September 22, 2024

ಎಸ್.ಬಿದರೆ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾಕೇಂದ್ರ ನೂತನ ಕಟ್ಟಡ ಉದ್ಘಾಟನೆ

0
ಎಸ್.ಬಿದರೆ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾಕೇಂದ್ರ ನೂತನ ಕಟ್ಟಡ ಉದ್ಘಾಟನೆ

ಎಸ್.ಬಿದರೆ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾಕೇಂದ್ರ ನೂತನ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್‌ಗಾಂಧಿ ಸೇವಾಕೇಂದ್ರ ನೂತನ ಕಟ್ಟಡವನ್ನು ಶಾಸಕ ಹೆಚ್.ಡಿ.ತಮ್ಮಯ್ಯ ಉದ್ಘಾಟನೆ ಮಾಡಿದರು.

ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಹಿಂದಿನ ಮತ್ತು ಇಂದಿನ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಒಟ್ಟಾಗಿ ಎನ್.ಆರ್.ಐಜಿ ಅಡಿಯಲ್ಲಿ ೬೦ ಲಕ್ಷ ರೂ ವೆಚ್ಚದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಅರ್ಪಣೆ ಮಾಡುವ ಮೂಲಕ ಜಿಲ್ಲೆಗೆ ಮಾದರಿಯಾಗಿದೆ ಎಂದರು.

ಬರಗಾಲ, ಅತಿವೃಷ್ಠಿ ಕಾಲದಲ್ಲಿ ಬಡವರಿಗೆ ನೌಕರಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಎನ್.ಆರ್.ಐಜಿ ಜಾರಿಗೆ ತರಲಾಯಿತು, ಅದರ ಸದುಪಯೋಗ ಪಡಿಸಿಕೊಂಡು ಪ್ರತಿ ಗ್ರಾಮ, ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಯಿತು ಎಂದರು.

ಕಡೂರು ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ ನೆಡೆಯುವ ಸಂದರ್ಭದಲ್ಲಿ ಎನ್.ಆರ್.ಐಜಿ ನಲ್ಲಿ ಜಿಲ್ಲೆಯಲ್ಲಿ ಶೇ. ೧೩೦% ರಷ್ಟು ಬಳಕೆ ಮಾಡಿರುವುದು ಎಸ್.ಬಿದರೆ ಗ್ರಾಮ ಪಂಚಾಯಿತಿ ಎಂದರು.

ನಾವು ಸ್ಥಳೀಯ ಸಂಸ್ಥೆಗಳಿಂದ ಬಂದಿರುವವರು ಆದ್ದರಿಂದ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಪ್ರತಿನಿಧಿಗಳಿಗೆ ಎಷ್ಟು ಪ್ರಾಮುಖ್ಯತೆ ಹಾಗೂ ಅವಕಾಶಗಳಿವೆ ಎಂಬುದು ನನಗೆ ತಿಳಿದಿದೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆ ಅಧ್ಯಕ್ಷರು ಸದಸ್ಯರು ಪಕ್ಷಬೇಧ ಮರೆತು ಇಚ್ಚಾಶಕ್ತಿಯಿಂದ ಕಾರ್ಯ ನಿರ್ವಹಿಸಿದಾಗ ಎಸ್.ಬಿದರೆ ಗ್ರಾಮ ಪಂಚಾಯಿತಿ ರೀತಿಯಲ್ಲಿ ಎಲ್ಲಾ ಪಂಚಾಯಿತಿಗಳು ಜಿಲ್ಲೆಗೆ ಮಾದರಿ ಆಗಬಹುದು ಎಂದರು.

ಶಾಸಕರು, ಸರ್ಕಾರ, ಮಂತ್ರಿಗಳು ಎಲ್ಲವನ್ನು ಮಾಡಲಿ ಎಂಬ ನಮಸ್ಥಿತಿಯಿಂದ ಹೊರಬಂದು ಸ್ಥಳಿಯ ಸಂಸ್ಥೆಗಳು ಗಟ್ಟಿಯಾಗಿ ನಿಂತು ಕೆಲಸ ಮಾಡಿದಾಗ ಕ್ಷೇತ್ರಕ್ಕೆ ಮಾದರಿ ಆಗಬಹುದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಕೃಷಿ ಬದುಕನ್ನು ಪ್ರೀತಿಯಿಂದ ಒಪ್ಪಿಕೊಂಡು ನೆಮ್ಮದಿಯ ಜೀವನ ನೆಡೆಸಿಕೊಂಡು ಬಂದಿದ್ದೇವೆ, ಕೃಷಿಯನ್ನೆ ನಂಬಿ ಜೀವನ ನಡೆಸಿಕೊಂಡು ಬಂದಿರುವ ನಮ್ಮ ಹಿರಿಯರು ಅಕ್ಷರ ಕಲಿಯದಿದ್ದರೂ ಸಹ ಬದುಕಿನಲ್ಲಿ ನೆಮ್ಮದಿ ಕಂಡಿದ್ದಾರೆ ಎಂದರು.

ಆದರೆ ಇಂದಿನ ಮಕ್ಕಳು ಕೃಷಿ ಲಾಭದಾಯಕ ಎಂಬುದನ್ನು ಮರೆತು, ಕೃಷಿ ಬದುಕಿನಿಂದ ದೂರ ಉಳಿದಿದ್ದಾರೆ, ಅಂದು ಹಿರಿಯರು ನೆಮ್ಮದಿಯ ಬದುಕಿನ ಜೊತೆಗೆ ಉತ್ತಮವಾದ ಬದುಕನ್ನು ನೆಡೆಸಲು ಸಾದ್ಯವಾಗಿತ್ತು, ದೇವರು ನಮಗೆ ಎಲ್ಲವನ್ನು ನೀಡಿದ್ದರು ನೆಮ್ಮದಿಯ ಬದುಕನ್ನು ಕಾಣಲು ಸಾದ್ಯವಾಗುತ್ತಿಲ್ಲ ಎಂದರು.

ಒಗ್ಗಟ್ಟಿನ ಶ್ರಮದ ಫಲದಿಂದ ಅತ್ಯತ್ತಮವಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಿ, ಲೋಕಾರ್ಪಣೆ ಮಾಡಲಾಗುತ್ತಿದೆ, ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯ ತಲುಪಿಸುವ ಜವಾಬ್ದಾರಿ ಗ್ರಾಮದ ಅಧ್ಯಕ್ಷರು, ಮತ್ತು ಸದಸ್ಯರ ಜವಾಬ್ದಾರಿಯಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಸಿ.ಲಕ್ಷ್ಮೀದೇವಿಜಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ಪಂಚಾಯಿತಿ ಸಾಗಿ ಬಂದ ದಾರಿಯಲ್ಲಿ ಇಂದು ಅಪರೂಪದ ದಿನವಾಗಿದ್ದು, ಗ್ರಾಮ ಸರ್ಕಾರವೇ ಮೂಲ ಸರ್ಕಾರ ಎಂಬುದು ನಮ್ಮ ಪ್ರಜಾ ಪ್ರಭುತ್ವದ ನಂಬಿಕೆ, ಗ್ರಾಮ ಉದ್ಧಾರವಾದರೆ ದೇಶ ಉದ್ಧಾರ ಎಂಬುದು ಜನ ತಂತ್ರ ನಂಬಿರುವ ಮಾತು ಎಂದರು.

ಗ್ರಾಮಗಳ ಪ್ರಗತಿಗೆ ಶ್ರಮಿಸಲು ಜನರಿಂದ ಆರಿಸಿಬಂದ ಗ್ರಾಮ ಪಂಚಾಯಿತಿ ಸದಸ್ಯರ ಕ್ರಿಯಾ ಚಟುವಟಿಕೆಗೆ ಸ್ಪಂದಿಸಲು ಒಂದು ಕಛೇರಿ ಬೇಕೆಂಬುದು ಎಲ್ಲರ ಕನಸ್ಸಾಗಿತ್ತು, ಸದಸ್ಯರ ಕಾಳಜಿಗೆ ಅನುಗುಣವಾಗಿ ಸ್ಪಂದಿಸಿ, ಪಿಡಿಓ ಮತ್ತು ಎಲ್ಲಾ ನೌಕರರ ಸಹಮತದ ಫಲಿತಾಂಶವೇ ಈ ನೂತನ ಕಟ್ಟಡವಾಗಿದೆ ಎಂದರು.

ಆಧುನಿಕ ಯುಗಕ್ಕೆ ತಕ್ಕಂತೆ ನೀರು, ಶೌಚಾಲಯ, ಆಸನ ವ್ಯವಸ್ಥೆ, ಪೀಠೋಪಕರಣ, ಕಂಪ್ಯೂಟರ್, ಸಾರ್ವಜನಿಕರಿಗೆ ಅನುಕೂಲವಾಗುವಂತಹ ವಿಶಾಲ ಸಭಾಂಗಣ, ರಕ್ಷಣಾತ್ಮಕ ಕಾಂಪೌಡ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಸುಸರ್ಜಿತ ಕಟ್ಟಡವಿಂದು ಲೋಕಾರ್ಪಣೆಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಸ್.ವಿನುತನ್, ಸದಸ್ಯರುಗಳಾದ ಮೀನಾಕ್ಷಿ, ನೇತ್ರಾವತಿ, ಚಂದನ್.ಕೆ.ಆರ್, ಬಿ.ಎಸ್.ಚಂದ್ರಶೇಖರ್, ಬಿ.ಟಿ.ಸತೀಶ್, ದ್ರಾಕ್ಷಾಯಿಣಮ್ಮ, ಗೌರಮ್ಮ, ಜಯಲಕ್ಷ್ಮೀ, ಶ್ರೀಲಕ್ಷ್ಮೀ, ಎಲ್.ಎಂ.ಶೋಭಾ, ಸುಕನ್ಯಾ, ದೇವರಾಜ್‌ನಾಯ್ಕ್, ನಾಗರಾಜ್.ಎನ್.ಎಸ್, ಸ್ಥಳೀಯರಾದ ನೀಲೇನಹಳ್ಳಿ ಜಗನಾಥ್, ಆನಂದನಾಯ್ಕ್, ನೀಲಕಂಠಪ್ಪ, ಜಗದೀಶ್, ಉಮೇಶ್, ರಾಜಣ್ಣ, ಕುಮಾರ್, ಜಗದೀಶ್‌ಪಿ.ಡಿ.ಓ ಯಮುನಾ, ಉಪಸ್ಥಿತರಿದ್ದರು.

Inauguration of new building of Rajiv Gandhi Sevakendra in S. Bidet village

About Author

Leave a Reply

Your email address will not be published. Required fields are marked *

You may have missed