September 16, 2024

ಜ.31ಕ್ಕೆ ಬಿಜೆಪಿ ಕಚೇರಿಯಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

0
ನಿಯೋಜಿತ ಅಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಪತ್ರಿಕಾಗೋಷ್ಠಿ

ನಿಯೋಜಿತ ಅಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: : ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜ.೩೧ ರಂದು ಬುಧವಾರ ಬೆಳಗ್ಗೆ ೧೧.೩೦ ಕ್ಕೆ ನಗರದ ಪಾಂಚಜನ್ಯ ಬಿಜೆಪಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ನಿಯೋಜಿತ ಅಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತಮ್ಮನ್ನು ನೂತನ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದಾರೆ ಪದಗ್ರಹಣ ಸಮಾರಂಭಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ಭರದಿಂದ ನಡೆಯುತ್ತಿದೆ ಎಂದರು.

ಅಂದು ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಬಿ.ವೈ ವಿಜಯೇಂದ್ರ, ನಿಕಟ ಪೂರ್ವ ಅಧ್ಯಕ್ಷ ಎಸ್.ಸಿ ಕಲ್ಮರುಡಪ್ಪ, ವಿಧಾನ ಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಶಾಸಕರುಗಳಾದ ಸಿ.ಟಿ ರವಿ, ಜೀವರಾಜ್, ಬೆಳ್ಳಿಪ್ರಕಾಶ್, ಡಿ.ಎಸ್ ಸುರೇಶ್ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಸಂಸದರು ಹಾಗೂ ಕೇಂದ್ರ ಸಚಿವರೂ ಆದ ಕುಮಾರಿ ಶೋಭಾಕರಂದ್ಲಾಜೆ ಮತ್ತು ಪಕ್ಷದ ಎಲ್ಲಾ ಮಂಡಲದ ಪದಾಧಿಕಾರಿಗಳೂ, ಕಾರ್ಯಕರ್ತರೂ, ಮುಖಂಡರೂ ಭಾಗವಹಿಸಲಿದ್ದಾರೆಂದು ಹೇಳಿದರು.

ಮಂಡ್ಯ ಜಿಲ್ಲೆಯ ಕೆರಗೂಡು ಗ್ರಾಮದಲ್ಲಿ ನಡೆದಿರುವ ಭಗವಧ್ವಜವನ್ನು ಇಳಿಸಿ, ರಾಷ್ಟ್ರಧ್ವಜಾರೋಹಣ ಮಾಡಿರುವುದು ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಸಂವಿಧಾನ ವಿರೋಧವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿರುವುದನ್ನು ಖಂಡಿಸಿದ ಅವರನ್ನು ಜಿಲ್ಲೆಯಾದ್ಯಂತ ಈ ಸಂಬಂಧ ಪ್ರತಿಭಟನೆ ನಡೆಸಿ, ಘಟನೆಗೆ ಕಾರಣರಾದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತ, ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವುದು ಮುಂದುವರೆಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದು, ರಾಜ್ಯದ ೨೮ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಇದು ಕಾಂಗ್ರೆಸ್ ಪಕ್ಷದ ಶವದ ಪೆಟ್ಟಿಗೆಗೆ ಕೊನೆಯ ಮೊಳೆಯಾಗಲಿದೆ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನೊಳಗೊಂಡ ಮುಖಂಡರನ್ನು ನಗರದ ಬೋಳರಾಮೇಶ್ವರ ದೇವಸ್ಥಾನದಲ್ಲಿ ಸ್ವಾಗತಿಸಿ, ನಂತರ ೧೫೦೦ ಕಾರ್ಯಕರ್ತರೊಂದಿಗೆ ಬೈಕ್ ಜಾಥಾದ ಮೂಲಕ ಐಜಿ ರಸ್ತೆ, ಶೃಂಗಾರ್ ವೃತ್ತ, ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ ರಸ್ತೆಯಲ್ಲಿ ಸಾಗಿ, ಪಕ್ಷದ ಕಚೇರಿಯಲ್ಲಿ ಸಂಪನ್ನಗೊಳ್ಳಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸುಮಾರು ೬ ಸಾವಿರ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಲಿದ್ದಾರೆಂದು ಹೇಳಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕೇವಲವಾಗಿ ಮಾತನಾಡಿರುವ ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿ, ಕೂಡಲೇ ಇವರ ವಿರುದ್ಧ ಸುಮೋಟೊದಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಮಾಧ್ಯಮ ಪ್ರಮುಖ್ ದಿನೇಶ್, ಮುಖಂಡರಾದ ಹೆಚ್.ಎಸ್ ಪುಟ್ಟಸ್ವಾಮಿ, ಸಚಿನ್ ಉಪಸ್ಥಿತರಿದ್ದರು.

Inauguration ceremony of the new president at the BJP office on January 31

About Author

Leave a Reply

Your email address will not be published. Required fields are marked *