September 19, 2024
ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ

ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ

ಚಿಕ್ಕಮಗಳೂರು: ತಲತಲಾಂತರದಿಂದ ಬಾಯಿಂದ ಬಾಯಿಗೆ ಹರಿಯುತ್ತಾ ಉಳಿದು ಬಂದಿರುವ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಳಿವಿಲ್ಲ ಎಂದು ಕಡೂರು ಮಾಜಿ ಶಾಸಕ ವೈಎಸ್ ವಿ ದತ್ತ ಹೇಳಿದರು

ಕಡೂರು ತಾಲೂಕಿನ ಯಗಟಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ  ನಡೆದ ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಜಾನಪದ ನಮ್ಮ ಗ್ರಾಮೀಣ ಬದುಕಿನ ಜೀವನಾಡಿ ಮತ್ತು ಪ್ರತೀಕ ಇಂದಿಗೂ ಗ್ರಾಮೀಣರಲ್ಲಿ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಹಾಸು ಹೊಕ್ಕಾಗಿವೆ ದಿನನಿತ್ಯದ ಜೀವನದಲ್ಲಿ ಅದನ್ನು ಅವರು ಆಚರಿಸುತ್ತಿದ್ದಾರೆ ನಮ್ಮ ಗ್ರಾಮ ದೇವತೆಗಳು ಜಾನಪದದ ಪ್ರತಿನಿಧಿಗಳು ದೇವರ ಜೊತೆ ಜಗಳವಾಡುವುದು ಬೈಯುವುದು ಛೇಡಿಸುವ ಶಕ್ತಿ ಇರುವುದು ನಮ್ಮ ಜಾನಪದರಿಗೆ ಮಾತ್ರ ಎಂದರು

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನಿಕತೆಯ ನಾಗಾಲೋಟದಲ್ಲಿ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಮಸುಕಾಗುತ್ತಿದೆಯಾದರೂ ಅದು ಯಾವುದೇ ಕಾರಣಕ್ಕೂ ಅಳಿಯದು ಎಂದು ತಿಳಿಸಿದರು

ಪ್ರಧಾನ ಉಪನ್ಯಾಸ ಮಾಡಿದ ಹಿರಿಯ ಸಾಹಿತಿ ಪ್ರೊ ಕಾಳೇಗೌಡ ನಾಗವಾರ ಜಾನಪದರು ಎಲ್ಲರಿಗೂ ಒಳಿತನ್ನೇ ಬಯಸಿದರು ಜನರು ಯಾವ ರೀತಿಯಲ್ಲಿ ಬದುಕಬೇಕು ಯಾವುದು ತಪ್ಪು ಯಾವುದು ಸರಿ ಸಾಮಾಜಿಕ ಜವಾಬ್ದಾರಿಗಳೇನು ಧಾರ್ಮಿಕ ವೈಜ್ಞಾನಿಕವಾಗಿ ಹೇಗೆ ಜೀವಿಸಬೇಕು ಎಂಬುದನ್ನು ಜಾನಪದ ತಿಳಿಸುತ್ತದೆ ಎಂದು ಹೇಳಿದರು

ಜಾನಪದ ನಮ್ಮ ಮೂಲ ಬೇರು ಅದನ್ನು ಅಭ್ಯಾಸ ಮಾಡಿದಷ್ಟು ನಮ್ಮ ಜ್ಞಾನದ ಮಟ್ಟ ಹೆಚ್ಚಾಗುತ್ತದೆ ಅದೊಂದು ಅನರ್ಘ್ಯ ರತ್ನ ಭಂಡಾರ ಎಂದರು

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಮಾತನಾಡಿ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಜಾನಪದವನ್ನು ಉಳಿಸಿ ಬೆಳೆಸಲು ಜಾನಪದ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ ಅದಕ್ಕಾಗಿ ಜಿಲ್ಲೆ ತಾಲೂಕು ಹೋಬಳಿ ಸಮ್ಮೇಳನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು

ಸಮ್ಮೇಳನಾಧ್ಯಕ್ಷ ಕುಂಕನಾಡು ಓಂಕಾರ ಮೂರ್ತಿ ಮಾತನಾಡಿ ನಮ್ಮ ದೈನಂದಿನ ಬದುಕಿನ ಜೀವನಾಡಿಯಾಗಿರುವ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಆಧುನಿಕತೆಯ ಅಬ್ಬರಕ್ಕೆ ನಶಿಸುತ್ತಿದೆ ಎಂದು ವಿಷಾದಿಸಿದರು

ಜಾನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ ಜಾನಪದ ಸಂಸ್ಕೃತಿ ಅವಗಣನೆಗೆ ಒಳಗಾಗಿದೆ ಅವು ಉಳಿದು ಬೆಳೆಯಬೇಕಾದರೆ ಇಂದಿನ ಯುವ ಪೀಳಿಗೆಗೆ ಅವುಗಳ ಬಗ್ಗೆ ಆಸಕ್ತಿ ಮೂಡಿಸಬೇಕು ಜಾನಪದ ಗೀತೆಗಳು ಯುವಜನತೆಗೆ ದಾರಿದೀಪವಾಗಬೇಕು ಅರ್ಥವಿಲ್ಲದ ಸಾಹಿತ್ಯ ಮತ್ತು ಸಂಗೀತಕ್ಕೆ ಮೈ ಮರೆಯುವ ಬದಲು ನಮ್ಮ ಸಾಂಪ್ರದಾಯಿಕ ಕಲೆ ಗೀತೆಗಳಿಗೆ ಒತ್ತು ನೀಡಬೇಕು ಜಾನಪದವನ್ನು ಜೀವಂತವಾಗಿಡಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು

ಸಮ್ಮೇಳನಕ್ಕೆ ಮುನ್ನ ಸಮ್ಮೇಳನಾಧ್ಯಕ್ಷ ಕುಂಕನಾಡು ಓಂಕಾರ ಮೂರ್ತಿ ಅವರನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ಅಲಂಕೃತ ರಥದಲ್ಲಿ ಮೆರವಣಿಗೆ ಮುಖಾಂತರ ವೇದಿಕೆಗೆ ಕರೆಯಲಾಯಿತು ಜಾನಪದ ಪರಿಕರಗಳ ಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಉದ್ಘಾಟಿಸಿದರು

ಹಿರಿಯ ವೀರಗಾಸೆ ಕಲಾವಿದ ಡಾ ಮಾಳೇನಹಳ್ಳಿ ಬಸಪ್ಪ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಕನ್ನಡ ಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷ ಡಾ ಜೆ.ಪಿ ಕೃಷ್ಣೇಗೌಡ ಎಸ್ ಎಸ್ ವೆಂಕಟೇಶ್ ನಿವೃತ್ತ ತಾಸಿಲ್ದಾರ್ ಡಾ ಲಕ್ಷ್ಮೀನಾರಾಯಣಪ್ಪ ಎಸ್ ಸಿ ಲೋಕೇಶ್ ವೈಎಸ್ ರವಿಪ್ರಕಾಶ್ ಯರದಕೆರೆ ರಾಜಪ್ಪ ಕೋಡಿಹಳ್ಳಿ ಮಹೇಶ್ವರಪ್ಪ ಉಪಸ್ಥಿತರಿದ್ದರು

Taluk level second folk conference

About Author

Leave a Reply

Your email address will not be published. Required fields are marked *

You may have missed