September 16, 2024

ಭೂಮಿ ಸ್ವದೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ತಾರತಮ್ಯ

0
ಲಕ್ಯಾ ಗ್ರಾಮದ ನಿವಾಸಿಗಳು

ಲಕ್ಯಾ ಗ್ರಾಮದ ನಿವಾಸಿಗಳು

ಚಿಕ್ಕಮಗಳೂರು:  ಕೆ.ಎಂ. ರಸ್ತೆಯ ಲಕ್ಯಾ ಕ್ರಾಸ್‌ನಿಂದ ಲಕ್ಯ ಗ್ರಾಮದ ವರೆಗೆ ರಸ್ತೆ ಅಗಲೀಕರಣಕ್ಕೆ ಭೂಮಿ ಸ್ವದೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಸೀಲ್ದಾರ್ ಜೊತೆಗೆ ಪೊಲೀಸರು ಮತ್ತು ಇಂಜಿನೀಯರುಗಳು, ಗುತ್ತಿಗೆದಾರರು ಗುರುವಾರ ಬೆಳಗ್ಗೆ ರಸ್ತೆ ವಿಸ್ತರಣೆಗೆ ಜಾಗ ಗುರುತು ಪಡಿಸಲು ಮುಂದಾದಾಗ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡ ರೈತರು ಬಲಾಢ್ಯರು ಮತ್ತು ಸಣ್ಣ ರೈತರ ನಡುವೆ ಆಗುತ್ತಿರುವ ತಾರತಮ್ಯ ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಸರ್ವೇಕಾರ್ಯವನ್ನು ಕೈಬಿಟ್ಟು ಶುಕ್ರವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳು ತೀರ್ಮಾನಿಸಲಾಯಿತು.

ಈ ವೇಳೆ ರೈತ ಹೆಚ್.ಸಿ.ಸುರೇಂದ್ರ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ ರಸ್ತೆ ಮಧ್ಯದಿಂದ ಎರಡೂ ಬದಿಗೆ ತಲಾ ೧೨೦ ಅಡಿ ಜಾಗವನ್ನು ಪಡೆದುಕೊಳ್ಳಲು ಎಲ್ಲಾ ರೈತರು ಒಪ್ಪಿದ್ದಾರೆ. ಪ್ರತಿಯೊಬ್ಬರಿಗೂ ಪರಿಹಾರದ ಮೊತ್ತವನ್ನು ಪ್ರಕಟಿಸಲಾಗಿದೆ. ಆದರೆ ತೆಂಗಿನ ಮರಗಳು, ಬೇವು, ಮಾವಿನ ಮರಗಳು ತಂತಿ ಬೇಲಿ, ಅಡಿಕೆ ಗಿಡಗಳಿಗೆ ಮೌಲ್ಯ ನಿಗಧಿಪಡಿಸಿದ್ದರೂ ಸಾಗುವಾನಿ ಗಿಡಗಳಿಗೆ ಪರಿಹಾರವನ್ನೇ ನೀಡುತ್ತಿಲ್ಲ. ಹಳೇ ಲಕ್ಯ ಸರ್ವೇ ನಂಬರ್‌ನಲ್ಲಿ ಪ್ರತಿ ಎಕರೆಗೆ ೧೧.೪೦ ಲಕ್ಷ ರೂ ನಿಗಧಿ ಮಾಡಲಾಗಿದೆ. ಆದರೆ ಇದೇ ಬೇಲಿ ಪಕ್ಕದಲ್ಲಿ ಇನ್ನೊಂದು ಜಮೀನಿಗೆ ೪೪ ಲಕ್ಷ ರೂ.ನಿಗಧಿ ಮಾಡಲಾಗಿದೆ. ಈ ತಾರತಮ್ಯವನ್ನು ಸರಿಪಡಿಸಬೇಕು ಎಂದರು.

ಲೋಕೇಶ್ ಎಂಬುವವರು ಮಾತನಾಡಿ ನಿನ್ನೆ ಸರ್ವೇ ಮಾಡಿದ್ದಾರೆ. ತಾರತಮ್ಯ ಮಾಡಿರುವುದರಿಂದ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಕ್ಕೆ ಇಂದು ಬಳಗ್ಗೆ ಬಲವಂತವಾಗಿ ತಂತಿ ಬೇಲಿಗಳನ್ನು ನಾಶ ಮಾಡಲಾಗಿದೆ. ಹತ್ತು ಗುಂಟೆಗಿಂತಲೂ ಹೆಚ್ಚು ಬಿಡಬೇಕು ಎಂದು ಪೊಲೀಸರನ್ನು ಕರೆದು ತಂದು ಒತ್ತಡ ಹಾಕುತ್ತಿದ್ದಾರೆ. ಬಲಾಢ್ಯರ ಜಮೀನು ರಕ್ಷಿಸುವ ಸಲುವಾಗಿ ಹಳೇ ರಸ್ತೆಯನ್ನು ಬಿಟ್ಟು ನಮ್ಮ ಜಮೀನಿನ ಮೇಲೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಸ್ತವಾಂಶ ಪರಿಶೀಲಿಸಿ ನ್ಯಾಯ ದೊರಕಿಸಬೇಕು ಎಂದರು.

ವೆಂಕಟೇಶ್ ಎಂಬುವವರು ಮಾತನಾಡಿ, ಬಡವರನ್ನು ತುಳಿದು ಬಲಾಢ್ಯರ ಪರವಾಗಿ ಅಧಿಕಾರಿಗಳು ನಿಂತಿದ್ದಾರೆ. ದಬ್ಬಾಳಿಕೆ ಮಾಡಿ ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ದಾಂಧಲೆಗೆ ಮುಂದಾಗಿದ್ದಾರೆ. ಜಾಗವನ್ನು ಮೂರ್‍ನಾಲ್ಕು ಬಾರಿ ಅಳತೆ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ಜಾಗವನ್ನು ಗುರುತು ಮಾಡಿದ್ದಾರೆ. ಮೇಲಾಧಿಕಾರಿಗಳೇ ಬಂದು ನ್ಯಾಯ ಒದಗಿಸಬೇಕು ರಸ್ತೆ ಮಧ್ಯದಿಂದ ಎರಡೂ ಬದಿಯಲ್ಲಿ ೧೨೦ ಅಡಿ ಬಳಸಿಕೊಳ್ಳಲು ನಮ್ಮದೂ ಒಪ್ಪಿಗೆ ಇದೆ ಆದರೆ ಸಂಬಂಧ ಪಟ್ಟ ಇಂಜಿನೀಯರ್ ಮತ್ತು ಕಂಟ್ರಾಕ್ಟರ್‌ಗಳು ಬಂದು ಮನಸೋಇಚ್ಛೆ ಜಾಗ ಅಳೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಹಿಂದೆ ರಸ್ತೆ ಸಗಲೀಕರಣಕ್ಕೆ ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದ ಹಿನ್ನೆಲೆಯಲ್ಲಿ ವಾಪಾಸಾಗಿದ್ದ ಅಧಿಕಾರಿಗಳು, ಇಂದು ಬೆಳಗ್ಗೆ ಪೊಲೀಸರು ಮತ್ತು ತಹಸೀಲ್ದಾರರೊಂದಿ ಗೆ ಬಂದು ಜಮೀನು ಖುಲ್ಲಾ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಸರ್ಭದಲ್ಲಿ ಎಲ್ಲಾ ರೈತರು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ತಹಸೀಲ್ದಾರರಿಗೆ ಮನವರಿಕೆ ಮಾಡಿದ್ದೇವೆ ಎಂದರು.

ನಮಗಿರುವುದೇ ೧೦ ರಿಂದ ೨೦ ಗುಂಟೆ ಜಮೀನು ಅದರಲ್ಲಿ ಅರ್ಧಕ್ಕೂ ಹೆಚ್ಚು ಜಮೀನು ರಸ್ತೆಗೆ ಹೋದರೆ ನಮ್ಮ ಪರಿಸ್ಥಿತಿ ಏನು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ರಸ್ತೆಗೆ ಜಾಗ ಬಿಡುವುದಿಲ್ಲ ಎಂದು ನಾವು ಹೇಳುವುದಿಲ್ಲ. ಹಳೇ ರಸ್ತೆಯ ಮಧ್ಯದಿಂದ ಎರಡೂ ಬದಿಗೆ ಸಮನಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಿ ಎನ್ನುವುದು ನಮ್ಮ ಒತ್ತಾಯ ಎಂದರು. ಈ ಸಂದರ್ಭದಲ್ಲಿ ರೈತರುಗಳಾದ ಲೋಕೇಶ್, ಕುಮಾರ್, ತೀರ್ಥೇಗೌಡ, ಭದ್ರೇಗೌಡ, ಚಂದ್ರೇಗೌಡ, ಸಿದ್ಧೇಶ್ ಉಪಸ್ಥಿತರಿದ್ದರು.

Discrimination by authorities during land acquisition

About Author

Leave a Reply

Your email address will not be published. Required fields are marked *