರು.

ಜಿ.ಪಂ. ಸಿಇಓ ಡಾ.ಗೋಪಾಲಕೃಷ್ಣ ಮಾತನಾಡಿ ಕಳೆದ ವರ್ಷ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳ ಪೈಕಿ ಈ ಜಿಲ್ಲೆಯಲ್ಲೇ ಉಳಿದುಕೊಂಡ ಕೊನೆಯ ಕೊಂಡಿ ಉಪ ವಿಭಾಗಾಧಿಕಾರಿ ರಾಜೇಶ್ ಅವರಾಗಿದ್ದರು. ಭೂ ಸಂಬಂಧಿ ಪ್ರಕರಣಗಳು, ಸ್ಥಳೀಯ ಸಮಸ್ಯೆಗಳ ವಿಚಾರದಲ್ಲಿ ಹಳೆಯ ಹಾಗೂ ಹೊಸ ಅಧಿಕಾರಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದರು ಎಂದರು.

ರಾಜೇಶ್ ಅವರು ೧೬ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದ ಹಿನ್ನೆಲೆಯಲ್ಲಿ ಅವರ ಮಾತುಗಳು ಕೆಲವರಿಗೆ ಒರಟು ಎನ್ನಿಸಿರಬಹುದು. ಆದರೆ ಅವರಲ್ಲಿ ಒಳ್ಳೆಯದೇನಾದರೂ ಸಾಧಿಸಬೇಕು ಎನ್ನುವ ಉದ್ದೇಶ ಇತ್ತು. ಇನ್ನೂ ಸ್ವಲ್ಪ ದಿನಗಳ ಕಾಲ ಅವರು ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡಬೇಕಿತ್ತು. ಅವರು ದಕ್ಷ ಅಧಿಕಾರಿ ಅವರು ನಮಗೆ ಬೇಕು ಎನ್ನುವ ಒತ್ತಾಯಗಳು ಸಹ ಕೇಳಿಬರುತ್ತಿವೆ. ಅಂತಹ ಅಭಿಪ್ರಾಯ ಬರುವಂತೆ ಕೆಲಸ ಮಾಡಿದ್ದಾರೆ ಎಂದರು.

ನಿರ್ಗಮಿತ ಎಸಿ ಎಚ್.ಡಿ.ರಾಜೇಶ್ ಮಾತನಾಡಿ ಅಧಿಕಾರಿಗಳಿಗೆ ಸ್ಥಳ ಮತ್ತು ಸ್ಥಾನ ಮುಖ್ಯವಲ್ಲ. ನಾವು ಕೆಲಸ ಮಾಡುವ ವಾತಾವರಣ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಸುತ್ತಮುತ್ತಲಿನ ಅಧಿಕಾರಿ ವರ್ಗದವರ ಸಹಕಾರ, ನಮಗೆ ಕೆಲಸ ಮಾಡಲು ಹೇಗೆ ಅವಕಾಶ ಸಿಗುತ್ತದೆ. ನಾವು ಸರಿಯಾದ ದಾರಿಯಲ್ಲಿ ಹೋಗಲು ಅವಕಾಶ ಇದೆಯೋ ಇಲ್ಲವೋ ಇದೆಲ್ಲವೂ ಮುಖ್ಯವಾಗುತ್ತದೆ. ಆ ರೀತಿಯ ವಾತಾವರಣ ಎಲ್ಲಿದೆ ಅಲ್ಲಿ ಕೆಲಸ ಮಾಡುವುದು ಉತ್ತಮ ಎನ್ನುವುದು ನನ್ನ ಭಾವನೆ ಎಂದರು.

ಮೈಸೂರು ಪಾಲಿಕೆಯಲ್ಲಿ ಕೆಲಸ ಮಾಡುವಾಗ ಎಷ್ಟು ಮಟ್ಟಿನ ವಾತಾವರಣ ಕಲುಷಿತವಾಗಿತ್ತೆಂದರೆ, ಆರೇ ತಿಂಗಳಲ್ಲಿ ಸ್ವಯಂ ಆಗಿ ವರ್ಗಾವಣೆ ತೆಗೆದುಕೊಂಡು ದೂರದ ಬಿಜಾಪುರ ಜಿಲ್ಲೆಯ ಸಣ್ಣ ತಾಲ್ಲೂಕಿನ ಇಓ ಹುದ್ದೆಗೆ ವರ್ಗಾವಣೆ ಪಡೆದುಕೊಂಡಿದ್ದೆ ಎಂದರು.

ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತೇನೆ ಎಂದು ನಾನೆಂದಿಗೂ ಅಂದುಕೊಂಡಿರಲಿಲ್ಲ. ಬಡ್ತಿ ಸಿಕ್ಕಿದ ಸಂದರ್ಭದಲ್ಲಿ ಇಂತಹದ್ದೇ ಹುದ್ದೆ ಬೇಕು ಎಂದು ನಾನು ಪ್ರಯತ್ನಿಸಿರಲಿಲ್ಲ. ಇಂದಿನ ಪೈಪೋಟಿಯಲ್ಲಿ ಎಸಿ ಹುದ್ದೆ ಸಿಗುತ್ತದೆ ಎನ್ನುವ ಭರವಸೆಯೂ ಇರಲಿಲ್ಲ. ಆದರೂ ಸರ್ಕಾರ ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದರು.

ನೂತನ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್, ತಹಸಿಲ್ದಾರ್ ಸುಮಂತ್, ಇತರರು ಇದ್ದರು.

Deputy Divisional Officer Rajesh Farewell Ceremony

About Author

Leave a Reply

Your email address will not be published. Required fields are marked *

You may have missed