September 19, 2024

ಬಾಲಗಂಗಾಧರನಾಥ ಶ್ರೀಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು

0
ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತೋತ್ಸವ

ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತೋತ್ಸವ

ಚಿಕ್ಕಮಗಳೂರು: ಸುಮಾರು ೨ ಸಾವಿರ ವರ್ಷಗಳ ಇತಿಹಾಸ ಇರುವ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾಗಿ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ೪೦೦ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಖ್ಯಾತ ಮಕ್ಕಳ ವೈದ್ಯ ಡಾ|| ಜೆ.ಪಿ ಕೃಷ್ಣೇಗೌಡ ಹೇಳಿದರು.

ಅವರು ಇಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಏರ್ಪಡಿಸಲಾಗಿದ್ದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಭೈರವೈಕ್ಯ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮರ್ಯಾದ ಪುರುಷ ರಾಮ-ಲಕ್ಷ್ಮಣ ಸೀತೆಯನ್ನು ಹುಡುಕಿಕೊಂಡು ಆದಿಚುಂಚನಗಿರಿ ಮಠಕ್ಕೆ ಬಂದಿದ್ದರೆಂದು ಇತಿಹಾಸ ಹೇಳುತ್ತದೆ. ಆ ಕಾರಣಕ್ಕೆ ಈ ಮಠ ಇಂದಿಗೂ ಪವಿತ್ರವಾದ ಸ್ಥಳವಾಗಿದೆ ಎಂದು ಹೇಳಿದರು.

ಶಿವ ತಪಸ್ಸು ಮಾಡಿ ಭೈರವೇಶ್ವರ, ಮಲ್ಲಿಕಾರ್ಜುನೇಶ್ವರ, ಸಿದ್ದರಾಮೇಶ್ವರ ಹಾಗೂ ಚಂದ್ರಮೌಳೇಶ್ವರ ಸೇರಿದಂತೆ ಪಂಚಲಿಂಗೇಶ್ವರ ಲಿಂಗಗಳನ್ನು ಸ್ಥಾಪನೆ ಮಾಡಿದ್ದರಿಂದ ಇದು ಪವಿತ್ರ ಸ್ಥಳವಾದ ಆದಿಚುಂಚನಗಿರಿ ಮಠವಾಗಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.

ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಮೊದಲು ಮಠದಲ್ಲಿ ಯಾವುದೇ ವಸ್ತುಗಳು ಇಲ್ಲದಿರುವಾಗ ಪ್ರತೀ ಹಳ್ಳಿಗಳಿಗೂ ಹೋಗಿ ದಾನಿಗಳು ನೀಡುವ ದವಸ-ಧಾನ್ಯ ಸಂಗ್ರಹಿಸಿ ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಓರ್ವ ಸ್ವಾಮೀಜಿ ಏಕ ಕಾಲದಲ್ಲಿ ಇಂತದ್ದೊಂದು ದೊಡ್ಡ ಸಾಧನೆ ಮಾಡಿರುವುದು ಜಗತ್ತಿನ ಇತಿಹಾಸದಲ್ಲೇ ಮೊದಲು ಎಂದು ಶ್ಲಾಘಿಸಿದರು.

ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು ಮೂಲಭೂತ ಸೌಕರ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಆರೋಗ್ಯ, ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಹೋರಾಟ ಮಾಡಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದರು.

ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ತಂದೆ-ತಾಯಿ, ಬಂಧು-ಬಳಗ, ಇಟ್ಟ ಗುರಿ ಇವುಗಳನ್ನು ತೊರೆದರೂ ಪರವಾಗಿಲ್ಲ, ಜ್ಞಾನ ನೀಡಿದ ಗುರುವನ್ನು ವ್ಯಕ್ತಿ ಜೀವನದುದ್ದಕ್ಕೂ ಮರೆಯದೆ ಸ್ಮರಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಪೂರಕ, ಪ್ರೇರಕ ಎಂದು ವರ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘವು ಬಡವರ ಹಾಗೂ ಸಮಾಜದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸದಾ ಶ್ರಮಿಸಲು ಬದ್ಧವಾಗಿದೆ ಎಂದು ಹೇಳಿದರು.

ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ವರ್ಷ ಜನ್ಮದಿನವನ್ನು ಸಂಘದ ವತಿಯಿಂದ ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿದ್ದು, ಜಿಲ್ಲೆಯ ಜನಾಂಗದ ಪ್ರಥಮ ಪಿಯುಸಿ ಮತ್ತು ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಒಟ್ಟು ೧೦೩ ವಿದ್ಯಾರ್ಥಿಗಳಿಗೆ ೩,೦೯,೦೦೦ ರೂಗಳ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಶ್ರೀಮತಿ ಲಕ್ಷ್ಮಿ ಕಡಿದಾಳ್ ಮಂಜಪ್ಪನವರ ಅಪೇಕ್ಷೆಯಂತೆ ಅವರು ಕೊಟ್ಟ ಠೇವಣಿ ಹಣಕ್ಕೆ ಬರುವ ಬಡ್ಡಿ ಹಣದಲ್ಲಿ ಪ್ರತೀ ವರ್ಷ ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೌಢ ಶಾಲೆಯ ಜನಾಂಗದ ೬ ವಿದ್ಯಾರ್ಥಿನಿಯರಿಗೆ ತಲಾ ೧ ಸಾವಿರ ರೂ ಪ್ರೋತ್ಸಾಹ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದರು.

ಜೆವಿಎಸ್ ಶಾಲೆಯಲ್ಲಿ ೭ನೇ ತರಗತಿ ಓದಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೂಡಿಗೆರೆ ತಾಲೂಕಿನ ಔಸನ ಗ್ರಾಮದ ಓ.ಎಸ್ ಗೋಪಾಲ್‌ಗೌಡ ಅವರಿಗೆ ಸನ್ಮಾನಿಸಿದ್ದೇವೆ. ಪಶು ವೈದ್ಯಕೀಯ ಕ್ಷೇತ್ರದಲ್ಲಿ ಚಿನ್ನದ ಪದಕ ಪಡೆದಿರುವ ಕುಮಾರಿ ನೈದಿಲೆ ಇವರಿಗೆ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಂಎಸ್ಸಿ ಯಲ್ಲಿ ಚಿನ್ನದ ಪದಕ ಪಡೆದಿರುವ ಕು. ಆಕರ್ಷ ಎ.ಜೆ ಇವರಿಗೆ, ರಾಷ್ಟ್ರೀಯ ಯೋಜನೆ ಸ್ವಯಂ ಸೇವಕಿ ಕು. ಮಂದಿರ.ಎಂ ಇವರಿಗೆ, ಪವನ್ ಜೆ.ಎಸ್, ಅಭಿಲಾಷ್, ಕುಮಾರಿ ಅನುಶ್ರೇಯ, ಅಂತರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ಕುಮಾರಿ ದ್ವೈತ ಇವರುಗಳನ್ನು ಸನ್ಮಾನಿಸಲಾಗಿದ್ದು, ಒಟ್ಟು ೧೦೩ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿರ್ದೇಶಕರುಗಳಾದ ಕೆ.ಎಸ್.ನಾರಾಯಣಗೌಡ, ಕೆ.ಕೆ.ಮನುಕುಮಾರ್, ಎಂ.ಬಿ.ಆನಂದ್, ಬಿ.ಸುಜೀತ್, ಟಿ.ಡಿ.ಮಲ್ಲೇಶ್, ಜಿ.ಹೆಚ್.ದಿನೇಶ್, ಕೆ.ಪಿ.ಪೃಥ್ವಿರಾಜ್, ಎಸ್.ಆರ್.ತಿಲೋಕ್, ಎ.ಹೆಚ್.ರುದ್ರೇಗೌಡ, ಹೆಚ್.ಎಂ.ಸತೀಶ್, ಹೆಚ್.ಕೆ.ನವೀನ್, ಹೆಚ್.ಪಿ.ಹೇಮಂತ್, ಕೆ.ಎ.ರಾಜೇಗೌಡ, ಮಾಜಿ ಅಧ್ಯಕ್ಷ ಐ.ಎಸ್.ಉಮೇಶ್‌ಚಂದ್ರ, ಆರತಿಓಂಕಾರೇಗೌಡ, ಉಪಸ್ಥಿತರಿದ್ದರು.

Dr. 79th birth anniversary of Balagangadharnath Swamiji

About Author

Leave a Reply

Your email address will not be published. Required fields are marked *

You may have missed