September 16, 2024

ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ-ಸಮೃದ್ಧಿಗೆ ದಾರಿದೀಪ

0
೭೫ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ

೭೫ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ

ಚಿಕ್ಕಮಗಳೂರು: ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ, ಪ್ರತಿ ಭಾರತೀಯನ ಪಾಲಿಗೂ ಆತ್ಮಾವಲೋಕನದ ದಿನ ಹಾಗೂ ಸಂಕಲ್ಪದ ಸುದಿನವೂ ಹೌದು. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ – ಸಂಕಟ ಮತ್ತು ಭವಿಷ್ಯತ್ತಿನ ಕನಸು- ಈ ’ತ್ರಿಕಾಲ’ದ ಅರಿವು, ಸ್ಪಷ್ಟತೆ ಪ್ರತಿ ಪ್ರಜೆಗೂ ಮುಖ್ಯ. ಆ ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ- ಸಮೃದ್ಧಿಗೆ ದಾರಿದೀಪ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅಭಿಪ್ರಾಯಿಸಿದರು.

ಅವರು ಇಂದು ನೇತಾಜಿ ಸುಭಾಷ್‌ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ೭೫ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.

ಭಾರತ ಸ್ವಾತಂತ್ರ್ಯ ಭಾರತ ಎಂದು ಹೆಮ್ಮೆ ಪಡಲು, ಗಣರಾಜ್ಯವಾಗಿ ರೂಪುಗೊಳ್ಳಲು ಆಗಿರುವ ತ್ಯಾಗ, ಬಲಿದಾನಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪೂರ್ವಜರು ನಮ್ಮ ಭವಿಷ್ಯಕ್ಕಾಗಿ ತಮ್ಮ ರಕ್ತ, ಬೆವರುಗಳನ್ನು ಹರಿಸಿ ಸ್ಥಾಪಿಸಿದ ಭಾರತದ ಪವಿತ್ರ ನೆಲದಲ್ಲಿ ಭಾರತೀಯ ಪ್ರಜೆಗಳಾದ ನಾವು ಸ್ವಾತಂತ್ರ್ಯದ ಉಸಿರನ್ನು ಅನುಭವಿಸುತ್ತಿದ್ದೇವೆ ಎಂದರು.

ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ಸಂಸ್ಕೃತಿಯನ್ನು ಕಾಪಾಡುವುದು ಮತ್ತು ಈ ದೇಶದ ನೆಲ, ಜಲ, ಹಾಗೂ ನೈಸರ್ಗಿಕ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ರಾಷ್ಟ್ರಕ್ಕೆ ಪ್ರಬಲವಾದ ಕಾನೂನು ವ್ಯವಸ್ಥೆಯ ಅಗತ್ಯತೆ ಸ್ವಾತಂತ್ರ್ಯ ನಂತರದಲ್ಲಿ ಸೃಷ್ಟಿಯಾಗಿತ್ತು. ನಮ್ಮ ದೇಶದ ನಾಗರೀಕರಿಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕಲ್ಪಿಸಲು ಪ್ರಬಲವಾದ ಲಿಖಿತ ಸಂವಿಧಾನದ ಅವಶ್ಯಕತೆಯನ್ನು ಮನಗಂಡು ಸ್ವಾತಂತ್ರ್ಯ ನಂತರದಲ್ಲಿ ದೇಶದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಹಾರಲಾಲ್ ನೆಹರು, ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಮುಖ್ಯಸ್ಥರನ್ನಾಗಿ ಮಾಡಿ ಸಂವಿಧಾನ ಕರಡು ರಚನಾ ಸಮಿತಿಯೊಂದನ್ನು ರಚಿಸಿದರು ಎಂದು ಹೇಳಿದರು.

ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈಗಿನಂತೆ ಗಣಕಯಂತ್ರ ವ್ಯವಸ್ಥೆಯಾಗಲಿ, ಭಾಷಾ ತರ್ಜುಮೆ ವ್ಯವಸ್ಥೆಗಳಿಲ್ಲದ ಕಾಲಘಟ್ಟದಲ್ಲಿ ಇಷ್ಟೊಂದು ಮಹತ್ತರವಾದ ಜವಬ್ದಾರಿಯನ್ನು ನಿಭಾಯಿಸಿದ ರೀತಿ ನಾವೆಲ್ಲರೂ ಹೆಮ್ಮೆ ಪಡುವಂತಹ ಸಾಧನೆಯೇ ಸರಿ ಎಂದು ಶ್ಲಾಘಿಸಿದರು.

ಒಟ್ಟು ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿನಗಳಲ್ಲಿ ಭಾರತದ ಸಂವಿಧಾನ ರಚನಾ ಕಾರ್ಯ ಯಶಸ್ವಿಯಾಗಿದ್ದು, ೨೬ನೇ ಜನವರಿ ೧೯೫೦ ರಂದು ಈ ಬೃಹತ್ ದೇಶದ ಅರ್ಥಪೂರ್ಣ ಲಿಖಿತ ಸಂವಿಧಾನ ಅನುಷ್ಠಾನಕ್ಕೆ ಬಂದ ದಿನವಾಗಿದ್ದು, ಈ ಸುದಿನವನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಾಗಿದೆ ಎಂದು ತಿಳಿಸಿದರು.

ಭಾರತೀಯ ಪ್ರಜೆಗಳಾದ ನಾವು ಸಂವಿಧಾನವನ್ನು ಅಳವಡಿಸಿಕೊಂಡು ೭೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಸಂವಿಧಾನ ಜಾಗೃತಿ ಜಾಥ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ದಿನಾಂಕ: ೧೫-೦೯-೨೦೨೩ ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಭಾರತ ಸಂವಿಧಾನದ ಪೀಠಿಕೆ ಓದುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಈ ದಿನದಂದು ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಆಡಳಿತವು ಆಯ್ಕೆ ಮಾಡಿರುವ ಗ್ರಾಮ ಪಂಚಾಯತ್‌ಗಳಿಗೆ ಸ್ಥಬ್ದ ಚಿತ್ರವು ಆಗಮಿಸುತ್ತಿದ್ದು, ಸದರಿ ಸ್ಥಬ್ದ ಚಿತ್ರವು ಆಗಮಿಸುವ ಸಮಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರುತ್ತೇನೆ ಎಂದು ಹೇಳಿದರು.

ಆರ್ಥಿಕವಾಗಿ ಹಿಂದುಳಿದವರ ಮತ್ತು ದೀನ ದಲಿತರ ಸಬಲೀಕರಣಕ್ಕಾಗಿ ಅವರನ್ನು ಆರ್ಥಿಕವಾಗಿ ಮುನ್ನಡೆಗೆ ತರುವ ದೃಷ್ಟಿಯಿಂದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು ಜನತೆ ನಮಗೆ ಆಶೀರ್ವಾದ ನೀಡಿದ್ದಾರೆ. ಅವರ ಶ್ರೀರಕ್ಷೆಯಿಂದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದರು.

ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಈ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಶಾಸಕರುಗಳಾದ ಹೆಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ, ಎಸ್.ಪಿ ಡಾ|| ವಿಕ್ರಮ ಅಮಟೆ, ಜಿ.ಪಂ. ಸಿಇಓ ಡಾ|| ಬಿ.ಗೋಪಾಲಕೃಷ್ಣ, ಯೋಜನಾ ನಿರ್ದೇಶಕಿ ನಾಗರತ್ನ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ನಂತರ ಶಾಲಾ ಮಕ್ಕಳಿಂದ ಸಮೂಹ ಗೀತಾಗಾಯನ ಕಾರ್ಯಕ್ರಮ ಜರುಗಿತು.

Hoisting of the National Flag on the 75th Republic Day

About Author

Leave a Reply

Your email address will not be published. Required fields are marked *