September 19, 2024

ಅಪರಾಧಿಗಳ ರಕ್ಷಣೆಗೆ ಮುಂದಾಗಿರುವ ಮಾಜಿ ಶಾಸಕ ಸಿ.ಟಿ.ರವಿ

0
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ

ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ

ಚಿಕ್ಕಮಗಳೂರು:  ಕ್ರಿಮಿನಲ್ ಹಿನ್ನೆಲೆಯುಳ್ಳ ಅಪರಾಧಿಗಳನ್ನು ರಕ್ಷಣೆ ಮಾಡಲು ಮುಂದಾಗಿರುವ ಮಾಜಿ ಶಾಸಕ ಸಿ.ಟಿ ರವಿ ಅವರ ಕ್ರಮವನ್ನು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಖಂಡಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ರಾಮಭಕ್ತ, ಕರಸೇವಕ ಎಂದು ಹೇಳಿಕೊಂಡಿರುವ ಶ್ರೀಕಾಂತ ಪೂಜಾರಿ ಮೇಲೆ ಸುಮಾರು ೧೬ ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಆದ್ದರಿಂದ ಆತನ ಮೇಲೆ ಕೇಸು ದಾಖಲಾಗಿವೆ. ಕಾನೂನಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡರು ಅದುತಪ್ಪು. ಅದನ್ನು ಸಮರ್ಥನೆ ಮಾಡಿಕೊಳ್ಳಲು ಹೊರಟಿರುವ ಮಾಜಿಶಾಸಕ ಸಿ.ಟಿ.ರವಿ ನಡೆ ದುರದೃಷ್ಟಕರ ಎಂದು ಹೇಳಿದ್ದಾರೆ.

ಗಲಭೆ, ದೊಂಬಿ ಕೇಸ್ ಹೊರತಾಗಿಯೂ, ಶ್ರೀಕಾಂತ್ ಪೂಜಾರಿ ವಿರುದ್ಧ ಜೂಜು ಹಾಗೂ ಅಕ್ರಮ ಮಧ್ಯ ಮಾರಾಟ ಕುರಿತಂತೆಕೆಲವು ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಕೇಸ್‌ಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣಕ್ಕಾಗಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿಯಾಗಿದ್ದು, ಈತನ ರಕ್ಷಣೆಗೆ ನಿಂತಿರುವುದು ಹಾಸ್ಯಸ್ಪದ ಎಂದು ಹೇಳಿದ್ದಾರೆ.

ಮಾಜಿ ಶಾಸಕರು ರಾಮಭಕ್ತ, ಕರಸೇವಕನನ್ನು ಬಿಡುಗಡೆ ಮಾಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ಒಬ್ಬಂಟಿಯಾಗಿ ಪ್ರತಿಭಟನೆ ಮಾಡಿರುವುದನ್ನು ನೋಡಿದರೆ, ಮಾಜಿ ಶಾಸಕರು ಅಪರಾಧಿಗಳನ್ನು ರಕ್ಷಣೆ ಮಾಡಲು ಹೊರಟಂತೆ ಕಾಣುತ್ತದೆ. ಹಿಂದೂ ಎಂದು ಹೆಸರೇಳುವ ಇವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.

ರಾಜ್ಯದ ಎಲ್ಲಾ ಸಮ ಸಮಾಜದ ಜನರನ್ನು ಪ್ರೀತಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧೩೫ ಕ್ಕೂ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಆದರೆ ಮಾಜಿ ಶಾಸಕರು ಹಿಂದೂ ಹೆಸರೇಳಿಕೊಂಡು ಸೋತು ಸುಣ್ಣವಾಗಿದ್ದಾರೆ ಎಂದು ಕುಟುಕಿದ್ದಾರೆ.

ಧರ್ಮದ ಹೆಸರಿನಲ್ಲಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಯನ್ನು ಶಾಶ್ವತವಾಗಿ ವಿರೋಧ ಪಕ್ಷವಾಗಿ ಕೂರಿಸುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಂಡು ಇಂತಹ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವವರನ್ನು ಬೆಂಬಲಿಸುವುದು ಸರಿಯಲ್ಲ ಎಂದಿದ್ದಾರೆ.

ಭಾರತ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನ ಮತ್ತು ಕಾನೂನನ್ನು ರಕ್ಷಣೆ ಮಾಡುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಸಮಾಜದ ಹೆಸರಿನಲ್ಲಿ ದೇಶ ದ್ರೋಹಿ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ಮಾಜಿ ಶಾಸಕ ಸಿ.ಟಿ.ರವಿ ಅವರು ಅಪರಾಧಿಗಳ ರಕ್ಷಣೆಗೆ ಮುಂದಾಗಬಾರದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ತಕ್ಕಪಾಠವನ್ನು ಕಲಿಸಿದ್ದು, ಇನ್ನಾದರೂ ಮಾಜಿ ಶಾಸಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

Ex-MLA C.T.Ravi who has come forward to protect the criminals

About Author

Leave a Reply

Your email address will not be published. Required fields are marked *

You may have missed