September 20, 2024

ಬಡವರಿಗೆ ಮನೆ, ನಿವೇಶನ ಒದಗಿಸಲು ಜಾಗ ಗುರುತಿಸುವ ಪ್ರಯತ್ನ

0
ನಗರಸಭೆ ಮಿನಿ ಸಭಾಂಗಣದಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆ

ನಗರಸಭೆ ಮಿನಿ ಸಭಾಂಗಣದಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆ

ಚಿಕ್ಕಮಗಳೂರು:  ಬಡವರಿಗೆ ಮನೆ, ನಿವೇಶನ ಒದಗಿಸಲು ಗ್ರಾಮೀಣ ಭಾಗದಲ್ಲಿ ೨೫ ಎಕರೆ ಕಂದಾಯ ಭೂಮಿ ಗುರುತಿಸಲಾಗಿದೆ. ಅದೇ ರೀತಿ ನಗರದ ಗವನಹಳ್ಳಿ, ಗಾಲ್ ಕ್ಲಬ್ ಮಾರ್ಗದ ಸರ್ವೆ ಸಂಖ್ಯೆಯಲ್ಲಿ ಜಾಗ ಗುರುತಿಸುವ ಪ್ರಯತ್ನ ನಡೆದಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರಸಭೆ ಮಿನಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿ, ಯಾರೂ ಮನೆ, ನಿವೇಶನ ಇಲ್ಲ ಎಂದು ಹೇಳಬಾರದು ಎಂಬ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ೨೫ ಎಕರೆ ಜಾಗವನ್ನು ಡಿಸಿ ಗುರುತಿಸಿದ್ದಾರೆ. ನಗರದಲ್ಲೂ ಗವನಹಳ್ಳಿ, ಗಾಲ್ ಕ್ಲಬ್ ಮಾರ್ಗಮಧ್ಯೆ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.

ಕಳೆದ ೨೦೦೭ ರಿಂದ ೦೯ ರ ಅವಯಲ್ಲಿ ಇಂದಿರಾಗಾಂ ಬಡಾವಣೆಯಲ್ಲಿ ನೀಡಲಾಗಿರುವ ೮೬೧ ಆಶ್ರಯ ಮನೆಗಳ ವಾಸ್ತವ ಸ್ಥಿತಿಯನ್ನು ಕಂದಾಯ ಮತ್ತು ನಗರಸಭೆ ಅಕಾರಿಗಳು ಪರಿಶೀಲನೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಶಾಸಕರು ಅಕಾರಿಗಳಿಗೆ ತಾಕೀತು ಮಾಡಿದರು.

ಹಿಂದಿನ ಎರಡೂ ಅವಯಲ್ಲಿ ನೀಡಿರುವ ಮನೆ, ನಿವೇಶನಗಳಲ್ಲಿ ಕೆಲವರು ಷರತ್ತು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರ ಹಕ್ಕು ಪತ್ರ ರದ್ದು ಮಾಡಿ ಹೊಸ ಪಟ್ಟಿ ತಯಾರಿಸಲಾಗಿದೆ. ಆದರೆ, ಆ ಪಟ್ಟಿಯನ್ನು ರಾಜೀವ್‌ಗಾಂದಿ ವಸತಿ ನಿಗಮಕ್ಕೆ ಕಳುಹಿಸಿಲ್ಲ. ಹಾಲಿ ಅಲ್ಲಿರುವಂತಹ ಫಲಾನುಭವಿಗಳಿಗೆ ಹಕ್ಕುಪತ್ರಗಳು ದೊರೆತಿಲ್ಲ. ಅಲ್ಲಿ ವಾಸಿಸುತ್ತಿರುವವರನ್ನು ಕತ್ತಲೆಯಲ್ಲಿಟ್ಟಿದ್ದೀರಿ. ಹೀಗಾಗಿ ಕೂಡಲೇ ಎಲ್ಲ ಮನೆಗಳ ವಾಸ್ತವ ಸ್ಥಿತಿಗತಿ ಬಗ್ಗೆ ತಿಂಗಳೊಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಬಡಾವಣೆಯಲ್ಲಿ ಒಟ್ಟು ೮೬೧ ಮನೆಗಳ ಪೈಕಿ ೪೬೦ ಮನೆಕಟ್ಟಿಕೊಂಡಿದ್ದಾರೆ. ಅದರಲ್ಲಿ ೧೭೩ ಜನರಿಗೆ ಮಾತ್ರ ಹಕ್ಕುಪತ್ರ ಇದೆ, ಉಳಿದವರಿಗೂ ಹಕ್ಕುಪತ್ರ ನೀಡಲಿದ್ದೇವೆ ಎಂದರು.

ವಾಜಪೇಯಿ ಬಡಾವಣೆಯಲ್ಲಿ ೧೫೧೧ ಜಿ ಪ್ಲಸ್ ೨ ಮನೆಗಳನ್ನು ನಿರ್ಮಿಸುತ್ತಿದ್ದು ಅದರಲ್ಲಿ ೧೧೩ ಮಂದಿ ನಮಗೆ ಮನೆಯೇ ಬೇಡ ಕಟ್ಟಿದ ಹಣ ವಾಪಸ್ಸು ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಅಕಾರಿ ಗಮನ ಸೆಳೆದಾಗ, ಹಣ ವಾಪಸ್ಸು ಕೇಳುತ್ತಿರುವವರ ಸಭೆ ಕರೆದು ಮತ್ತೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳೋಣ. ಅವರಿಗೆ ಮನೆಯೇ ಬೇಡ ಎಂದಾದಲ್ಲಿ ಮನೆ ಇಲ್ಲದ ಬಡವರು ಸಾಕಷ್ಟಿದ್ದಾರೆ ಅವರನ್ನು ಆಯ್ಕೆ ಮಾಡಬಹುದು. ಫಲಾನುಭವಿ ಈ ಹಿಂದೆ ವಂತಿಕೆಯಾಗಿ ೩.೬೦ ಲಕ್ಷ ರೂ. ಪಾವತಿಸಬೇಕಿತ್ತು. ಆದರೆ , ನಮ್ಮ ಸರಕಾರ ಅದನ್ನು ೧ ಲಕ್ಷ ರೂ. ಗೆ ಇಳಿಸಿದೆ. ಈ ವಿಚಾರವನ್ನು ಅವರ ಗಮನಕ್ಕೆ ತಂಂದು ಮನವೊಲಿಸುವ ಪ್ರಯತ್ನ ಮಾಡಬಹುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಕಲ್ಯಾಣ ನಗರದ ಚರ್ಚ್ ಹಿಂಭಾಗದಲ್ಲಿ ಮನೆ ನಿರ್ಮಿಸಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಅದನ್ನೂ ಪರಿಶೀಲಿಸಿ. ಬಡವರಾಗಿದ್ದರೆ ಅವರಿಗೆ ಹಕ್ಕುಪತ್ರ ನೀಡಲು ಕ್ರಮವಹಿಸಿ. ಕಲ್ಯಾಣ ನಗರದಲ್ಲಿ ಅಂಬೇಡ್ಕರ್ ಬಡಾವಣೆಯಲ್ಲಿ ಖಾಲಿ ನಿವೇಶನ ಮತ್ತು ಮನೆಗಳಿವೆ. ಈ ಬಗ್ಗೆಯೂ ಪರಿಶೀಲಿಸಿ ಎಂದರು. ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ, ಆಯುಕ್ತ ಬಸವರಾಜು ಇದ್ದರು.

Urban Shelter Committee meeting held at Municipal Council Mini Hall

About Author

Leave a Reply

Your email address will not be published. Required fields are marked *

You may have missed