September 8, 2024

ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಿ

0
ಮೀನಾ ನಾಗರಾಜ್‌

ಮೀನಾ ನಾಗರಾಜ್‌

ಚಿಕ್ಕಮಗಳೂರು: ಅಮೃತ್ ಕುಡಿಯುವ ನೀರು ಸರಬರಾಜು ಯೋಜನೆಯಂತೆ ಪ್ರತಿದಿನ ನಗರದ ಎಲ್ಲಾ ಬಡಾವಣೆಗಳಿಗೂ ಕುಡಿಯುವ ನೀರು ಸರಬರಾಜು ಮಾಡುವಂತೆ, ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಗರದ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಮತ್ತು ಒಳಚರಂಡಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಅಮೃತ್ ಯೋಜನೆ ಕಾಮಗಾರಿ ನಗರದಲ್ಲಿ ಪೂರ್ಣಗೊಂಡಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರಸಭೆಗೆ ಹಸ್ತಾಂತರಿಸಲಾಗಿದೆ. ನಗರದ ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿ ನಗರದಲ್ಲಿ ೧೩ ಮೇಲೆತ್ತರದ ಜಲ ಸಂಗ್ರಹಗಾರಗಳಿದ್ದು, ೨ ನೆಲಮಟ್ಟದ ಜಲ ಸಂಗ್ರಹಗಾರಗಳಿವೆ ನೆಲಮಟ್ಟದ ಜಲ ಸಂಗ್ರಹಗಾರಗಳಲ್ಲಿ ಸರಿಯಾಗಿ ನೀರನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಉಪ್ಪಳ್ಳಿ, ಕಲ್ಲುದೊಡ್ಡಿ ಪ್ರದೇಶಗಳಿಗೆ ನೀರಿನ ಅಭಾವವ ಅರಿತು ಕೆಳಮಟ್ಟದಲ್ಲಿರುವ ಪ್ರದೇಶಗಳಾದ ತಮಿಳ್ ಕಾಲೋನಿ, ಹನುಮಂತಪ್ಪ ವೃತ್ತದ ಹತ್ತಿರ ವಾಲ್ವ್‌ಗಳನ್ನು ಸರಿಯಾಗಿ ಓಸನ್ ಮಾಡದೆ ಇರುವುದರಿಂದ ಎತ್ತರ ಪ್ರದೇಶದಲ್ಲಿರುವ ಜಲ ಸಂಗ್ರಹಗಾರಗಳಿಗೆ ನೀರು ಸರಿಯಾಗಿ ಸರಬರಾಜು ಆಗದೇ ಇರುವುದರಿಂದ ಎಲ್ಲಾ ಜಲ ಸಂಗ್ರಹಗಾರಗಳ ಹತ್ತಿರದಿಂದ ಎಸ್‌ಸಿಎಡಿಎದಿಂದ ಕಂಟ್ರೋಲ್ ಮಾಡಿ ನಂತರ ೨ ಕಡೆ ನೇರ ಸಂಪರ್ಕವಿರುವ ಕೊಳವೆಗಳನ್ನು ಬಂದ್ ಮಾಡಲಾಗಿದೆ. ಸದ್ಯ ಎಲ್ಲಾ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಕೆಹೆಚ್‌ಬಿ ಹತ್ತಿರವಿರುವ ಎಸ್‌ಸಿಎಟಿಎ ಕಂಟ್ರೋಲ್ ರೂಂನಿಂದಲೇ ನಿಯಂತ್ರಿಸಬಹುದು ಎಂದರು.

ಕೆಲವು ರಸ್ತೆಗಳ ಮನೆಗಳಿಗೆ ನಿಧಾನಗತಿಯಲ್ಲಿ ನೀರು ಸರಬರಾಜು ಆಗುತ್ತಿದ್ದು, ಸರಿಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು  ರಸ್ತೆಯನ್ನು ಹಾಳು ಮಾಡದೆ ಕ್ರಮ ವಹಿಸುವಂತೆ ತಿಳಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿ ಮುಖ್ಯ ರಸ್ತೆಯಿಂದ ಅಡ್ಡ ರಸ್ತೆಗಳಲ್ಲಿ ಅಳವಡಿಸಿರುವ ಟೀ-ಪಾಯಿಂಟ್, ರೆಡ್ಯೂಸರ್‌ಗಳಲ್ಲಿ ಬ್ಲಾಕ್ ಆಗಿರುವುದು, ಅಲ್ಲದೆ ಮನೆಯ ಮೀಟರ್ ಹತ್ತಿರ ಫಿಲ್ಟರ್ ಪರಿಶೀಲಿಸಿ ಬ್ಲಾಕೇಜ್‌ನ್ನು ತೆರವುಗೊಳಿಸಿದರೆ ನೀರು ಸರಬರಾಜು ಸರಿಹೋಗುತ್ತದೆ ಎಂದು ಮಾಹಿತಿ ನೀಡಿದರು.

ಅಮೃತ್ ಕಾಮಗಾರಿ ನಿರ್ವಹಿಸಿದ ಗುತ್ತಿಗೆ ದಾರರ ಕಡೆಯಿಂದ ಇಬ್ಬರು ನುರಿತ ಇಂಜಿನಿಯರ್‌ಗಳನ್ನು ನಿಯೋಜಿಸಿ ಹಾಗೂ ನಗರಸಭೆಯಿಂದ ನೀರು ಸರಬರಾಜು ನಿರ್ವಹಣೆಗೆ ನೇಮಿಸಿರುವ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಎಲ್ಲೆಲ್ಲಿ ಸಮಸ್ಯೆಯಿದೆ ಅಂತಹ ವಾರ್ಡ್‌ಗಳಲ್ಲಿ ಪರಿಶೀಲಿಸಿ ಕ್ರಮ ವಹಿಸುವಂತೆ ಹೇಳಿದ ಅವರು ಇನ್ನು ಮುಂದೆ ನಗರದಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರ ಯೋಜನಾ ನಿರ್ದೇಶಕರಾದ ನಾಗರತ್ನ, ನಗರಸಭೆ ಪೌರಾಯುಕ್ತರಾದ ಬಸವರಾಜು, ನಗರಸಭೆ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

Meeting to review the progress of drinking water supply and drainage projects under Amrit Yojana

About Author

Leave a Reply

Your email address will not be published. Required fields are marked *

You may have missed