September 20, 2024

ಸ್ವಚ್ಛತೆಗೆ ಆದ್ಯತೆ ನೀಡಲು ಶಾಸಕ ತಮ್ಮಯ್ಯ ಸಲಹೆ

0
ಬಸವನಹಳ್ಳಿ ಸರ್ಕಾರಿ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಯ ಶೌಚಾಲಯ ಉದ್ಘಾಟನೆ

ಬಸವನಹಳ್ಳಿ ಸರ್ಕಾರಿ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಯ ಶೌಚಾಲಯ ಉದ್ಘಾಟನೆ

ಚಿಕ್ಕಮಗಳೂರು:  ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಬೇಕೆಂದು ಹೇಳಿದ್ದಾರೆ. ಅದರಂತೆ ಶೌಚಾಲಯಗಳು ಸ್ವಚ್ಛವಾಗಿದ್ದರೆ ಆ ಮನೆಯವರ ಮನಸ್ಸು-ಮನೆ ಸ್ವಚ್ಛವಾಗಿಟ್ಟುಕೊಂಡಿದ್ದಾರೆಂದು ಅರ್ಥ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ನಗರದ ಬಸವನಹಳ್ಳಿ ಸರ್ಕಾರಿ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಸುಮಾರು ೧೩ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶೌಚಾಲಯ ಮತ್ತು ಆಜಾದ್ ಪಾರ್ಕ್ ಬಳಿ ಇರುವ ಗುರುಭವನದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಶೌಚಾಲಯ ನಿರ್ಮಾಣ ಎಷ್ಟು ಮುಖ್ಯವೋ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಈ ಬಗ್ಗೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ನಗರಸಭೆ ವತಿಯಿಂದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ ಪರಿಣಾಮ ಇತ್ತೀಚೆಗೆ ಸಮಾಜದ ಎಲ್ಲರ ಬಗ್ಗೆಯೂ ಸ್ವಚ್ಛತೆ ಬಗ್ಗೆ ಅರಿವು ಮೂಡಿದೆ ಎಂದು ಶ್ಲಾಘಿಸಿದರು.

ಮನೆಯಲ್ಲಿಯೇ ಕಸ ವಿಂಗಡಣೆಯನ್ನು ಮಾಡಿ, ನಗರಸಭೆ ಗಾಡಿಗೆ ಹಾಕಬೇಕು. ಈ ಸಂಬಂಧ ಶಿಕ್ಷಕರು ಸಭೆ ಕರೆದು ಚರ್ಚಿಸಿ, ಪೋಷಕರ ಹಾಗೂ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದಾಗ ಮುಂದಿನ ದಿನಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಿದ್ದಕ್ಕೆ ಪ್ರಯೋಜನವಾಗುವುದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ನಗರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಈ ಶಾಲೆಯ ಶೌಚಾಲಯ ಹಳೆಯದಾಗಿದ್ದು, ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಿದ್ದೇವೆ. ಇದನ್ನು ಚೆನ್ನಾಗಿ ನಿರ್ವಹಿಸಿ ಸ್ವಚ್ಛತೆ ಕಾಪಾಡಲು ಮನವಿ ಮಾಡಿದರು.

ಈ ಹೆಣ್ಣು ಮಕ್ಕಳ ಶಾಲೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುದ್ಧಗಂಗಾ ಘಟಕ ಹಾಗೂ ಬೋರ್‌ವೆಲ್‌ಗೆ ೫ ಲಕ್ಷ ರೂ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಪೂರ್ಣಗೊಂಡ ಬಳಿಕ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್, ಪೌರಾಯುಕ್ತ ಬಿ.ಸಿ ಬಸವರಾಜ್, ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್, ಉಪ ಪ್ರಾಂಶುಪಾಲರಾದ ಚಂದ್ರಮ್ಮ, ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

Basavanahalli Govt MLA Model Girls School Toilet Inauguration

About Author

Leave a Reply

Your email address will not be published. Required fields are marked *