September 16, 2024

ಇ-ಆಫೀಸ್ ತಂತ್ರಾಂಶದ ಮೂಲಕ ಕಡತ ವಿಲೇವಾರಿ ಮಾಡುವಂತೆ ಸೂಚನೆ

0
ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ಸಭೆ

ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ಸಭೆ

ಚಿಕ್ಕಮಗಳೂರು: ಇ-ಆಫೀಸ್ ತಂತ್ರಾಂಶದ ಮೂಲಕ ಕಡತ ವಿಲೇವಾರಿ ಮಾಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು, ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ಇ-ಆಫೀಸ್ ಮೂಲಕವೇ ಕಡತ ತೆರೆಯಬೇಕು. ನಿಗಧಿತ ಸಮಯದಲ್ಲಿ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದರು.

ಇ-ಆಫೀಸ್ ಬಳಕೆ ಮಾಡದೇ ಭೌತಿಕ ಕಡತಗಳನ್ನು ತೆರೆಯುವ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇ-ಆಫೀಸ್ ತಂತ್ರಾಂಶ ಬಳಕೆ ಕುರಿತು ಆಗಾಗ್ಗೆ ವರದಿ ಸಲ್ಲಿಸುವಂತೆ ಹೇಳಿದರು.

ತಾಲ್ಲೂಕು ಕಛೇರಿಗಳ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಎಲ್ಲ ಹಳೆಯ ಕಡತಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಮಾಡಲಾಗುವುದು ಇಲಾಖೆಯ ಪೋರ್ಟಲ್‌ನಿಂದ ಆ ದಾಖಲೆಗಳನ್ನು ಸಾರ್ವಜನಿಕರು ನೇರವಾಗಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ಸಬ್ ರಿಜಿಸ್ಟರ್ ಕಛೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನು ೧೦ ದಿವಸದೊಳಗೆ ತಾಲ್ಲೂಕು ಕಛೇರಿಗೆ ವರ್ಗಾಯಿಸುವಂತೆ ಸೂಚಿಸಿದ ಅವರು ಸಬ್ ರಿಜಿಸ್ಟರ್ ಕಛೇರಿ, ತಹಸೀಲ್ದಾರ್ ಕಛೇರಿ ಹಾಗೂ ಆರ್.ಟಿ.ಒ ಕಛೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆಯೆಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ದಲ್ಲಾಳಿಗಳಿಗೆ ಕಡಿವಾಣ ಹಾಕುವಂತೆ ತಿಳಿಸಿದರಲ್ಲದೆ ಸರ್ಕಾರಿ ಕಛೇರಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.

ಫ್ರೂಟ್ ತಂತ್ರಾಂಶದಲ್ಲಿ ಜಿಲ್ಲೆಯಲ್ಲಿ ಶೇ ೮೦ ರಷ್ಟು ನೋಂದಣಿಯಾಗಿದ್ದು, ನೋಂದಣಿಯಾಗದ ರೈತರನ್ನು ಗುರುತಿಸಿ ನೋಂದಾಯಿಸಲು ಕ್ರಮ ವಹಿಸುವಂತೆ ಹೇಳಿದ ಅವರು ಶೇ ೯೫ ರಷ್ಟು ಗುರಿ ಸಾಧಿಸುವಂತೆ ಹೇಳಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ಯಾವುದೇ ರೀತಿಯ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸ ಬೇಕು. ನೀರಿನ ಸಮಸ್ಯೆ ಕಂಡು ಬಂದ ಗ್ರಾಮಗಳಲ್ಲಿ ಅಲ್ಲಿನ ಖಾಸಗಿ ಬೋರ್ ವೆಲ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮವಹಿಸುವಂತೆ ತಿಳಿಸಿದ ಅವರು ಫಾರಂ ೫೦, ೫೩ ಅರ್ಜಿಗಳನ್ನು ಡಿಜಿಟಲಿಕರಣ ಮಾಡುವಂತೆ ಹೇಳಿದರಲ್ಲದೆ ಜಿಲ್ಲೆಯಲ್ಲಿನ ಕೆರೆಗಳ ಸರ್ವೆ ನಡೆಸಿ ಒತ್ತುವರಿಯಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಸಾರ್ವಜನಿಕ ಸದುದ್ದೇಶಕ್ಕೆ ಮೀಸಲಾಗಿರುವ ಭೂಮಿಯನ್ನು ಸಂರಕ್ಷಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ದಲ್ಜಿತ್ ಕುಮಾರ್, ಕಾಂತರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Progress review meeting on comprehensive development of the district

About Author

Leave a Reply

Your email address will not be published. Required fields are marked *