September 8, 2024

ಅಸ್ಪೃಶ್ಯತೆ ಜೀವಂತವಾಗಿರಲು ನಮ್ಮನ್ನು ಅತೀ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಪಕ್ಷವೇ ಕಾರಣ

0
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಭೀಮ ಸಮಾವೇಶ ಕಾರ್ಯಕ್ರಮ

ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಭೀಮ ಸಮಾವೇಶ ಕಾರ್ಯಕ್ರಮ

ಚಿಕ್ಕಮಗಳೂರು: ನಮ್ಮಲ್ಲಿ ಇಂದೀಗೂ ಅಸ್ಪೃಶ್ಯತೆ ಜೀವಂತವಾಗಿರಲು ನಮ್ಮನ್ನು ಅತೀ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಪಕ್ಷವೇ ಕಾರಣ. ಆದರೆ ಅಂಬೇಡ್ಕರ್ ಅವರಿಗೆ ಯಾವ ಗೌರವವನ್ನು ಕಾಂಗ್ರೆಸ್ ಕೊಡಲಿಲ್ಲವೋ ಅದನ್ನು ನೀಡಿದ್ದು ಬಿಜೆಪಿ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಅವರು ಬುಧವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಅಂದರೆ ದಲಿತರಿಂದ ದೂರ ಎನ್ನುವ ಮಾತು ಮೊದಲಿತ್ತು. ಈಗ ಹಾಗಿಲ್ಲ. ಪಕ್ಷದಲ್ಲಿ ನಮ್ಮ ಸ್ಥಾನ ಮಾನ ಏನು? ನಮ್ಮ ಭವಿಷ್ಯವೇನು ಎನ್ನುವುದನ್ನು ತಿಳಿದುಕೊಂಡು ಬಿಜೆಪಿಯಲ್ಲಿ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ ಎಂದರು.

ಅಂಬೇಡ್ಕರ್ ಜೀವಿತಾವಧಿಯಲ್ಲಿ ಕಾಂಗ್ರೆಸ್ ಇಡೀ ದೇಶದಲ್ಲಿ ಬಲಿಷ್ಠವಾಗಿತ್ತು. ಅಂಬೇಡ್ಕರ್ ಅವರೂ ಸಚಿವರಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಸಾಕಷ್ಟು ಹಿಂಸೆ, ನೋವನ್ನು ಅನುಭವಿಸಿ ಈ ಕಾಂಗ್ರೆಸನ್ನು ನಂಬಬೇಡಿ. ಇದು ದಲಿತರ ಪಾಲಿಗೆ ಸುಡುವ ಮನೆ ಎಂದಿದ್ದರು. ಅವರಿಗಾದ ನೋವು, ಅನ್ಯಾಯ, ಮೋಸ, ವಂಚನೆಗಳು ಇದಕ್ಕೆ ಕಾರಣ ಎಂದರು.

ಅಂಬೇಡ್ಕರ್ ಅವರ ಜೊತೆಯಲ್ಲಿದ್ದವರು ನಾವ್ಯಾರೂ ಅಲ್ಲ. ಆದರೆ ಚರಿತ್ರೆ ಮೂಲಕ ಅವರನ್ನು ನಾವು ಅವರನ್ನು ತಿಳಿದುಕೊಂಡಿದ್ದೇವೆ. ಒಪ್ಪಿದ್ದೇವೆ. ಅಂತಹ ಶ್ರೇಷ್ಠ ವ್ಯಕ್ತಿ ಈ ಪ್ರಪಂಚದಲ್ಲಿ ಯಾರೂ ಸಿಗಲು ಸಾಧ್ಯವಿಲ್ಲ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದಿದಿದವರು, ಡಾಕ್ಟರೇಟ್ ಮಾಡಿ ಬಂದ ಮೇಲೆ ಭಾರತದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದರು. ನಾವೇನಾದರೂ ಇಂದು ಈ ಮಟ್ಟಕ್ಕೆ ಬಂದು ಕುಳಿತಿದ್ದರೆ ಅವರ ಆಶೀರ್ವಾದ ಇಲ್ಲದೆ ಸಾಧ್ಯವೇ ಇಲ್ಲ ಎಂದರು.

ಈ ದೇಶವನ್ನು ಬಹುಕಾಲ ಆಡಳಿತ ಮಾಡಿದ್ದು ಕಾಂಗ್ರೆಸ್ ಆ ಪಕ್ಷವು ತನ್ನ ನೀತಿಯಲ್ಲಿ ಅಸ್ಪೃಶ್ಯತೆ ಮಾಡುವವರಿಗೆ ಪಕ್ಷದ ಸದಸ್ಯತ್ವ ಇಲ್ಲ ಎಂದು ಹೇಳಿಬಿಟ್ಟಿದ್ದರೆ ಇಂದಿನ ವರೆಗೆ ದೇಶದಲ್ಲಿ ಅಸ್ಪೃಶ್ಯತೆ ಇರುತ್ತಿರಲಿಲ್ಲ ಎಂದು ಅಂಬೇಡ್ಕರ್ ಅಂದೇ ಹೇಳಿದ್ದಾರೆ ಎಂದರು.

ದಲಿತರು ರಾಜಕೀಯದಿಂದ ದೂರ ಇರಬಾರದು, ಹಾಗೆಂದು ರಾಜಕೀಯವೇ ಜೀವನ ಆಗಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೂ ಇದನ್ನೇ. ನಮಗೆ ಸೌಲತ್ತು ಸಿಗುವುದು, ಮೀಸಲಾತಿಯ ಫಲವನ್ನು ಅನುಭವಿಸುವುದು. ಅಧಿಕಾರವನ್ನು ಗಳಿಸುವುದು ಸಹ ಅತ್ಯವಶ್ಯಕ ಆ ಕಾರಣದಿಂದ ನಮ್ಮ ಸಮುದಾಯಗಳನ್ನು ಇಡೀ ರಾಜ್ಯದಲ್ಲಿ ನಮ್ಮನ್ನು ನಾವು ಒಗ್ಗಟ್ಟಾಗಿ ಬಿಜೆಪಿ ಮೂಲಕ ನಮ್ಮಲ್ಲಿರು ಸಮಸ್ಯೆಗಳು, ಅಪನಂಬಿಕೆಗಳನ್ನು ಸರಿಪಡಿಸಿಕೊಂಡು ನಮ್ಮ ಭವಿಷ್ಯವನ್ನು ಕಾಣಲು ಮುಂದಾಗಬೇಕು ಈ ಸಲುವಾಗಿ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ರೀತಿ ಜಾತಿ ರಾಜಕಾರಣ ಮಾಡಲು ಈ ಸಭೆ ಕರೆದಿಲ್ಲ. ಬೇರಿಗೆ ನೀರು ಕೊಟ್ಟರೆ ಸ್ವಾಭಾವಿಕವಾಗಿ ಮರಕ್ಕೆ ಬಲ ಬಂದೇ ಬರುತ್ತದೆ ಎನ್ನುವ ಚಿಂತನೆಯೊಂದಿಗೆ ವಾಸ್ತವಿಕತೆಯನ್ನು ಮನವರಿಕೆ ಮಾಡಲು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ರಾಮನಿಲ್ಲದ ರಾಷ್ಟ್ರವನ್ನು ಕಲ್ಪಿಸಿಕೊಳ್ಳು ಹೇಗೆ ಸಾಧ್ಯವಿಲ್ಲವೂ ಹಾಗೇ ಭೀಮ ನಿಲ್ಲದ ಭಾರತವನ್ನು ಕೂಡ ಯೋಚಿಸಲು ಆಗುವುದಿಲ್ಲ. ಭೀಮ ಮತ್ತು ಭೀಮನ ಸಂವಿಧಾನವೇ ಭಾರತವನ್ನು ಬಲಪಡಿಸುವ ಕೆಲಸವನ್ನು ಮಾಡಿದ್ದು, ಸಾಂಸ್ಕೃತಿಕ ನಾಯಕನಾಗಿ ರಾಮ ಭಾರತವನ್ನು ಬಲಗೊಳಿಸಿದರೆ, ಸ್ವತಂತ್ರ್ಯ ಭಾರತದ ಭೀಮ ಸಂವಿಧಾನದ ಮೂಲಕ ಆಧುನಿಕ ಭಾರತವನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದರು.

ಬಿಜೆಪಿ ಅಂಬೇಡ್ಕರ್ ಎಂದು ಆರೋಪಿಸುತ್ತಾರೆ. ಆದರೆ ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ಸೋಲಿಸಿ, ಸತ್ತ ಮೇಲೂ ಅಪಮಾನ ಮಾಡಿದ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಎಂದು ಆರೋಪಿಸಿದರು.

ಭಾರತ ರತ್ನ ಕೊಡಬೇಕೆಂದು ಪ್ರಸ್ತಾವನೆ ಸಲ್ಲಿಸಿ ಪ್ರಶಸ್ತಿ ಕೊಡುವಂತೆ ಮಾಡಿದ ಅಟಲ್ ಬಿಹಾರಿ ಮತ್ತು ಬಿಜೆಪಿ ಅಂಬೇಡ್ಕರ್‌ಅವರಿಗೆ ನಿಜವಾದ ಗೌರವ ಕೊಡುವ ಕೆಲಸ ಮಾಡಿದ್ದು ಎಂದರು.

ಅಂಬೇಡ್ಕರ್ ಅವರ ಪಂಚಧಾಮಗಳನ್ನು ಪಂಚ ತೀರ್ಥಗಳನ್ನಾಗಿ ಅಭಿವೃದ್ಧಿ ಪಡಿಸಿದ ನರೇಂದ್ರ ಮೋದಿ ಮತ್ತು ಬಿಜೆಪಿ ಅಂಬೇಡ್ಕರ್ ಅವರು ಅಂಬೇಡ್ಕರ್ ಅವರ ವಿರೋಧಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನವೆಂಬರ್ ೨೬ ರಂದು ಸಂವಿಧಾನದ ಕರಡು ಪ್ರತಿಯನ್ನು ಸಲ್ಲಿಸಿದ ದಿನ ಮೋದಿ ಅವರು ಪ್ರಧಾನಿ ಆಗಿ ಬರುವವರೆಗೆ ಆದಿನವನ್ನು ಕಾನೂನು ದಿನ ಎಂದು ಕರೆಯುತ್ತಿದ್ದರು. ಮೊದಿ ಅವರು ಅದು ಕೇವಲ ಕಾನೂನು ದಿನವಲ್ಲ ಸಂವಿಧಾನ ಗೌರವ ದಿನ ಎಂದು ಕರೆದರು ಈ ಮೋದಿ ಸಂವಿಧಾನದ ವಿರೋಧಿಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಬಂದರೆ ಮೀಸಲಾತಿ ಕಿತ್ತು ಹಾಕುತ್ತಾರೆ ಎಂದು ಮತ್ತೊಂದು ಆರೋಪ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಪರಿಶಿಷ್ಠರ ಮೀಸಲಾತಿಯನ್ನು ಶೇ.೧೫ ರಿಂದ ೧೭ ಕ್ಕೆ ಹಾಗೂ ಪರಿಶಿಷ್ಠ ಪಂಗಡದವರ ಮೀಸಲಾತಿಯನ್ನು ಶೇ. ೩ ರಿಂದ ಶೇ.೭ ಕ್ಕೆ ಹೆಚ್ಚಿಸಿದ್ದು ಕಾಂಗ್ರೆಸ್ ಅಲ್ಲ, ಬಿಜೆಪಿ, ಅಲ್ಲದೆ ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಶೋಷಿತ ವರ್ಗಕ್ಕೆ ಸೇರಿದ ರಾಮನಾಥ ಕೋವಿಂದ್ ಮತ್ತು ದ್ರೌಪದಿ ಮುರ್ಮು ಅವರುಗಳನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಸಂಪಂಗಿ, ಚಿ.ನಾ.ರಾಮು. ಕಾರ್ಯದರ್ಶಿ ನರೇಂದ್ರ, ಹಂಪಯ್ಯ, ಜೆ.ಡಿ.ಲೋಕೇಶ್, ಹಿರಿಗಯ್ಯ, ನರಸಿಂಹ, ಮಂಜುನಾಥ್, ಹಿರೇಮಗಳೂರು ರೇವನಾಥ್, ಕೇಶವಮೂರ್ತಿ, ಚಿ.ನ.ರಾಮು ಸುಜಿತ್ ಇತರರು ಭಾಗವಹಿಸಿದ್ದರು.

Bhima convention program by District BJP SC Morcha

About Author

Leave a Reply

Your email address will not be published. Required fields are marked *

You may have missed