September 22, 2024

ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಬಿಲ್ ಪಾವತಿಗೆ ಬ್ಲಾಕ್ ಮೇಲ್

0
ನೂತನ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ಸಿ.ಟಿ.ರವಿ ಭೇಟಿ

ನೂತನ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ಸಿ.ಟಿ.ರವಿ ಭೇಟಿ

ಚಿಕ್ಕಮಗಳೂರು:  ನಗರದ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯಲ್ಲೂ ರಾಜ್ಯ ಸರ್ಕಾರ ಪರ್ಸೆಂಟೇಜ್ ಹೊಡೆಯುವ ಸಲುವಾಗಿ ಬಿಲ್ ಪಾವತಿ ಮಾಡದೆ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.

ನೂತನ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಇನ್ನೂ ಕಾಲೇಜು ಬ್ಲಾಕ್‌ನಲ್ಲಿ 100 ಕೋಟಿ.ರು.ಗಳಿಗೂ ಹೆಚ್ಚಿನ ಬಿಲ್ ಪಾವತಿಸುವುದು ಬಾಕಿ ಇದೆ. 45 ಕೋಟಿ ರು. ಗಳಿಗೂ ಹೆಚ್ಚಿನ ಬಿಲ್ ಆಸ್ಪತ್ರೆ ಬ್ಲಾಕ್‌ಗೆ ಸಂಬಂಧಿಸಿದ್ದು ಬಾಕಿ ಇದೆ.

2023 ಮಾರ್ಚ್ ನಂತರ ಯಾವುದೇ ಬಿಲ್‌ನ್ನು ಕೊಟ್ಟಿಲ್ಲ.  ಹಾಗಾದರೆ ಇವರಿಗೆ ಆಧ್ಯತೆ ಏನು ? ಜನರಿಗೆ ಉಪಯೋಗವಾಗುವ ಮೂಲ ಸೌಕರ್ಯಕ್ಕೆ ತಕ್ಷಣಕ್ಕೆ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕೋ ? ಅಥವಾ ಇದರಲ್ಲೂ ಬ್ಲಾಕ್ ಮೇಲ್ ಮಾಡುತ್ತ ಪರ್ಸೆಂಟೇಜ್‌ಗಾಗಿ ತೊಂದರೆ ಕೊಡುವುದು ಆಧ್ಯತೆಯ ಎಂದು ಪ್ರಶ್ನಿಸಿದರು.
ದುರಾದೃಷ್ಟ ಎಂದರೆ ಎರಡನೇ ವರ್ಷದ ಮೆಡಿಕಲ್ ತರಗತಿ ಆರಂಭಗೊಂಡಿವೆ. ಎರಡನೇ ಬ್ಯಾಚ್ ಬರಲಿದೆ. ಮೊದಲ ಬ್ಯಾಚ್‌ನಲ್ಲಿ ಶೇ.99 ರಷ್ಟು ಫಲಿತಾಂಶವೂ ಬಂದಿದೆ. ಇದಕ್ಕೆ ಪ್ರಥಮ ಆದ್ಯತೆ ಕೊಟ್ಟು ಪೂರ್ಣಗೊಳಿಸಬೇಕು.

ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಕಳೆದ ವರ್ಷ ಮಾರ್ಚ್‌ನಲ್ಲಿ ಬಿಲ್ ನೀಡಲಾಗಿತ್ತು. ಈ ಸರ್ಕಾರ ಬಂದ ನಂತರ ಒಂದು ಬಿಡಿಗಾಸನ್ನೂ ನೀಡಿಲ್ಲ ಎಂದರು.

ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆಂದು 638 ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿತ್ತು. ಇದೀಗ ಕಾಲೇಜು ಬ್ಲಾಕ್ ಮೊದಲ ಹಂತದ ಕಾಮಗಾರಿ ಏಪ್ರಿಲ್ ಅಥವಾ ಮೇ ವೇಳೆಗೆ ಪೂರ್ಣಗೊಳ್ಳಲಿದೆ. ಹಾಸ್ಟಲ್, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಮುಂದಿನ ವರ್ಷದ ವೇಳೆಗೆ ಪೂರ್ಣಗೊಳ್ಳಬಹುದು. ಕಾಮಗಾರಿ ಪರಿಶೀಲನೆಗೆಂದು ಒಂದು ತಂಡ ರಚಿಸಿದ್ದರು. ಅವರೆಲ್ಲ ತನಿಖೆ ಮಾಡಿ ವರದಿ ಸಲ್ಲಿಸಿದ್ದಾರೆ.

ಯಾವ ಕಾರಣಕ್ಕೋ ಏನೋ ಗೊತ್ತಿಲ್ಲ. ಹಾಸನ ಜಿಲ್ಲೆ ಮಾಜಿ ಸಚಿವ ಶಿವರಾಂ ಹೇಳಿದಂತೆ ಪರ್ಸೆಂಟೇಜ್‌ನ ಸೆಟ್ಲ್‌ಮೆಂಟ್‌ಗೆ ಒತ್ತಡ ನಿರ್ಮಾಣ ಮಾಡುವ ತಂತ್ರವೂ ಇರಬಹುದು ಎಂದರು.

ಈಗಾಗಲೇ ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಾ ಬಂದಿದೆ. ಎನ್‌ಒಸಿ ಕೊಟ್ಟ ತಕ್ಷಣ ಉಳಿದ ಹಣವನ್ನೂ ಬಿಡುಗಡೆ ಮಾಡುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅದ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಟಿ. ರಾಜಶೇಖರ್‌ ಇದ್ದರು.

Former minister CT Ravi visited the construction site of the new medical college building

About Author

Leave a Reply

Your email address will not be published. Required fields are marked *

You may have missed