September 16, 2024

ಜನಸಂಪರ್ಕ ಸಭೆ ನಡೆಸಿ ಸ್ಥಳದಲ್ಲಿಯೆ ಸೂಕ್ತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿನೆ

0
ಟಿಪ್ಪು ನಗರದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆ

ಟಿಪ್ಪು ನಗರದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆ

ಚಿಕ್ಕಮಗಳೂರು: : ನಗರದ ವಿವಿಧ ವಾರ್ಡ್‌ಗಳಲ್ಲಿ ನಗರಸಭೆ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಜನರ ಬಳಿಗೆ ಹೋಗಿ ಜನಸಂಪರ್ಕ ಸಭೆ ನಡೆಸಿ ಸ್ಥಳದಲ್ಲಿಯೆ ಸೂಕ್ತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಅವರು ಟಿಪ್ಪು ನಗರದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಶಾಸಕನಾದ ನಂತರ ಗ್ರಾಮಾಂತರ ಭಾಗಗಳಲ್ಲಿ ಮೊದಲು ಬೇಟಿ ನೀಡುವ ಮೂಲಕ ಅಲ್ಲಿಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಾಯಿತು, ನಂತರ ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಜನಸಂಪರ್ಕ ಸಭೆ ಪ್ರಾರಂಭ ಮಾಡಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿತಿತ್ತು, ಅದರಂತೆ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆ, ತಾಲ್ಲೂಕು, ಹೋಬಳಿ, ಗ್ರಾಮಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನೆಡೆಸುವುದು ಮುಖ್ಯ ಮಂತ್ರಿಗಳ ಆಶಯವಾಗಿತ್ತು, ಅದರಂತೆ ಜನಸಂಪರ್ಕ ಸಭೆ ಪ್ರಾರಂಭ ಮಾಡಲಾಗಿದೆ ಎಂದರು.

ಸರ್ಕಾರ ಮತ್ತು ಅಧಿಕಾರಿಗಳು ಜನರು ಇರುವಲ್ಲಿಯೇ ತೆರಳಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಸದುದ್ದೇಶ ಸರ್ಕಾರದ್ದಾಗಿದೆ, ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ೫ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ೮ ತಿಂಗಳಿನಲ್ಲಿ ೫ ಗ್ಯಾರಂಟಿಗಳನ್ನು ಪೂರೈಸಿದ ಏಕೈಕ ಮುಖ್ಯ ಮಂತ್ರಿ ನಮ್ಮ ನೆಚ್ಚಿನ ಸಿದ್ಧರಾಮಯ್ಯನವರು ಎಂದು ಬಣ್ಣಿಸಿದರು.

ಉಸ್ತುವಾರಿ ಸಚಿವ ಜಾರ್ಜ್ ರವರ ನೇತೃತ್ವದಲ್ಲಿ ಸರ್ಕಾರದ ೫ ಗ್ಯಾರಂಟಿಗಳ ಜೊತೆಗೆ ನಗರದ ಅಭಿವೃದ್ಧಿಗಾಗಿ ನಗರೋತ್ತಾನ ಯೋಜನೆಗಳಿಗಾಗಿ ೧೮ ಕೋಟಿ ರೂ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಲಾಗಿದೆ. ಟಿಪ್ಪು ನಗರದ ವಾರ್ಡ್ ನಂ. ೧೨ರ ರಸ್ತೆ ಅಭಿವೃದ್ಧಿಗಾಗಿ ೨೦ ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಜನರು ಯಾವುದೇ ಕಛೇರಿಗೆ ತೆರಳಿದಾಗ ಅಲ್ಲಿಯ ಅಧಿಕಾರಿಗಳು ನಿಮ್ಮನ್ನು ಗೌರವಯುತವಾಗಿ ಕಾಣಬೇಕೆಂಬುದು ಜನಸ್ನೇಹಿ ಆಡಳಿತದ ಉದ್ದೇಶವಾಗಿದೆ, ಇ-ಖಾತೆ ಮಾಡಲು ೪೫ ದಿನಗಳು ಆಗುತ್ತಿತ್ತು, ಇತ್ತೀಚಿನ ದಿನಗಳಲ್ಲಿ ಸರಿಯಾದ ದಾಖಲೆ ಕೊಟ್ಟ ೭ ದಿನಗಳ ಒಳಗೆ ಇ-ಖಾತೆ ನಿಮ್ಮ ಕೈ ಸೇರುವುದು ಹಾಗೂ ಮನೆ ನಿರ್ಮಾಣಕ್ಕಾಗಿ ಪರವಾನಿಗೆ ಪಡೆಯಲು ನಗರಸಭೆ ಮತ್ತು ಪ್ರಾಧಿಕಾರ ಎರಡು ಕಡೆ ಅಲೆದಾಡುವುದನ್ನು ತಪ್ಪಿಸಿ, ನಾಲ್ಕು ಸಾವಿರ ಅಡಿ ಮನೆ ನಿರ್ಮಾಣಕ್ಕಾಗಿ ನಗರಸಭೆ ಲೈಸೆನ್ಸ್ ನೀಡಲಾಗುತ್ತಿದೆ, ಇಂತಹ ಅನೇಕ ಬದಲಾವಣೆಯನ್ನು ತರಲಾಗುವುದು ಎಂದರು.

ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಶಾಸಕರ ಉಪಸ್ಥಿತಿಯಲ್ಲಿ ೨ನೇ ಜನಸಂಪರ್ಕ ಸಭೆ ನಡೆಸಲಾಗುತ್ತಿದ್ದು, ಶಾಸಕರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು, ಕೆಇಬಿ ಇಂಜಿನಿಯರ್, ಬಿಇಓ, ಆಹಾರ ಇಲಾಖೆ ಮತ್ತು ಅಂಗನವಾಡಿ ಸಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದು, ಅವರ ಸಮ್ಮುಖದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ, ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ತಿಳಿಸಿದಾಗ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶವಿದೆ ಎಂದರು.

ನಗರಸಭೆ ಸದಸ್ಯ ಸೈಯದ್‌ಜಾವಿದ್ ಮಾತನಾಡಿ ನಾನು ಸದಸ್ಯನಾಗಿ ಬಂದ ನಂತರ ೨ ವರ್ಷಗಳಲ್ಲಿ ೧.೫ ಕೋಟಿ ರೂ ವೆಚ್ಚದ ಕಾಮಗಾರಿ ನಮ್ಮ ವಾರ್ಡ್‌ನಲ್ಲಿ ನೆಡೆದಿದ್ದು, ೨೫-೩೦ ವರ್ಷಗಳಿಂದ ರಸ್ತೆ ಕಾಣದೆ ಜನರು ಪರದಾಡುತ್ತಿದ್ದ ದಿನಗಳಲ್ಲಿ ಚಿಕ್ಕ-ಪುಟ್ಟ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಚರಂಡಿ ಸಮಸ್ಯೆಯನ್ನು ಪೂರ್ಣಗೊಳಿಸಲಾಗುವುದು ಎಂದರು.

ವಾರ್ಡ್ ನಂ.೧೨ ರ ನಿವಾಸಿ ನಗೀನಾಭಾನು ಮಾತನಾಡಿ ಮನೆ ಬಳಿ ಇರುವ ಗುಜರಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರು, ಬೆಳ್ಳಿಯಮ್ಮ ಮಾತನಾಡಿ ರೇಶನ್ ಕಾರ್ಡ್‌ಗಾಗಿ ಮನವಿ ಮಾಡಿದರು, ಗಾಂಧೀನಗರ ಮುಬೀನಾ ಮಾತನಾಡಿ ಸ್ಲಮ್‌ಬೋರ್ಡ್ ಮನೆ ಪೂರ್ಣಗೊಳಿಸುವಂತೆ ಮನವಿ ಮಾಡಿದರು. ಮಲ್ಲಿಕಮ್ಮ ಟಿಪ್ಪುನಗರ ಮೊದಲನೇ ಹಂತದಲ್ಲಿ ಯುಜಿಡಿ ತುಂಬು ಹರಿಯುತ್ತಿದ್ದು ಅದನ್ನು ದುರಸ್ಥಿಪಡಿಸುವಂತೆ ತಿಳಿಸಿದರು. ಖಲಂದರ್ ಮಾತನಾಡಿ ಅಕ್ರಮ-ಸಕ್ರಮ ಜಾಗವನ್ನು ನಗರಸಭೆ ಸೇರಿಸುವಂತೆ ಮನವಿ ಮಾಡಿದರು.

ಅನ್ನಪೂರ್ಣ ಮಾತನಾಡಿ ವಾರ್ಡ್‌ಗೊಂದು ಪಾರ್ಕ್ ನಿರ್ಮಾಣ ಮಾಡಿಕೊಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್, ಉಪಾಧ್ಯಕ್ಷ ಅಮೃತೇಶ್, ನಗರಸಭೆ ಸದಸ್ಯರುಗಳಾದ ಪರಮೇಶ್‌ರಾಜ್ ಅರಸ್, ಲಕ್ಷ್ಮಣ್, ಅಕ್ಮಲ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ನಾಗರತ್ನ, ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Public relations meeting organized in Tipu Nagar

About Author

Leave a Reply

Your email address will not be published. Required fields are marked *