September 22, 2024
ತೊಗರಿಹಂಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಸಜ್ಜಿತ ಶಾಲಾ ಕಟ್ಟಡ ಉದ್ಘಾಟನೆ

ತೊಗರಿಹಂಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಸಜ್ಜಿತ ಶಾಲಾ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು: ಕ್ಷೇತ್ರದ ತೊಗರಿಹಂಕಲ್ ಶಾಲೆ ಆವರಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.

ಅವರು ಇಂದು ತೊಗರಿಹಂಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು ೨೫ ಲಕ್ಷ ರೂ ವೆಚ್ಚದಲ್ಲಿ ವಿವೇಕ ಯೋಜನೆಯಡಿ ನಿರ್ಮಿಸಿರುವ ಸುಸಜ್ಜಿತ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರು, ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಬದ್ದವಾಗಿದ್ದೇನೆ. ಕೆಲವರು ಸುಂದರ ತಾಣಗಳನ್ನು ಬಯಸಿದರೆ ಇನ್ನು ಕೆಲವರು ತಾವಿರುವ ತಾಣವನ್ನೇ ಸುಂದರವಾಗಿ ಮಾಡಲು ಬಯಸುತ್ತಾರೆ. ಇದು ಶ್ರೇಷ್ಠ ಎಂದು ಹೇಳಿದರು.

ಇದೊಂದು ಸರ್ಕಾರಿ ಶಾಲೆ ಕಾರ್ಯಕ್ರಮವಾದರೂ ಗ್ರಾಮದಲ್ಲಿ ಹಬ್ಬದ ಆಚರಣೆ ರೀತಿ ನಡೆಯುತ್ತಿದೆ ಎಂದು ಶ್ಲಾಘಿಸಿದ ಅವರು ಇಂದು ಉದ್ಘಾಟನೆಯಾಗಿರುವ ಈ ಶಾಲಾ ಕಟ್ಟಡವನ್ನು ಮುಂದಿನ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಬಳಸುವಂತಾಗಲಿ. ಮುಂದೆ ಈ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೀಳರಿಮೆ ಬರದಂತೆ ಶಿಕ್ಷಕರು, ಆಡಳಿತ ಮಂಡಳಿ, ಚುನಾಯಿತ ಪ್ರತಿನಿಧಿಗಳು ಸಹಕಾರ ಕೊಡುವ ಮೂಲಕ ಇದನ್ನು ತೊಡೆದುಹಾಕಿ, ವಿದ್ಯಾರ್ಥಿಗಳಿಗೆ ಮುಂದೆ ಒಳ್ಳೆ ಭವಿಷ್ಯ ಇದೆ ಎಂಬ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡೋಣ ಎಂದು ಹಾರೈಸಿದರು.

ಯಾವುದೇ ಒಂದು ವಸ್ತು ಅಥವಾ ವಿದ್ಯೆ ಸುಲಭವಾಗಿ ಸಿಗಬಾರದು. ಈ ರೀತಿ ದೊರೆತವುಗಳಿಗೆ ಅದರ ಘನತೆ ಮತ್ತು ತೂಕ ಯಾರಿಗೂ ಗೊತ್ತಾಗುವುದಿಲ್ಲ. ಕಷ್ಟಪಟ್ಟು ಸಂಪಾದನೆ ಮಾಡಿದಾಗ ಮಾತ್ರ ಅದರ ಮೌಲ್ಯ ಹೆಚ್ಚಾಗಿ ದೀರ್ಘಕಾಲ ಬಾಳುತ್ತದೆ ಎಂದು ವಿಶ್ಲೇಷಿಸಿದರು.

ಖಾಸಗಿ ಶಾಲೆ ಶಿಕ್ಷಕರಿಗಿಂತ ಸರ್ಕಾರಿ ಶಾಲೆ ಶಿಕ್ಷಕರು ಗುಣಮಟ್ಟದ ಶಿಕ್ಷಕರಾಗಿರುತ್ತಾರೆ. ಶಿಕ್ಷಕರ ತರಬೇತಿ ಪಡೆದು, ಮೆರಿಟ್‌ನಲ್ಲಿ ತೇರ್ಗಡೆ ಹೊಂದಿದವರಿಗೆ ಮಾತ್ರ ಸರ್ಕಾರಿ ಶಾಲೆ ಉದ್ಯೋಗ ಸಿಗುತ್ತದೆ. ಹಣದಿಂದಾಗಲೀ, ರಾಜಕಾರಣಿಗಳ ಶಿಫಾರಸ್ಸಿನಿಂದಾಗಲೀ ಸಿಗುವುದಿಲ್ಲ ಎಂದು ಹೇಳಿದರು.

ಶಿಕ್ಷಕರು ತಾವು ಕಲಿತು ಮೇಣದ ಬತ್ತಿಯಂತೆ ಬೆಳಕು ಚೆಲ್ಲುತ್ತಾರೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ಉನ್ನತ ಹುದ್ದೆಯನ್ನು ಸಂಪಾದಿಸಿ, ಸದೃಢ-ಸಮೃದ್ಧ, ಶಾಂತಿಯುತ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ದೇವರಾಜ್, ತಾ.ಪಂ ಮಾಜಿ ಉಪಾಧ್ಯಕ್ಷ ವೈ.ಜಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಗ್ರಾ.ಪಂ ಅಧ್ಯಕ್ಷ ಮೇಘನ ಪುನೀತ್, ಗ್ರಾ.ಪಂ ಸದಸ್ಯರುಗಳಾದ ವಲ್ಲಿ, ವಿಮಲ, ದಾವುದ್, ಮುಖ್ಯ ಶಿಕ್ಷಕಿ ರೂಪ ಉಪಸ್ಥಿತರಿದ್ದರು. ಮೊದಲಿಗೆ ಮುಖ್ಯೋಪಾಧ್ಯಾಯರಾದ ಹೇಮಲತಾ ಸ್ವಾಗತಿಸಿದರು.

Togarihankal Govt Senior Primary School

About Author

Leave a Reply

Your email address will not be published. Required fields are marked *

You may have missed