September 16, 2024

ಫೆ.10 ರಿಂದ ದೇವೀರಮ್ಮ ದೇವಸ್ಥಾನದಲ್ಲಿ “ಬ್ರಹ್ಮಕುಂಭಾಭಿಷೇಕ”

0
ದೇವೀರಮ್ಮ ದೇವಸ್ಥಾನ

ದೇವೀರಮ್ಮ ದೇವಸ್ಥಾನ

ಚಿಕ್ಕಮಗಳೂರು: ತಾಲೂಕಿನ ಬಿಂಡಿಗ ಮಲ್ಲೇನಹಳ್ಳಿ ಶ್ರೀಕ್ಷೇತ್ರ ದೇವೀರಮ್ಮ ದೇವಸ್ಥಾನದಲ್ಲಿ ಫೆ.೧೦ ರಿಂದ ೧೪ ರವರೆಗೆ “ಬ್ರಹ್ಮಕುಂಭಾಭಿಷೇಕ” ಮಹೋತ್ಸವವನ್ನು ಏರ್ಪಡಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕುಲಶೇಖರ್ ತಿಳಿಸಿದರು.

ಅವರು ಇಂದು ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಸಿದ್ದತೆಯ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿ ಬಿಂಡಿಗ ದೇವಿರಮ್ಮನವರ ದೇವಸ್ಥಾನ ಜೀರ್ಣೋದ್ಧಾರ ಆಗಿ ೧೨ ವರ್ಷಗಳು ಕಳೆದಿರುವುದರಿಂದ ಈ ಸಂಬಂಧ ಬ್ರಹ್ಮಕುಂಭಾಭಿಷೇಕ ಮಹೋತ್ಸವ ೫ ದಿನಗಳ ಕಾಲ ಒಂದೊಂದು ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.

ಕಾರ್ಯಕ್ರಮದ ಅವಧಿಯಲ್ಲಿ ಪ್ರತಿ ದಿನ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಹೋಮ-ಹವನ ನಡೆಯಲಿದೆ. ಸಂಜೆ ೬ ರಿಂದ ರಾತ್ರಿ ೧೦ ಗಂಟೆವರೆಗೆ ವಿವಿಧ ಸಾಂಸ್ಕೃತಿಕ-ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ. ದೇವಿರಮ್ಮ ದೇವಿಯ ಕಥೆ ಆಧಾರಿತ ಯಕ್ಷಗಾನ ಸಹ ನಡೆಯಲಿದೆ ಎಂದು ವಿವರಿಸಿದರು.

ಈ ಕಾರ್ಯಕ್ರಮಕ್ಕೆ ಬರುವ ಭಕ್ತಾಧಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದು ಹೇಳಿ, ಫೆ.೧೧ ರಂದು ನಡೆಯಲಿರುವ ಈ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೈಸೂರಿನ ರಾಜ ವಂಶಸ್ಥ ಯದುವೀರ ಒಡೆಯರ್ ಆಗಮಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರುಗಳು, ಶಾಸಕರುಗಳನ್ನು ಹಾಗೂ ವಿವಿಧ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದರು.

ದೇವಸ್ಥಾನದ ಆವರಣದೊಳಗೆ ಪ್ಲಾಸ್ಟಿಕ್ ನಿಷೇಧಿಸಿದ್ದು, ಪ್ಲಾಸ್ಟಿಕ್ ಬಾಟಲಿ, ಕೈಚೀಲ ಮುಂತಾದವುಗಳನ್ನು ತರಬಾರದು. ಭಕ್ತರು ಶಾಂತಿ, ಶ್ರದ್ಧಾ ಭಕ್ತಿಯಿಂದ ವರ್ತಿಸುವಂತೆ ಮನವಿ ಮಾಡಿದ ಅವರು ನಿಗಧಿತ ಪಾರ್ಕಿಂಗ್‌ಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವಂತೆ ವಿನಂತಿಸಿದರು.

ಈ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ದೇವಾಲಯದ ಸುತ್ತ ಇರುವ ಗದ್ದೆಗಳನ್ನು ಸಮತಟ್ಟು ಮಾಡಿ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಅರ್ಚಕ ಮುರುಳಿ ಮಾತನಾಡಿ, ದೇವಿರಮ್ಮ ದೇವಸ್ಥಾನದ ಕಳಸ ಪುನರ್ ಪ್ರಾಣ ಪ್ರತಿಷ್ಠಾಪನೆ ಫೆ.೧೪ ರಂದು ನಡೆಯಲಿದೆ. ಊರಿನ ರಾಜಬೀದಿಯಲ್ಲಿ ಗಂಗಾ ಕಳಸದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕಳಸ ಹೊತ್ತ ಮಹಿಳೆಯರು ಆಗಮಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶಿಕ್ಷಕ ಲೋಕಪ್ಪಗೌಡ, ಸಮಿತಿ ಸದಸ್ಯ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

“Brahmakumbhabhishekam” at Deviramma temple from Feb. 10.

About Author

Leave a Reply

Your email address will not be published. Required fields are marked *