September 19, 2024

ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ರೈತ ಸಂಘ ನಿರ್ಧಾರ

0
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಪ್ರತಿಕಾಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಪ್ರತಿಕಾಗೋಷ್ಠಿ

ಚಿಕ್ಕಮಗಳೂರು: ಪ್ರಸಕ್ತ ವರ್ಷದಲ್ಲಿಯೇ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ರೈತರಿಗೆ ನೀರೊದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಇಂದು ಪ್ರತಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು, ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ರೈತರನ್ನು ಒಳಗೊಂಡ ಸಭೆ ನಡೆಸಿ ಯೋಜನೆ ಕಾಮಗಾರಿ ಮುಕ್ತಾಯಗೊಳಿಸಲು ಇರುವ ಅಡೆತಡೆಗಳನ್ನು ನಿವಾರಿಸಿ ೧೩.೦೮ ಎಕರೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಒದಗಿಸುವಂತೆ ಅಗ್ರಹಿಸಿದರು.

ಈ ಬಗ್ಗೆ ಸಂಘದ ವತಿಯಿಂದ ಸಚಿವರಿಗೆ ಮನವಿ ನೀಡಲಿದ್ದು ನಿಗಧಿತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದರ ಜೊತೆಗೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರ ಮನೆ ಮುಂದೆ ಧರಿಣಿ ನಡೆಸುವುದಾಗಿ ಎಚ್ಚರಿಸಿದರು.

ಸದಾ ಬರಗಾಲಕ್ಕೆ ತುತ್ತಾಗುವ ಮಳಲೂರು, ಕಲ್ಲಹಳ್ಳಿ, ಕಬ್ಬಿಹಳ್ಳಿ, ಸಿರ್ಗಾಪುರ, ಬಿಗ್ಗನಹಳ್ಳಿ, ತಗಡೂರು, ಕದ್ರಿಮಿದ್ರಿ ಗ್ರಾಮಗಳ ಸುಮಾರು ೧೬೦೦ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವುದರ ಜೊತೆಗೆ ಆ ಭಾಗದ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸುವ ಸಲುವಾಗಿ ಮಳಲೂರು ಏತ ನೀರಾವರಿ ಯೋಜನೆಯನ್ನು ರೂಪಿಸಲಾಗಿತ್ತು ಈ ಯೋಜನೆಗೆ ೧೯೯೮ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ ೨೦೦೦ನೇ ಇಸವಿಯಲ್ಲಿ ೨.೫೨ ಕೋಟಿ ರೂಗಳ ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಎಂದರು.

ಈಗಾಗಲೇ ಜಾಕ್‌ವೆಲ್, ಇಂಟಕ್‌ವೆಲ್, ರೈಸಿಂಗ್‌ಮೇನ್, ಪಂಪ್‌ಹೌಸ್ ಪಂಪ್ ಸೆಟ್ ಅಳವಡಿಕೆ ಹಾಗೂ ಮೊದಲ ಹಂತಕ್ಕೆ ನೀರು ಹರಿಸಲು ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ೧೫ವರ್ಷಗಳು ಕಳೆದಿವೆ ೨ನೇ ಹಂತದಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ ನಾಲೆ ಕಾಮಗಾರಿ ಕುಂಟುತ್ತಾ ಸಾಗಿದೆ ಎಂದು ಆರೋಪಿಸಿದರು.

ಈ ಯೋಜನೆಗೆ ವಶಪಡಿಸಿಕೊಂಡಿರುವ ರೈತರ ಜಮೀನಿಗೆ ನೇರ ಖರೀದಿ ಯೋಜನೆಯಡಿ ಪರಿಹಾರ ಒದಿಗಿಸಲಾಗಿದೆ. ಇನ್ನು ೧೩.೦೮ ಎಕರೆ ಪ್ರದೇಶದ ರೈತರಿಗೆ ನೇರ ಖರೀದಿಗೆ ಒಪ್ಪದಿದ್ದ ಕಾರಣಕ್ಕೆ ಪರಿಹಾರ ನೀಡುವುದು ವಿಳಂಬವಾಗಿದೆ ಎಂದು ಹೇಳಿದರು.

ಕಾಲಕಾಲಕ್ಕೆ ಬದಲಾದ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಬರಿ ರಿವೈಸ್ ಎಸ್ಟಿಮೇಟ್‌ಗಳಲ್ಲಿ ಕಾಲಹರಣ ಮಾಡಿದ್ದು ಬಿಟ್ಟರೆ ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸದಿರುವುದು ದುರ್ದೈವದ ಸಂಗತಿಯಾಗಿದೆ ೨.೫೨ ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾದ ಈ ಯೋಜನೆಗೆ ಈಗ ೨೫ ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ ಮೊದಲ ಹಂತದ ಹಳ್ಳಿಗಳಿಗೆ ಕಳೆದ ೧೦ವರ್ಷಗಳಲ್ಲಿ ನೀರೊದಗಿಸಬಹುದಾಗಿದ್ದರು ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಈ ಯೋಜನೆಯ ಉಪಯೋಗ ರೈತರಿಗೆ ಲಭ್ಯವಾಗಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಬಸವರಾಜು, ರಾಜ್ಯ ಸಮಿತಿ ಸದಸ್ಯ ಕೆ.ಕೆ.ಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಎಂ.ಬಿ., ತಾಲ್ಲೂಕು ಕಾರ್ಯದರ್ಶಿ ಲೋಕೇಶ್ ಹಿರೇಮಗಳೂರು ಹಾಗೂ ಕಾರ್ಯಧ್ಯಕ್ಷ ಮಲ್ಲುಂಡಪ್ಪ ಉಪಸ್ಥಿತರಿದ್ದರು.

Farmers union decision to boycott Lok Sabha elections

About Author

Leave a Reply

Your email address will not be published. Required fields are marked *

You may have missed