September 19, 2024

ರಾಜ ಕಾರಣಿಗಳ ಕೋಮು ಪ್ರಚೋದನೆಗೆ ಒಳಗಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು

0
ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವ

ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವ

ಚಿಕ್ಕಮಗಳೂರು: ಜಿಲ್ಲೆಯಲ್ಲಿನ ತಾಯಂದಿರು ತಮ್ಮ ಮಕ್ಕಳನ್ನು ಯಾವುದೇ ರಾಜ ಕಾರಣಿಗಳ ಕೋಮು ಪ್ರಚೋದನೆಗೆ ಒಳಗಾಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಲೇಖಕ, ಸಾಹಿತಿ ಐ.ಎನ್.ಮುಕುಂದರಾಜ್ ಸಲಹೆ ಮಾಡಿದರು.

ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿಮ್ಮ ಮಕ್ಕಳ ಭವಿಷ್ಯ ಮುಖ್ಯ, ಅವರ ಜೀವನ ಮುಖ್ಯ, ಹಾಗಾಗಿ ಅವರು ಯಾವುದೇ ಪ್ರಚೋದನೆಗಳಿಗೆ, ಯಾವುದೋ ಉಮೇದಿಗೆ ಒಳಗಾಗದಂತೆ ಅವರನ್ನು ಅತ್ಯಂತ ಜಾಗೃತೆ ಯಿಂದ ನೋಡಿಕೊಳ್ಳಬೇಕು ಮತ್ತು ಕನ್ನಡದ ಪರಂಪರೆಗೆ ತಕ್ಕ ಹಾಗೆ ಅವರನ್ನು ಬೆಳೆಸಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರು ನಿಧನರಾದ ನಂತರ ಅವರು ಬದುಕಿದ ರೀತಿಯಲ್ಲಿ, ಬರೆದ ರೀತಿಯಲ್ಲಿ, ಯೋಚಿಸಿದ ರೀತಿಯಲ್ಲಿ ಇರುವಂತಹ ಕವಿಗಳು ಅವರ ಮಟ್ಟದ ಸಾಹಿತಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿಲ್ಲ ಎಂದು ವಿಷಾದಿಸಿದರು.

ಯಾವ ನೆಲದಲ್ಲಿ ಅಲ್ಲಿನ ಜನ ಜಾತ್ಯಾತೀತರಾಗಿರುತ್ತಾರೋ, ಯಾವ ನೆಲದಲ್ಲಿ ಸೌಹಾರ್ದತೆಯ ಸಂಬಂಧವಿರುತ್ತದೋ, ಯಾವ ನೆಲದಲ್ಲಿ ಮಾನವೀಯತೆ ಇರುತ್ತದೆಯೋ, ಅಲ್ಲಿ ಮಾತ್ರ ಕವಿ ಗಳು ಹುಟ್ಟಲು ಸಾಧ್ಯವಾಗುತ್ತದೆ. ಎಲ್ಲಿ ಕೋಮುವಾದ, ಜಾತಿವಾದ ಇರುತ್ತದೆಯೋ ಅಲ್ಲಿ ಕವಿತೆ ಸತ್ತು ಹೋಗುತ್ತದೆ ಎಂದು ಎಚ್ಚರಿಸಿದರು.

ಬೇರೆಯವರ ಧರ್ಮವನ್ನು ನಾವು ಸೈರಣೆ ಮಾಡಿಕೊಂಡಾಗ ಮಾತ್ರ ಅಲ್ಲೊಂದು ಸೃಜನಶೀಲ ಮಾನವೀಯ ಜಗತ್ತು ನಿರ್ಮಾಣವಾಗುತ್ತದೆ. ಮಾನವೀಯ ಮೌಲ್ಯಗಳು ಕಳೆದು ಹೋದ ಜಾಗ ದಲ್ಲಿ ಅಲ್ಲಿನ ತರುಣ, ತರುಣಿಯರ ಸೃಜನಶೀಲ ಪ್ರತಿಭೆ ಬತ್ತಿ ಹೋಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾರದಾ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ, ಯಾವ ದಾರಿಯಲ್ಲಿ ನಾವು ಸಾಗಿದರೆ ನಮ್ಮ ಬದುಕು. ಭವಿಷ್ಯ ಉಜ್ವಲವಾಗುತ್ತದೆ ಎಂಬುದನ್ನು ಇಂದಿನ ಮಕ್ಕಳು ಮೊದಲೇ ಅರಿತು ನಡೆಯಬೇಕು. ಸಾಧನೆ ಮಾಡಬೇಕಾದರೆ ಅಂತ:ಶಕ್ತಿ ಮತ್ತು ಇಚ್ಛಾಶಕ್ತಿಯನ್ನು, ಛಲವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸಂದೇಶಗಳು ಮತ್ತು ಬದುಕು ಇಂದಿನ ಮಕ್ಕಳಿಗೆ ಆದರ್ಶವಾಗಬೇಕು. ಅದರ ಬೆಳಕಿನಡಿಯಲ್ಲಿ ನಮ್ಮ ಮಕ್ಕಳು ಸಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ವಿದ್ಯಾನಿಕೇತನದ ಕಾರ್ಯದರ್ಶಿ ಕೆ.ಸಿ.ಶಂಕರ್, ಶಾಲೆ ಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನೂ ಬೆಳೆ ಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉಪ ಪ್ರಾಂಶುಪಾಲೆ ಶೆಮ್ಮಿ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು.

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗ ಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಹಿತಿ ಜಗದೀಶ್, ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಿ ಹೊನ್ನಾಂಬಿಕೆ, ಶಿಕ್ಷಕರಾದ ವಸುಧಾ, ಬಿಂದು ಉಪಸ್ಥಿತರಿದ್ದರು.

Anniversary at Kuvempu Vidyaniketan School

About Author

Leave a Reply

Your email address will not be published. Required fields are marked *

You may have missed