September 8, 2024

ಜನಸಂಪರ್ಕ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸಮಸ್ಯೆಗಳ ಅನಾವರಣ

0
ಸಖರಾಯಪಟ್ಟಣ ಹೋಬಳಿಯ ೧೧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ’ಜನ ಸಂಪರ್ಕ’ ಸಭೆ

ಚಿಕ್ಕಮಗಳೂರು:  ಇ-ಸ್ವತ್ತು, ಒತ್ತುವರಿ, ಅರಣ್ಯ, ಕಂದಾಯ ಇಲಾಖೆ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಗ್ಯಾರಂಟಿ ಯೋಜನೆಗಳಿಂದ ಆಗಿರುವ ಸಮಸ್ಯೆಗಳು ಜನಸಂಪರ್ಕ ಸಭೆಯಲ್ಲಿ ಅನಾವರಣಗೊಂಡವು.

ಸಖರಾಯಪಟ್ಟಣದ ಕಾಲೇಜು ಮೈದಾನದಲ್ಲಿ ಮಂಗಳವಾರ ತಾಲೂಕು ಆಡಳಿತವು ಆಯೋಜಿಸಿದ್ದ ಚಿಕ್ಕಮಗಳೂರು ಕ್ಷೇತ್ರಕ್ಕೆ ಸೇರುವ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ೧೧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ’ಜನ ಸಂಪರ್ಕ’ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಂದ ಉತ್ತರ ನೀಡಿಸುವುದರ ಮೂಲಕ ಪರಿಹಾರ ಕಂಡುಕೊಂಡರು.

ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು,ಗ್ರಾಮಸ್ಥರು ಕೇಳುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಾಗಬೇಕೇ ಹೊರತು ಕಾಟಚಾರದ ಸಭೆಯಾಗಬಾರದು ಸಾರ್ವಜನಿಕರು ಕುಂದುಕೊರತೆಯ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಈ ಸಭೆಯಲ್ಲಿಯೇ ಅಧಿಕಾರಿಗಳು ಪರಿಹರಿಸಬೇಕು ಒಂದು ವೇಳೆ ಸಮಯ ತೆಗೆದುಕೊಂಡರೂ ಮುಂದಿನ ಸಭೆಯೊಳಗೆ ಅವರಿಗೆ ನ್ಯಾಯ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಖರಾಯಪಟ್ಟಣ ಹೋಬಳಿ ಕೇಂದ್ರವಾಗಿದ್ದರೂ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಆನಂದನಾಯ್ಕ ದೂರಿದರು,ಹೊಸೂರು-ಕಾರ್ಖಾನೆ ಮೂಲೆಯ ನಿವಾಸಿಗಳಿಗೆ ಸಾಗುವಳಿ ಚೀಟಿ ನೀಡದೆ ಇರುವುದರಿಂದ ಸಾಲ ಪಡೆಯಲು ಆಗುತ್ತಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸ ಆಗಬೇಕಾಗಿದೆ ಜೊತೆಗೆ ವೈದ್ಯರ ಕೊರತೆ ಇದ್ದು ವೈದ್ಯರು ಇಲ್ಲಿಯೇ ಉಳಿಯುವಂತೆ ಸೂಚಿಸಬೇಕು.ಅಂಬುಲೆನ್ಸ್ ನೀಡಬೇಕು ಪಟ್ಟಣ ಬೃಹತ್ ಆಗಿ ಬೆಳೆಯುತ್ತಿರುವುದರಿಂದ ಅಗ್ನಿಶಾಮಕ ಠಾಣೆ ನೀಡಬೇಕು ಎಂದು ಶಾಸಕರಿಗೆ ಒತ್ತಾಯ ಮಾಡಿದರು.

ಇತ್ತೀಚೆಗೆ ಗ್ರಾಮದಲ್ಲಿ ನಡೆದ ಜಾತೆಯಿಂದ ಸ್ವಚ್ಚತೆ ಹಾಳಾಗಿದೆ. ತಹಸೀಲ್ದಾರ್ ದೇವಾಸ್ಥಾನದ ಹುಂಡಿಯ ಹಣ ಸುಮಾರು ೨೦ ಲಕ್ಷ ಸಂಗ್ರಹವಾಗಿದ್ದು ಎಲ್ಲಾ ಹಣವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೆಗೆದುಕೊಂಡು ಹೋದರು.ಸ್ವಚ್ಛತೆಗೆ ಗ್ರಾಮಪಂಚಾಯಿತಿಗೆ ಕನಿಷ್ಠ ೩ ಲಕ್ಷವನ್ನಾದರೂ ಹಣ ನೀಡಬಹುದಿತ್ತು ಎಂದರು.

ಒತ್ತುವರಿಯಾಗಿರುವ ಸ್ಮಶಾನಕ್ಕೆ ದಾರಿ ಬಿಡಿಸಬೇಕು ಜೊತೆಗೆ ಕಾಂಪೌಂಡ್ ಹಾಕಿಸಬೇಕು ಎಂದು ಆಗ್ರಹಿಸಿದರು. ಶಾಸಕರು ತಹಸೀಲ್ದಾರ್ ಅವರಿಗೆ ಸೂಚಿಸಿ ಸರ್ವೆ ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸಿ ದಾರಿ ಬಿಡಿಸಿಕೊಡಿ ಎಂದು ಸೂಚಿಸಿದರು.

ಮಹಡಿಮನೆ ಸತೀಶ್ ಮಾತನಾಡಿ ಜಲ ಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲವಾಗಿದ್ದು ಸಂಬಂಧಿಸಿದ ಇಂಜಿನಿಯರ್ ಯಾವುದೇ ಉತ್ತರ ನೀಡುತ್ತಿಲ್ಲ ನೀರು ಸಹ ನೀಡುತ್ತಿಲ್ಲ ಎಂದು ದೂರಿದರು.ಸಭೆಯಲ್ಲಿದ್ದ ಇಂಜಿನಿಯರ್ ಸರಿಪಡಿಸುವುದಾಗಿ ಉತ್ತರಿಸಿದರು. ಸಖರಾಯಪಟ್ಟಣಕ್ಕೆ ಮಂಜೂರಾಗುವ ಸರ್ಕಾರಿ ಇಲಾಖೆಗಳ ಕಟ್ಟಡಗಳಿಗೆ ನಿವೇಶನದ ಕೊರತೆ ಇದ್ದು ಎಲ್ಲಿಯಾದರೂ ಭೂಮಿಯನ್ನು ಖರೀದಿಸಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಈಗಾಗಲೇ ೨೭ ಎಕರೆ ಭೂಮಿಯನ್ನು ಗುರುತಿಸಿದ್ದು ತಾವು ಜಿಲ್ಲಾಡಳಿತಕ್ಕೆ ೧೦೦ ಎಕರೆ ಭೂಮಿ ಬೇಕೆಂದು ಮನವಿ ಮಾಡಿದ್ದು ಸಖರಾಯಪಟ್ಟಣಕ್ಕೂ ಆಧ್ಯತೆ ನೀಡುತ್ತೇನೆ ಭೂಮಿ ಸಿಕ್ಕಿದರೆ ಬಡವರಿಗೆ ನಿವೇಶನ ನೀಡಬಹುದು ಎಂದರು.

ನಿಡಘಟ್ಟ ಗ್ರಾಮದಲ್ಲಿ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆವಿಗೂ ಹಣ ಬಂದಿಲ್ಲ ಈ-ಸ್ವತ್ತು ಮಾಡಿ ಕೊಡುತ್ತಿಲ್ಲ ಕೇಳುವುದಕ್ಕೆ ಹೋದರೆ ಪಿಡಿಓ ಅನುಚಿತವಾಗಿ ವರ್ತಿಸುತ್ತಾರೆ ಎಂದು ಕಮಲಮ್ಮ ಕಣ್ಣೀರುಹಾಕಿ ಶಾಸಕರ ಮುಂದೆ ಅವಲತ್ತುಕೊಂಡರು. ಸಭೆಯಲ್ಲಿದ್ದ ಪಿಡಿಓ ಕಾರ್ಯವೈಖರಿಯ ಬಗ್ಗೆ ಶಾಸಕರು ಗರಂ ಆಗಿ ಇಓ ಗೆ ಸೂಚಿಸಿ ಕೂಡಲೆ ಇವರ ಸಮಸ್ಯೆ ಬಗೆ ಹರಿಸಿ ಎಂದರು.

ನಿಡಘಟ್ಟ ಗ್ರಾಮದಲ್ಲಿ ಈ ಸ್ವತ್ತಿನ ಸಮಸ್ಯೆ ಇದ್ದು ಒಬ್ಬ ವ್ಯಕ್ತಿಯ ಮಾತು ಕೇಳಿ ಪಿಡಿಒ ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಶಾಸಕರು ಸಮಸ್ಯೆ ಪರಿಹರಿಸಬೇಕು ಎಂದು ಹೇಮಾವತಿ ಮನವಿ ಮಾಡಿದರು.ಸಾರಿಗೆ ಸಂಸ್ಥೆಯ ಬಸ್ ಸಂಚಾರ ವಿಷಯದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಅಸಮರ್ಪಕ ಉತ್ತರ ನೀಡಿದಾಗ ಹೇಮಾವತಿ ಅವರು ತರಾಟೆಗೆ ತೆಗೆದುಕೊಂಡರು ಶಾಸಕರು ಡಿಪೋ ವ್ಯವಸ್ಥಾಪಕರಿಗೆ ಸಾರ್ವಜನಿಕರಿಗೆ ಉತ್ತರ ಕೊಡಲು ಬರುವುದಿಲ್ಲವೇ ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡವರ್‍ಯಾರು ಎಂದು ಗರಂ ಆದರು.

ಸಖರಾಯಪಟ್ಟಣದ ಚಂದ್ರಪ್ಪ ಎಂಬುವವರು ಪೊಲೀಸ್ ಅಧಿಕಾರಿಗಳು ತಾರತಮ್ಯ ಮಾಡುತ್ತಾರೆ ನನ್ನ ದೂರನ್ನು ಸ್ವೀಕರಿಸುತ್ತಿಲ್ಲ ನನಗೆ ಪ್ರಾಣ ಬೆದರಿಕೆ ಇದೆ ಎಂದು ಸಭೆಯಲ್ಲಿ ಗೋಳಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿಗಳಿಂದ ವಂಚಿತರಾಗಿರುವವರನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರೆ ಸಮಸ್ಯೆಗಳಿರುವ ಅರ್ಜಿಗಳನ್ನು ಪರಿಹರಿಸುವುದಾಗಿ ಹೇಳಿದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ೫ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಇದುವರೆವಿಗೂ ವೆಚ್ಚವಾಗಿರುವ ಹಣದ ಅಂಕಿ ಅಂಶಗಳನ್ನು ಸಭೆಗೆ ತಿಳಿಸಿದರು.

ಸಭೆಯಲ್ಲಿ ಸಖರಾಯಪಟ್ಟಣ ಹೋಬಳಿಯ ೧೧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ಸಖರಾಯಪಟ್ಟಣದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ತಹಸೀಲ್ದಾರ್.ಎಂ.ಪಿ.ಕವಿರಾಜ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್,ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪಿಡಿಒ ಲತಾ ಸೇರಿದಂತೆ ೧೧ ಗ್ರಾಮಗಳ ಜನರು ಇದ್ದರು.

Meeting of ‘Jana Sankasha’ covering 11 Gram Panchayats of Sakharayapatnam Hobli

About Author

Leave a Reply

Your email address will not be published. Required fields are marked *

You may have missed