September 22, 2024

ಎಸ್ಸೆಸ್ಸೆಲ್ಸಿಯ ಕಾಲಘಟ್ಟ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯ

0
ಎಸ್ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣೆ ಕುರಿತ ಒಂದು ದಿನದ ಕಾರ್ಯಾಗಾರ

ಎಸ್ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣೆ ಕುರಿತ ಒಂದು ದಿನದ ಕಾರ್ಯಾಗಾರ

ಶೃಂಗೇರಿ: ‘ಗುರುವಿನ ಮಾರ್ಗದರ್ಶನದಿಂದಲೇ ವಿದ್ಯಾರ್ಥಿಯ ಎಲ್ಲಾ ಸಂಕಷ್ಟಗಳೂ ಪರಿಹಾರವಾಗುತ್ತವೆ. ಪರೀಕ್ಷೆ ಎಂಬ ಭಯದಿಂದಲೇ ವಿದ್ಯಾರ್ಥಿ ಫಲಿತಾಂಶದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಾನೆ. ಗುರುವಿನ ಕೃಪೆಯು ಈ ಭಯವನ್ನು ದೂರಗೊಳಿಸುವಲ್ಲಿ ಚಿಕಿತ್ಸೆಯಂತೆ ಕಾರ್ಯನಿರ್ವಹಿಸುವುದರಿಂದ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸಬೇಕು’ ಎಂದು ಶೃಂಗೇರಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗುರುಗಳಾದ ಗುಣನಾಥ ಸ್ವಾಮೀಜಿಯವರು ಹೇಳಿದರು.

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಎಜುಕೇಶನ್ ಟ್ರಸ್ಟ್ ಹಾಗೂ ಶಾಲಾ ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಗುರಿ ಮುಟ್ಟಲು ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಲು ಎಸ್ಸೆಸ್ಸೆಲ್ಸಿಯ ಕಾಲಘಟ್ಟ ಒಂದು ಬುನಾದಿಯಾಗಿ ಮುಂದಿನ ಅವರ ಭವಿಷ್ಯಕ್ಕೆ ಅಡಿಪಾಯವಾಗಿದೆ. ಗೆಲುವು ಮತ್ತು ಸೋಲುಗಳಲ್ಲಿ ಯಾವುದೇ ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ನಿಮ್ಮ ಕರ್ತವ್ಯಗಳನ್ನು ಸಮಚಿತ್ತದಿಂದ ಮಾಡುವಂತೆ ಭಗವಂತನ ಅನುಗ್ರಹವಾಗಿದೆ. ಯಾರ ಪ್ರಜ್ಞೆಯಲ್ಲಿ ದಿವ್ಯತ್ವವಿದೆಯೋ ಅವನಲ್ಲಿ ಯಶಸ್ಸು ಇರುತ್ತದೆ. ಮೌನವಾಗಿ ನಿಮ್ಮ ಸಾಧನೆಯನ್ನು ದೃಷ್ಠಿಯಿಟ್ಟು ನೋಡಿ, ನಿಮ್ಮ ಅನುಭವಕ್ಕೆ ನಿಮ್ಮ ಸಾಧನೆ ಬಂದಾಗ ನಿಮ್ಮ ಯಶಸ್ಸು ಹತ್ತಿರವಾಗುತ್ತದೆ. ಪರೀಕ್ಷೆಯನ್ನು ಹಲವು ಪ್ರೇರಣೆಗಳಿಂದ ಎದುರಿಸಿ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎನ್.ಜಿ ರಾಘವೇಂದ್ರರವರು ಮಾತನಾಡಿ, ‘ಹಲವಾರು ಕ್ರಿಯಾತ್ಮಕ ಪ್ರಯೋಗಗಳಿಂದ ಜಿಲ್ಲೆಯಲ್ಲಿ ಶೃಂಗೇರಿ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಥಮ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಮಕ್ಕಳ ನಿರಂತರ ಪ್ರಯತ್ನಗಳಿಂದ ತಾಲ್ಲೂಕು ಮತ್ತು ಜಿಲ್ಲೆಯ ಪ್ರಗತಿಯೊಂದಿಗೆ ವಿದ್ಯಾರ್ಥಿಯ ವಯಕ್ತಿಕ ಪ್ರಗತಿಯೂ ಸಾಧ್ಯವಾಗಿದೆ’ ಎಂದರು.

ರಾಷ್ಟ್ರೀಯ ತರಬೇತುದಾರರಾದ ಕಾರ್ಕಳದ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ‘ಮೌನ ಪ್ರಾರ್ಥನೆ, ಕೇಳಿಸಿಕೊಳ್ಳುವ ಕಲೆ, ಮೌನ ಓದು, ಸಂಖ್ಯೆಗಳ ಸ್ಮರಣೆ ಮುಂತಾದ ಅಂಶಗಳನ್ನು ಪ್ರಾಯೋಗಿಕವಾಗಿ ತೊಡಗಿಸಿಕೊಂಡು ಪರೀಕ್ಷೆಗೆ ತಯಾರಾಗಬೇಕು. ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಒತ್ತಡ ಬೀಳದಂತೆ ವಿದ್ಯಾರ್ಥಿಗಳು ಈಗಿನಿಂದನೇ ಅಭ್ಯಾಸ ಮಾಡಬೇಕು. ಪ್ರತಿ ಅಂಕವು ಮುಖ್ಯವಾಗಿದ್ದು, ಪಠ್ಯ ಕ್ರಮದ ಎಲ್ಲಾ ವಿಷಯವನ್ನು ಸರಿಯಾಗಿ ಅಭ್ಯಾಸ ಮಾಡಿಕೊಂಡಿರಬೇಕು. ಕಲಿತ ವಿಷಯವನ್ನು ಪುನಃ ಮನನ ಮಾಡಿಕೊಳ್ಳಬೇಕು ಎಂದರು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಾಗಾರದಲ್ಲಿ ತಾಲ್ಲೂಕಿನ ಎಲ್ಲಾ ಪ್ರೌಢ ಶಾಲೆಗಳ ೫೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ, ಬೆಳ್ತಂಗಡಿಯ ಪರಿಸರ ತಜ್ಞ ದುಗ್ಗಪ್ಪಗೌಡ, ಎನ್.ಆರ್ ಪುರದ ಕಟ್ಟಿನಮನೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಿಇಒ ಕೆ.ಸಿ ನಾಗೇಶ್, ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಅಭಿಲಾಷ್, ಸುಧಾ, ಮೈತ್ರಿ, ಭಾರತೀ, ಪೂರ್ಣೇಶ್ ಮತ್ತು ತಾಲ್ಲೂಕಿನ ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

One day workshop on exam motivation for SSLC students

 

About Author

Leave a Reply

Your email address will not be published. Required fields are marked *

You may have missed