September 19, 2024

ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿ

0
Congress government implementation of 5 guarantee schemes for the people of the state

Congress government implementation of 5 guarantee schemes for the people of the state

ಚಿಕ್ಕಮಗಳೂರು:  ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಾದರಿಯಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಅನುಷ್ಠಾನ ಮಾಡಿದ ಪರಿಣಾಮ ಇಂದು ಸಂಭ್ರಮಿಸುತ್ತಿದ್ದಾರೆಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ವತಿಯಿಂದ ನಡೆದ ಚಿಕ್ಕಮಗಳೂರು ತಾಲೂಕು ಮಟ್ಟದ ೫ ಗ್ಯಾರಂಟಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ಸಂಕಷ್ಟದಿಂದ ಜನರು ತತ್ತರಿಸಿಹೋಗಿದ್ದಾರೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇಲ್ಲದ ಸಂದರ್ಭದಲ್ಲಿ ೫ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಯಿತು. ಅಧಿಕಾರಕ್ಕೆ ಬಂದ ೮ ತಿಂಗಳಲ್ಲಿ ಆ ೫ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವ ಮೂಲಕ ಬಡ ಜನರಿಗೆ ಶಕ್ತಿ ನೀಡಲಾಗಿದ್ದು, ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರ್ಥಿಕ ಪರಿಣತರಾಗಿದ್ದು, ೩ಲಕ್ಷ ೩೦ಸಾವಿರ ಕೋಟಿಯನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ೪೬ ಸಾವಿರ ಕೋಟಿ ಕೊಡಲಾಗಿದೆ. ಯಾವುದೇ ಇಲಾಖೆಯಿಂದ ಸವಲತ್ತು ನೀಡುತ್ತಿಲ್ಲ ಸರ್ಕಾರದಿಂದಲೇ ಹಣ ನೀಡಲಾಗುತ್ತಿದೆ. ಇಂಧನ ಇಲಾಖೆಯಲ್ಲಿ ೧.೬೫ ಕೋಟಿ ಫಲಾನುಭವಿಗಳಿದ್ದಾರೆ. ಮೆಸ್ಕಾಂ ಇಲಾಖೆಗೆ ಯಾವುದೇ ಹೊರೆಯಾಗುತ್ತಿಲ್ಲ. ಸರ್ಕಾರ ಹಣಕೊಡುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ನೋಟು ಬದಲಾವಣೆ ಮಾಡಿದ ಪರಿಣಾಮ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅದರ ಉದ್ದೇಶ ಈಡೇರಿಲ್ಲ, ಕೋವಿಡ್ ಸಂದರ್ಭದಲ್ಲಿ ಜನರು ಕಷ್ಟಗಳನ್ನು ಎದುರಿಸಬೇಕಾಯಿತು. ವಿಮಾನ ನಿಲ್ದಾಣದಲ್ಲೇ ಕಟ್ಟೆಚ್ಚರ ವಹಿಸಿದ್ದರೆ ಕೊರೋನಾ ಸೋಂಕು ಹರಡುತ್ತಿರಲಿಲ್ಲ, ಜಿಎಸ್‌ಟಿಯಿಂದ ಜನರಿಗೆ ಹೊರೆಯಾಗಿದೆ. ಸ್ವಾತಂತ್ರ್ಯ ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಕಷ್ಟವಾಗಿತ್ತು. ಆದರೂ ನೆಹರು ದೇಶವನ್ನು ಮುಂದೆ ತೆಗೆದುಕೊಂಡು ಹೋದರು. ದೇಶಕ್ಕೆ ಒಳ್ಳೆಯ ಆರ್ಥಿಕ ತಳಪಾಯವನ್ನು ಹಾಕಿಕೊಟ್ಟರು ಎಂದು ಬಣ್ಣಿಸಿದರು.

ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ದೇಶದ ಗೋದಾಮಿನಲ್ಲಿ ಆಹಾರ ಶೇಖರಿಸಲು ಸಾಧ್ಯವಾಯಿತು. ದೇಶಕ್ಕೆ ಉದಾರ ನೀತಿಯನ್ನು ತರಲಾಯಿತು. ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಮತ್ತು ಸಮಾಜಿಕ ಸ್ವಾತಂತ್ರ್ಯ ದೊರೆಯಬೇಕೆಂಬುದು ಅಂಬೇಡ್ಕರ್ ಆಶಯವಾಗಿತ್ತೆಂದರು.

ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡಜನರು ಬ್ಯಾಂಕಿನಲ್ಲಿ ಖಾತೆ ತೆರೆಯಲು ಸಾಧ್ಯವಾಯಿತು. ೨೦ ಅಂಶಗಳ ಕಾರ್ಯಕ್ರಮ ರೂಪಿಸಿ, ಪ್ರತಿಯೊಬ್ಬರಿಗೂ ಶಕ್ತಿ ತುಂಬುವ ಕೆಲಸ ನಡೆಯಿತು ಎಂದು ಸ್ಮರಿಸಿದರು.

ರಾಜ್ಯದ ಯುವಜನರಿಗೆ ಉದ್ಯೋಗ ಕೊಡಬೇಕಾಗಿದೆ. ನಿರುದ್ಯೋಗಿ ಯುವಜನರಿಗೆ ಎರಡು ವರ್ಷ ಉಚಿತವಾಗಿ ಹಣನೀಡುವ ಯುವನಿಧಿಯನ್ನು ಜಾರಿಗೊಳಿಸಲಾಗಿದೆ. ಕೆಲವರು ಬಿಟ್ಟಿ ಭಾಗ್ಯಗಳೆಂದು ಟೀಕಿಸುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಸರ್ಕಾರ ಪಡೆದು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸಮಾಡಲಾಗುತ್ತಿದೆ. ಇದರಿಂದ ಜನರಲ್ಲಿ ಕೊಳ್ಳುವ ಶಕ್ತಿ ಬಂದಿದೆ. ಉದ್ಯೋಗ ದೊರೆಯುತ್ತಿದೆ. ಸುಳ್ಳುಹೇಳುವುದು ಕೆಲವರಿಗೆ ಅಭ್ಯಾಸವಾಗಿಹೋಗಿದೆ ಎಂದು ಆರೋಪಿಸಿದರು.

ಯುವ ಜನರು ನಮ್ಮ ಆಸ್ತಿ. ಅವರು ಸುಖ, ಸಂತೋಷದಿಂದ ಇರಬೇಕೆಂದು ಸರ್ಕಾರ ಬಯಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು ತಮ್ಮ ಹಂತದಲ್ಲೇ ಜನರ ಸಮಸ್ಯೆ ಆಲಿಸಿದರೆ ಅವರು ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ ಈ ನಿಟ್ಟಿನಲ್ಲಿ ಮಾನವೀಯತೆಯಿಂದ ಕೆಲಸ ನಿರ್ವಹಿಸುತ್ತೇವೆಂಬ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ೬೭,೭೨೮ ಜನರು ಹೆಸರು ನೋಂದಯಿಸಿದ್ದಾರೆ. ೬೪,೮೪೭ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಉಳಿದ ೩ಸಾವಿರ ಜನರು ಸೌಲಭ್ಯಸಿಕ್ಕಲ್ಲ ತಪ್ಪುಗಳನ್ನು ಸರಿಪಡಿಸಿ ಅವರಿಗೂ ಸೌಲಭ್ಯ ದೊರೆಕುವಂತೆ ಮಾಡಲಾಗುವುದು ಎಂದು ಹೇಳಿದರು.

ಜನರ ತೆರಿಗೆ ಹಣವನ್ನು ಜನರ ಕಲ್ಯಾಣಕ್ಕೆ ನೀಡುತ್ತಿದ್ದು, ಕಷ್ಟಗಳಿಗೆ ಸ್ಪಂದಿಸುವ ಕೆಲಸ ನಡೆಯುತ್ತಿದೆ. ಅಧಿಕಾರ ಅನುಭವಿಸುತ್ತಿದ್ದವರು ಈಗ ಅಧಿಕಾರ ಕಳೆದಕೊಂಡಿದ್ದಾರೆ. ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಸರ್ಕಾರದ ಗ್ಯಾರಂಟಿಗಳನ್ನು ಸಹಿಸಿಕೊಳ್ಳಲಾಗದೆ ಟೀಕೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಆದರೆ ಸರ್ಕಾರ ಬಡವರ ಪರವಾಗಿ ಕೆಲಸಮಾಡುತ್ತಿದೆ. ಜನಸ್ನೇಹಿ ಆಡಳಿತ ನೀಡುತ್ತಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲಸುವಂತೆ ಮಾಡಲಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ಹೊಸ ಯೋಜನೆ, ಯೋಚನೆ ಮಾಡುತ್ತಿದೆ. ಜನರಿಗೆ ಸಮಾಜಿಕ, ಆರ್ಥಿಕ ಭದ್ರತೆ ಒದಗಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುವಿಗಳಾದ ಅಂತೋಣಿ, ಪ್ರೀತಿ, ಜಮೀಲ, ತರೀಕೆರೆಯ ಲಕ್ಷ್ಮಿ, ದೇವರಳ್ಳಿಯ ಶ್ರೀಮತಿ ರೂಪ ಮತ್ತಿತರರು ಪ್ರಯೋಜನದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ,ಕನಕರಡ್ಡಿ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್‌ಅಮಟೆ, ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್ ತಹಶಿಲ್ದಾರ್ ಸುಮಂತ್ ತಾಪಂ ಕಾರ್ಯ ನಿರ್ವಹಣಾಧಿಕಾರಿ ತಾರನಾಥ್, ನಗರಸಭೆ ಆಯುಕ್ತ ಬಸವರಾಜ್ ಇದ್ದರು.

Congress government implementation of 5 guarantee schemes for the people of the state

About Author

Leave a Reply

Your email address will not be published. Required fields are marked *

You may have missed