September 16, 2024

ಕಲ್ಲು ಗಣಿ ಗುತ್ತಿಗೆಗಳಲ್ಲಿ ಬಳಸುವ ಸ್ಪೋಟಕ ಡಿಜಿಎಂಎಸ್ ನಿಯಮಾನುಸಾರ ಬಳಕೆ ಮಾಡಿ

0
ಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ, ಬಳಕೆ ಹಾಗೂ ಸಾಮಾನ್ಯ ಸುರಕ್ಷತೆಯ ಕುರಿತ ಕಾರ್ಯಾಗಾರ

ಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ, ಬಳಕೆ ಹಾಗೂ ಸಾಮಾನ್ಯ ಸುರಕ್ಷತೆಯ ಕುರಿತ ಕಾರ್ಯಾಗಾರ

ಚಿಕ್ಕಮಗಳೂರು: ಕಲ್ಲು ಗಣಿ ಗುತ್ತಿಗೆಗಳಲ್ಲಿ ಬಳಸುವ ಸ್ಪೋಟಕಗಳನ್ನು ಡಿಜಿಎಂಎಸ್ ನಿಯಮಾನುಸಾರ ಬಳಕೆ ಮಾಡಿ ಕಲ್ಲು ಉತ್ಪನ್ನಗಳನ್ನು ಉತ್ಪಾದಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಗಣಿ ಸುರಕ್ಷತಾ ನಿರ್ದೇಶನಾಲಯ, ಭಾರತ ಸರ್ಕಾರ ಮತ್ತು ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಿನ್ನೆ (ಮಂಗಳವಾರ) ಜಿಲ್ಲಾ ವ್ಯಾಪ್ತಿಯ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ, ಬಳಕೆ ಹಾಗೂ ಸಾಮಾನ್ಯ ಸುರಕ್ಷತೆಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ರೂಪಿಸಿರುವ ನಿಯಮ ಹಾಗೂ ಸುರಕ್ಷತೆಯ ಕುರಿತು ವಹಿಸಬೇಕಾದ ಕಳಜಿ ಬಗ್ಗೆ ಜಾಗೃತಿ ಇರಬೇಕು ಎಂದ ಅವರು ಕಲ್ಲು ಗಣಿಗಳಲ್ಲಿ ಅಗತ್ಯ ಸುರಕ್ಷತಾ ವಿಧಾನಗಳನ್ನು ಬಳಸುವಂತೆ ತಿಳಿಸಿದ ಅವರು ಕಲ್ಲು ಗಣಿಗಳು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ನಿರ್ಮಾಣ ವಸ್ತುಗಳನ್ನು ಪೂರೈಸುವಂತೆ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾತನಾಡಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು ೧೧೦ ಗಣಿ ಗುತ್ತಿಗೆಗಳು, ೩ ಮಾಗ್‌ಜಿನ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಕಲ್ಲು ಗಣಿ ಗುತ್ತಿಗೆಗಳಲ್ಲಿ ಸಂಭವಿಸಬಹುದಾದ ಸ್ಪೋಟಕಗಳ ಅಪಘಾತಗಳನ್ನು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಕಲ್ಲು ಗಣಿ ಗುತ್ತಿಗೆದಾರರಿಗೆ ಸೂಚಿಸಿದರು.

ಬೆಂಗಳೂರಿನ ಕಲ್ಲು ಗಣಿ ಇಲಾಖೆ ನಿರ್ದೇಶಕ ಮುರಳೀಧರ್ ಬಿದರಿ ಉಪನ್ಯಾಸ ನೀಡಿ ಗುತ್ತಿಗೆದಾರರು ಮೈನ್ ಕೋಡ್, ಲೀನ್ ನಂಬರ್ ಪಡೆಯುವುದು ಮತ್ತು ಸ್ಪೋಟಕಗಳನ್ನು ಗುತ್ತಿಗೆಗಳಲ್ಲಿ ಬಳಸುವ ಪರಿಣಿತಿ ಹೊಂದಿರುವ ಸೆಕೆಂಡ್ ಕ್ಲಾಸ್ ಮೈನ್ಸ್ ಮ್ಯಾನೇಜರ್ ಮತ್ತು ಫೋರ್ ಮೆನ್‌ಗಳನ್ನು ನೇಮಿಸಿಕೊಳ್ಳಬೇಕು. ಸ್ಪೋಟಕ ಕಾಯಿದೆ ೨೦೦೮ ರ ಕಲಂ ೪೭ ರಂತೆ ಸ್ಪೋಟಕ ಶೇಖರಣಾ ಘಟಕಗಳಿಂದ ಬಳಕೆ ಮಾಡುವ ಪ್ರದೇಶಕ್ಕೆ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರದೇಶದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುತ್ತದೆ.

ಸ್ಪೋಟಕ ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳ ನಿರಾಪೇಕ್ಷಣಾ ಪತ್ರ ಕಡ್ಡಾಯವಾಗಿರುತ್ತದೆ. ಸ್ಪೋಟಕ ಸರಬರಾಜುದಾರರು ಸ್ಪೋಟಕಗಳನ್ನು ಸಂಗ್ರಹಣಾ ಘಟಕಗಳಿಂದ ಬಳಕೆ ಮಾಡುವ ಪ್ರದೇಶಕ್ಕೆ ಸಾಗಾಣಿಕೆ ನಡೆಸಲು ಸರಬರಾಜುದಾರರ ವಿವರ, ಸ್ಪೋಟಕಗಳ ಪ್ರಮಾಣ, ಬಳಕೆದಾರರ ವಿವರ ಮತ್ತು ಇತರೆ ಅಗತ್ಯ ಮಾಹಿತಿಗಳನ್ನೊಳಗೊಂಡ ಫಾರಂ ಆರ್.ಇ(೧೩) ಹೊಂದಿರುವುದು ಅಗತ್ಯವಾಗಿರುತ್ತದೆ. ಸ್ಪೋಟಕಗಳನ್ನು ಬಳಕೆದಾರರಿಗೆ ವಿತರಣೆ ಮಾಡುವ ಪೂರ್ವದಲ್ಲಿ ಹಾಗೂ ಬಳಕೆಯಾದ ನಂತರದಲ್ಲಿ ಸಂಬಂಧಪಟ್ಟ ಕಲ್ಲು ಗಣಿ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಮಹಜರ್ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ವಿಂದ್ಯಾ, ಡಿಜಿಎಂಎಸ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಕಲ್ಲು ಗಣಿ ಗುತ್ತಿಗೆದಾರರು ಹಾಜರಿದ್ದರು.

Explosives used in stone mining contracts should be used as per DGMS rules

About Author

Leave a Reply

Your email address will not be published. Required fields are marked *