September 16, 2024

ಸೋಲಾರ್ ವಿದ್ಯುತ್ ಗೆ ಜಿಲ್ಲೆಯಲ್ಲಿ 167 ಎಕರೆ ಭೂಮಿ ಗುರುತು

0
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸುದ್ದಿಗೋಷ್ಠಿ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಕುಸುಮ್ ಯೊಜನೆಯಡಿ ಸೋಲಾರ್ ಮೂಲಕ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ಜಿಲ್ಲೆಯಲ್ಲಿ ೧೬೭ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಿಕ್ಕಮಗಳೂರು ತಾಲ್ಲೂಕಿನ ಬಿಳೇಕಲ್ಲಹಳ್ಳಿಯಲ್ಲಿ ೧೨ ಎಕರೆ, ಹಿರೇಗೌಜ ಗುಡ್ಡದಲ್ಲಿ ೫ ಎಕರೆ, ಕಳಸಾಪುರದಲ್ಲಿ ೧ ಎಕರೆ, ಗೋವಿಂದ ಪುರದಲ್ಲಿ ೪.೨೦ ಎಕರೆ ಹಾಗೂ ಕರ್ತಿಕೆರೆಯಲ್ಲಿ ೫ ಎಕರೆ ಸೇರಿ ಒಟ್ಟು ೨೭.೨೭ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದರು.

ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದಲ್ಲಿ ೧೦ ಎಕರೆ, ಕಡೂರು ತಾಲ್ಲೂಕಿನಲ್ಲಿ ಒಟ್ಟು ೧೨೦ ಎಕರೆ ಗುರುತಿಸಲಾಗಿದ್ದು, ಅದರಲ್ಲಿ ಗೆದ್ದೇಹಲ್ಳಿಯಲ್ಲಿ ೧೮.೨೦ ಎಕರೆ, ಚೀಲನಹಳ್ಳಿಯಲ್ಲಿ ೪೫ ಹಾಗೂ ಗುಮ್ಮನಹಳ್ಳಿಯಲ್ಲಿ ೫೭.೨೪ ಎಕರೆ ಭೂಮಿ ಸೇರಿದೆ ಎಂದು ತಿಳಿಸಿದರು.

ಅಜ್ಜಂಪುರ ತಾಲ್ಲೂಕಿನ ಸೌತನಹಳ್ಳಿಯಲ್ಲಿ ೧೦ ಎಕರೆ ಭೂಮಿ ಗುರುತಿಸಲಾಗಿದ್ದು, ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಜಂಟೀ ಸ್ಥಳ ತನಿಖೆ ನಡೆಸಿ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸುವಂತೆ ನಾಲ್ಕೂ ತಾಲ್ಲೂಕಿನ ತಹಸೀಲ್ದಾರರುಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ೮ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಪೈಕಿ ಕಡೂರು, ಮತ್ತು ಅಜ್ಜಂಪುರ ತಾಲ್ಲೂಕುಗಳನ್ನು ತೀವ್ರ ಬರಪೀಡಿತವೆಂದು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತರೀಕೆರೆ ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ ೫ ತಾಲ್ಲೂಕುಗಳ ೧೧ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನಿರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆ ಇರುವುದಿಲ್ಲ. ಮುಂದಿನ ೩೩ ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನಿದೆ. ರೈತರಿಗೆ ಮೇವು ಕಿಟ್‌ಗಳನ್ನು ವಿತರಿಸಲಾಗಿದೆ. ಬರ ಪರಿಹಾರ ಕಾಮಗಾರಿಗಳು ಪ್ರಗತಿಯಲ್ಲಿದ್ದು ಜಿಲ್ಲಾಧಿಕಾರಿಗಳಿಗೆ ೧೨ ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.

ಕಡತಗಳ ವಿಲೇವಾರಿ ಚುರುಕುಗೊಳಿಸಲು ಎಲ್ಲಾ ಇಲಾಖೆಗಳಲ್ಲೂ ಇ-ಆಡಳಿತ ವ್ಯವಸ್ಥೆ ಜಾರಿಗೆ ತರಲು ಕ್ರಮ ವಹಿಸಲಾಗಿದೆ. ಎಲ್ಲಾ ಹಳೆಯ ಕಡತಗಳನ್ನು ಸ್ಕ್ಯಾನಿಂಗ್ ಮಾಡಿ, ಡಿಜಿಟಲೀಕರಣಗೊಳಿಸಲಾಗುವುದು. ನಂತರ ಇಲಾಖೆ ಪೋರ್ಟಲ್‌ನಿಂದ ನೇರವಾಗಿ ಸಾರ್ವಜನಿಕರು ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

೨೦೨೨-೨೩ ನೇ ಸಾಲಿನಲ್ಲಿ ಅತೀವೃಷ್ಠಿಯಿಂದ ಸಂಭವಿಸಿರುವ ಬೆಳೆನಾಶಕ್ಕೆ ಸಂಬಂಧಪಟ್ಟ ರೈತರ ಖಾತೆಗೆ ಪರಿಹಾರದ ಹಣವನ್ನು ಜಮೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಕಡೂರು, ಬೀರೂರು, ತರೀಕೆರೆ ಪುರಸಭೆಗಳು, ಮೂಡಿಗೆರೆ, ಅಜ್ಜಂಪುರ ಮತ್ತು ಶೃಂಗೇರಿ ಪಟ್ಟಣ ಪಂಚಾಯ್ತಿಗಳ ಕುಡಿಯುವ ನೀರು ಯೋಜನೆಗೆ ೨೦೮ ಕೋಟಿ ರೂ. ಅಂದಾಜು ಪಟ್ಟಿ ಅನುಮೋದನೆಯಾಗಿದ್ದು ಟೆಂಡರ್ ಕರೆಯಬೇಕಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಹೊಸ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ೧೫ ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಶೃಂಗೇರಿ ತಾಲ್ಲೂಕು ಕಚೇರಿ ಕಟ್ಟಡಕ್ಕೆ ೧೬.೫೦ ಲಕ್ಷ ರೂ., ತರೀಕೆರೆ ತಾಲ್ಲೂಕು ಕಚೇರಿ ಕಟ್ಟಡ ದುರಸ್ಥಿಗೆ ೮ ಲಕ್ಷ ರೂ., ಕೊಪ್ಪ ತಾಲ್ಲೂಕು ಕಚೇರಿ ಕಟ್ಟಡದ ೨ ನೇ ಹಂತದ ಮಹಡಿ ನಿರ್ಮಾಣಕ್ಕೆ ೨.೫ ಕೋಟಿ ರೂ., ಮೂಡಿಗೆರೆ ತಾಲ್ಲೂಕು ಕಚೇರಿ ಕಟ್ಟಡ ದುರಸ್ಥಿಗೆ ೧ ಕೋಟಿ ರೂ. ಹಾಗೂ ಕಡೂರು ತಾಲ್ಲೂಕು ಕಚೇರಿ ರೆಕಾರ್ಡ್ ರೂಂ. ದುರಸ್ಥಿಗೆ ೪೭ ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕರುಗಳಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗಾರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಎಸ್ಪಿ ಡಾ.ವಿಕ್ರಮ ಅಮಟೆ ಉಪಸ್ಥಿತರಿದ್ದರು.

167 acres of land has been earmarked for solar power in the district

About Author

Leave a Reply

Your email address will not be published. Required fields are marked *