September 22, 2024

ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ನಡೆಯುವುದೇ ಬದುಕಿನ ಗುರಿ

0
ಮೆಣಸೆ ಗ್ರಾಮ ಪಂಚಾಯಿಯಲ್ಲಿ ಸಂವಿಧಾನ ಜಾಗೃತಿ ಜಾಥದ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ

ಮೆಣಸೆ ಗ್ರಾಮ ಪಂಚಾಯಿಯಲ್ಲಿ ಸಂವಿಧಾನ ಜಾಗೃತಿ ಜಾಥದ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ

ಶೃಂಗೇರಿ: ‘೧೯೪೭ರ ಸ್ವಾತಂತ್ರ್ಯದ ಬಳಿಕ ದೇಶವು ಶತಮಾನದ ದಾಸ್ಯದಿಂದ ಮುಕ್ತಗೊಂಡಿದೆ. ಎಲ್ಲಾ ರಾಜ್ಯಗಳ ಒಕ್ಕೂಟವು ಹರಿದು ಹಂಚಿ ಹೋಗದೇ ಒಂದೇ ಸೂರಿನಡಿ ದೇಶದ ಸಮಗ್ರವಾದ ಏಕರೂಪವಾದ ಮೌಲ್ಯವನ್ನು ನಮಗೆ ೧೯೫೦ರ ಸಂವಿಧಾನ ನೀಡಿದ ಬಳಿಕ ಗಣತಂತ್ರವಾಯಿತು. ನಾವು ಭಾರತೀಯರು, ಸಂವಿದಾನದ ಕಾನೂನುಗಳಿಗೆ ಗೌರವ ನೀಡಿ ಅದರಲ್ಲಿರುವ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಶೃಂಗೇರಿ ತಾಲ್ಲೂಕಿನ ಮೆಣಸೆ ಗ್ರಾಮ ಪಂಚಾಯಿಯಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಸ್ವಾಗತಿಸಿ, ಡಾ.ಬಿ.ಆರ್ ಅಂಬೇಡ್ಕರ್‌ರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ ‘ಧಾರ್ಮಿಕ, ಸಾಮಾಜಿಕ, ಶಿಕ್ಷಣ ಮುಂತಾದ ಎಲ್ಲಾ ಸ್ವಾತಂತ್ರ್ಯಗಳನ್ನು ಸಂವಿಧಾನ ನಮಗೆ ನೀಡಿದೆ. ಭಾರತದ ಸಮಗ್ರತೆ, ಭಾವೈಕ್ಯತೆ, ಮಾನವೀಯತೆ, ಏಕತೆ ಸರ್ವರ ಗುರಿಯಾಗಬೇಕು. ದೇಶದ ಉನ್ನತಿಗೆ ಯುವಪೀಳಿಗೆ ಆದರ್ಶವಾದ ಮೌಲ್ಯಗಳನ್ನು ನೀಡಬೇಕು ಎಂದರು.

ಸಂವಿಧಾನ ಜಾಗೃತಿ ಜಾಥ ಕೇವಲ ಒಂದು ದಿನಗಳಿಗೆ ಸೀಮಿತವಾದ ಕಾರ್ಯಕ್ರಮವಲ್ಲ. ಅದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಅರ್ಥಪೂರ್ಣವಾದ ಜಾಥ. ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ಬದುಕಿನ ಮುಖ್ಯ ಗುರಿಯಾಗಬೇಕು’ ಎಂದರು.

ಉಪನ್ಯಾಸ ನೀಡಿದ ಉಪನ್ಯಾಸಕ ಎಚ್.ಎ ಪ್ರಕಾಶ್ ಮಾತನಾಡಿ, ‘ಭಾರತ ದೇಶದ ಸಂವಿಧಾನ ವಿಶಿಷ್ಟವಾದದ್ದು. ಅತಿ ದೀರ್ಘವಾದ ಲಿಖಿತ ರೂಪದ ಸಂವಿಧಾನ ನೀತಿ ನಿಯಮಗಳು ಅತ್ಯಂತ ಶ್ರೇಷ್ಠವಾದದ್ದು. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿತಗೊಂಡ ಸಂವಿಧಾನದ ಆಶಯಗಳನ್ನು ನಾವು ಆಚರಣೆಗೆ ತರಬೇಕು. ಮಾಡುವ ಕಾಯಕದಲ್ಲಿ ಎಲ್ಲರನ್ನೂ ಸಮಾನತೆಯಿಂದ ನೋಡಬೇಕು. ಸಮಾಜದಲ್ಲಿ ಇಂದಿಗೂ ಕೂಡಾ ಅಸಮಾನತೆ ಎದ್ದು ಕಾಣುತ್ತಿದೆ. ಜನಸಾಮಾನ್ಯರನ್ನು ನಾವು ತಲುಪಬೇಕಿದ್ದು ಅವರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅವರ ಆಶಯಗಳನ್ನು ಪರಿಪೂರ್ಣವಾಗಿಸುವಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ. ಜನರ ಹಿತಕ್ಕೆ ಅವಶ್ಯಕವಾದ ಸೌಕರ್ಯಗಳನ್ನು ನಾವು ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದರು.

ಜಾಥವು ಕೂತುಗೋಡು, ನೆಮ್ಮಾರ್, ಕೆರೆ, ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ತೆರಳಿತು. ಕಾರ್ಯಕ್ರಮದಲ್ಲಿ ಮೆಣಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಹಾಲಂದೂರು ಪಿಎಸಿಎಸ್‌ನ ಅಧ್ಯಕ್ಷ ಎ.ಎಸ್ ರಾಜೇಶ್, ಸಂಜೀವಿನಿ ಸಂಘದ ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿಯ ನರೇಗಾ ಯೋಜನೆ ನೀರ್ದೆಶಕ ಸುಧೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ, ಸಮನ್ವಯ ಅಧಿಕಾರಿ ಎನ್.ಜಿ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆಯ ನಟರಾಜ್ ಮತ್ತು ಜನಪ್ರತಿನಿಧಿಗಳು ಇದ್ದರು.

The aim of life is to follow the wishes of the constitution

About Author

Leave a Reply

Your email address will not be published. Required fields are marked *

You may have missed