September 16, 2024

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೆಂಬಲಿಸಲು ಮನವಿ

0
ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿ

ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿ

ಚಿಕ್ಕಮಗಳೂರು: : ಮುಂಬರುವ ಜೂನ್ ಮಾಹೆಯಲ್ಲಿ ನಡೆಯಲಿರುವ ನೈರುತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿ ಶಿಕ್ಷಕ ಸಮುದಾಯದಲ್ಲಿ ಮನವಿ ಮಾಡಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸರ್ಕಾರ ಮತ್ತು ಈ ಚುನಾವಣೆ ನಡೆಯಲಿರುವ ಭಾಗದಲ್ಲಿ ೧೫ ಕಾಂಗ್ರೆಸ್ ಪಕ್ಷದ ಶಾಸಕರು ಜಯ ಗಳಿಸಿರುವುದು ಪ್ರಸ್ತುತ ಶಿಕ್ಷಕರು ಮತ್ತು ಉಪನ್ಯಾಸಕರು, ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ೫ ಕಾಂಗ್ರೆಸ್ ಪಕ್ಷದ ಶಾಸಕರುಗಳು ಜಯ ಗಳಿಸಿರುವುದು ಪಕ್ಷದ ಕಾರ್ಯಕರ್ತರ, ಮುಖಂಡರುಗಳ ಪರಿಶ್ರಮದಿಂದ ಜಯಗಳಿಸಿದ್ದಾರೆ. ಆದರೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡರು ತಮ್ಮ ಬೆಂಬಲದಿಂದ ಜಿಲ್ಲೆಯಲ್ಲಿ ೫ ಶಾಸಕರ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆಂದು ಆರೋಪಿಸಿದರು.

ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಭೋಜೇಗೌಡರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು ನಾನೇ ಎಂದು ಹೇಳುತ್ತಾ ಕಾಂಗ್ರೆಸ್ ಮುಖಂಡರುಗಳ ಮನೆ ಮುಂದೆ ನಿಂತು ಪೋಸ್ ಕೊಡುತ್ತಿದ್ದಾರೆ, ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದಾಗಿ ಅಭ್ಯರ್ಥಿಯಾಗಲು ಆ ಪಕ್ಷಗಳ ಮುಖಂಡರುಗಳ ಮನೆಗೆ ತಡಕಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ವಿಜಯ ಸಾಧಿಸಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ಇವರನ್ನು ಈ ಬಾರಿ ಸೋಲಿಸಬೇಕೆಂದು ವಿನಂತಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳು ಪರಾಭವಗೊಂಡಿದ್ದರೂ ಭೋಜೇಗೌಡರು ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದಾರೆ. ಇದು ಯಾವ ಸಾಧನೆಗಾಗಿ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹೆಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ಜಿ.ಹೆಚ್ ಶ್ರೀನಿವಾಸ್, ಕೆ.ಎಸ್ ಆನಂದ್ ಹಾಗೂ ನಯನ ಮೋಟಮ್ಮ ಇವರುಗಳು ಸಮರ್ಥ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದ್ದು, ಅವರುಗಳು ಸ್ವ ಸಾಮರ್ಥ್ಯದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಭೋಜೇಗೌಡರು ಇವರ ಗೆಲುವಿನಲ್ಲಿ ನನ್ನ ಪಾತ್ರ ಇದೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಭೋಜೇಗೌಡರು ಗೆಲುವು ಸಾಧಿಸಲು ಇವರು ಯಾವಾಗಲೂ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಪಕ್ಷದಲ್ಲೇ ಇರುತ್ತಿದ್ದರು. ಇದನ್ನು ಗಮನಿಸಿದ ಶಿಕ್ಷಕ ಸಮೂಹ ನಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಆಶಾಭಾವನೆಯಿಂದ ಮತ ನೀಡಿದ್ದು, ಇವರ ಈ ತಟಸ್ಥ ನಿಲುವಿನಿಂದ ಶಿಕ್ಷಕರು ಭ್ರಮನಿರಶನಗೊಂಡು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಬೇಕೆಂದು ನಿರ್ಧರಿಸಿದ್ದಾರೆಂದು ಹೇಳಿದರು.

ಪವಿತ್ರವಾಗಿದ್ದ ನೈರುತ್ಯ ಶಿಕ್ಷಕರ ಕ್ಷೇತ್ರ ಕಳೆದ ಬಾರಿ ಚುನಾವಣೆಯಲ್ಲಿ ಎಸ್.ಎಲ್ ಭೋಜೇಗೌಡರ ನಿಲುವಿನಿಂದ ಅಪವಿತ್ರಗೊಂಡಿದ್ದು, ಕಾಂಗ್ರೆಸ್ ಪಕ್ಷದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರವನ್ನು ಪವಿತ್ರಗೊಳಿಸಲು ಈ ಸಂದರ್ಭದಲ್ಲಿ ಶಿಕ್ಷಕರು ಸಂಕಲ್ಪ ಮಾಡಬೇಕೆಂದು ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ನಂದಕುಮಾರ್, ಎಲ್.ಹೇಮಂತ್, ಫಣಿರಾಜ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಉಪಸ್ಥಿತರಿದ್ದರು.

An appeal to support the candidate of the Congress party in the election of the South-West teacher’s constituency

About Author

Leave a Reply

Your email address will not be published. Required fields are marked *