September 20, 2024

ಪಶುವೈದ್ಯಾಧಿಕಾರಿಗಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯ

0
ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ತಾಂತ್ರಿಕ ಕಾರ್ಯಾಗಾರ

ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ತಾಂತ್ರಿಕ ಕಾರ್ಯಾಗಾರ

ಚಿಕ್ಕಮಗಳೂರು: ಜಿಲ್ಲೆಯ ಪಶುವೈದ್ಯಾಧಿಕಾರಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪಶುಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಬೇಕೆಂಬ ಸದಾಶಯ ಹೊಂದಿದಾಗ ಮಾತ್ರ ಉದ್ಯೋಗಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಮೋಹನ್‌ಕುಮಾರ್ ಕರೆ ನೀಡಿದರು.

ಅವರು ಇಂದು ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಶಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಕಿರಿಯ ಪಶುವೈದ್ಯಕೀಯ ಪರೀಕ್ಷಕರುಗಳಿಗೆ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪಶುಗಳಿಗೆ ಬರುವ ಕಾಲುಬಾಯಿ ಜ್ವರ ಸೇರಿದಂತೆ ಇತರೆ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಕುರಿತು ಸಮಗ್ರ ಮಾಹಿತಿ ನೀಡಲು ಈ ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾದ ಅಗತ್ಯ ಹೊಂದಿದ್ದು ಇದರ ಉದ್ದೇಶವೂ ಅದೇ ಆಗಿದೆ ಎಂದರು.

ಈ ಬಗ್ಗೆ ಸಂಪೂರ್ಣ ಮಾಹಿತಿ ಪಶುವೈದ್ಯಾಧಿಕಾರಿಗಳಿಗೆ ಇರಬೇಕೆಂಬ ಕಾರಣಕ್ಕೆ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಪಶು ವೈದ್ಯರನ್ನು ಒಟ್ಟಿಗೆ ಸೇರಿಸಿ ಕಾರ್ಯಾಗಾರದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಶು ವೈದ್ಯರು ಪಡೆದುಕೊಂಡು ರೈತರಿಗೆ ನೆರವಾಗಬೇಕೆಂದು ತಿಳಿಸಿದರು.

ಪಶು ವೈದ್ಯಕೀಯ ಇಲಾಖೆಯ ಉದ್ಯೋಗದಲ್ಲಿ ಒತ್ತಡ ಸಹಜ ಆದರೆ ಪಶುಗಳ ಆರೈಕೆ ಕುರಿತು ಸಂಬಂಧಿಸಿದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಈ ಬದಲಾದ ಕಾಲಘಟ್ಟದಲ್ಲಿ ಡಾಟಾ ಎಂಟ್ರಿ ಮಾಡಬೇಕಾಗಿರುವುದರಿಂದ ಕಂಪ್ಯೂಟರ್ ಜ್ಞಾನಕ್ಕೆ ಹೊಂದಿಕೊಂಡು ಕೆಲಸ ಮಾಡಿದಾಗ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.

ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಕೇವಲ ಸಮಯ ಸೀಮಿತಗೊಳಿಸದೆ ಮುಂದಿನ ದಿನಗಳಲ್ಲಿ ಕೇಂದ್ರ ಸಂಘದ ಜನಪ್ರತಿನಿಧಿಗಳು ಆಯ್ಕೆಯಾಗಿ ಬರಲಿದ್ದಾರೆ. ಆದ್ದರಿಂದ ತಮ್ಮ ಮನಸ್ಥಿತಿಗಳನ್ನು ಬದಲಿಸಿಕೊಂಡು ಉತ್ತಮ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.

ಪಶು ವೈದ್ಯಕೀಯ ಜಿಲ್ಲಾ ಸಂಘದ ಅಧ್ಯಕ್ಷ ಹೆಚ್.ಡಿ ಪದ್ಮೇಗೌಡ ಮಾತನಾಡಿ, ಇತ್ತೀಚೆಗೆ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಹಾಗೂ ಇಲಾಖೆಯಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ದಿನನಿತ್ಯ ಕೈಗೊಳ್ಳುವ ಸೇವೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲು ಭಾರತ್ ಪಶುದನ್ ಎಂಬ ಆಪ್‌ನ್ನು ಬಿಡುಗಡೆ ಮಾಡಲಾಗಿದ್ದು, ಇದರ ಮೂಲಕ ಪಶುಪ್ರಾಣಿಗಳ ಸ್ವವಿವರಗಳನ್ನು ದಾಖಲಿಸಬಹುದಾಗಿದೆ ಎಂದರು.

ಹಾಸನ ಜಿಲ್ಲೆಯ ಆಲೂರು ಪಶುವೈದ್ಯಾಧಿಕಾರಿ ಡಾ|| ಚಂದನ್ ಕೆ.ಎನ್ ಮಾತನಾಡಿ, ಭಾರತ್ ಪಶುದನ್ ಆಪ್ ಬಿಡುಗಡೆ ಮಾಡಿರುವುದರಿಂದ ಪಶು ಆಸ್ಪತ್ರೆಗಳಲ್ಲಿ ಕೈಗೊಳ್ಳುವ ಚಿಕಿತ್ಸೆ, ಸೇವೆ, ಕಾರ್ಯಕ್ರಮಗಳನ್ನು ದಾಖಲು ಮಾಡಬೇಕಾಗಿದೆ ಎಂದು ಹೇಳಿದರು.

ಜಾನುವಾರುಗಳಿಗೆ ಲಸಿಕೆ ನೀಡಿದ್ದನ್ನು ದೃಢಪಡಿಸಲು ಕಿವಿಗಳಿಗೆ ಓಲೆ ಅಳವಡಿಸಲಾಗುವುದು. ಈ ಕಿವಿ ಓಲೆಯಲ್ಲಿರುವ ನಂಬರ್‌ಗಳನ್ನು ಈ ಆಪ್‌ನಲ್ಲಿ ಎಂಟ್ರಿ ಮಾಡಿರಬೇಕು. ಮುಂದೆ ಈ ಕಿವಿ ಓಲೆ ನಂಬರ್‌ಗಳನ್ನು ಸ್ಕ್ಯಾನ್ ಮಾಡಿದಾಗ ಪಶು ಎಲ್ಲಿದೆ ಎಂಬ ಬಗ್ಗೆ ಹಾಗೂ ಎಷ್ಟು ಬಾರಿ ಚಿಕಿತ್ಸೆ ನೀಡಲಾಗಿದೆ ಎಂಬ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಚಂದ್ರಗೌಡ, ನವೀನ್, ಕಾರ್ಯದರ್ಶಿ ಬಿ.ಎಂ ಪ್ರಕಾಶ್, ಖಜಾಂಚಿ ಜಯದೇವ ಮೂರ್ತಿ, ಕಂಠಿ, ಸೋಮಣ್ಣ ಮತ್ತಿತರರು ಭಾಗವಹಿಸಿದ್ದರು.

Computer knowledge is essential for veterinarians

About Author

Leave a Reply

Your email address will not be published. Required fields are marked *