September 20, 2024

ಬೇಸಿಗೆಯಲ್ಲಿ ಅರಣ್ಯದಂಚಿನಲ್ಲಿ ಆಕಸ್ಮಿಕ ಬೆಂಕಿ : ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

0
ಕೆಸ್ವಾನ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೂತೆ ವೀಡಿಯೋ ಸಂವಾದ

ಚಿಕ್ಕಮಗಳೂರು:  ಬೇಸಿಗೆಯಲ್ಲಿ ಅರಣ್ಯದಂಚಿನಲ್ಲಿ ಉಂಟಾಗುವ ಆಕಸ್ಮಿಕ ಬೆಂಕಿ ಅರಣ್ಯ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅಧಿಕಾರಿಗಳಿಗೆ ಸೂಚಿಸಿದರು.

ಕೆಸ್ವಾನ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರೊಂದಿಗೆ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಚಳಿಗಾಲ ಮುಗಿದು ಬೇಸಿಗೆ ಆವರಿಸುತ್ತಿದೆ. ಇಂಥ ಸಂದರ್ಭದಲ್ಲಿ ಕಾಡ್ಗಿಚ್ಚು ಹಬ್ಬಿ ಅಪಾರವಾದ ಅರಣ್ಯ ಸಂಪತ್ತು, ಪ್ರಾಣಿ, ಪಕ್ಷಿ ಸಂಪತ್ತು ನಾಶವಾಗುವ ಸಾಧ್ಯತೆಗಳಿರುತ್ತವೆ ಎಂದ ಅವರು. ಮುಳ್ಳುಯ್ಯನಗಿರಿಗೆ ಹೊಂದಿಕೊಂಡಿರುವ ಚನ್ನಗೊಂಡನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಯಾವುದೇ ಜೀವ ಸಂಕುಲಗಳಿಗೆ ಹಾಗೂ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟಾಗಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತದಿಂದ ಪಾರಗಲಾಗಿದೆ ಎಂದು ಅವರು ಜಿಲ್ಲೆಯಲ್ಲಿ ಮುಂದೆ ಇಂತಹ ಅನಾಹುತಗಳಿಗೆ ಆಸ್ಪದವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಬೆಂಕಿ ಅವಘಡಗಳು ಸಂಭವಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರೊಂದಿಗೆ ಸಂಪರ್ಕದಿಂದ ಇದ್ದು, ಬೆಂಕಿ ಅನಾಹುತದಿಂದಾಗುವ ಸಮಸ್ಯೆಗಳ ಕುರಿತು ಅವರಲ್ಲಿ ಅರಿವು ಮೂಡಿಸಬೇಕಲ್ಲದೆ. ಇಂತಹ ಅನಾಹುತಗಳು ಸಂಭವಿಸಿದ ತಕ್ಷಣ ಇಲಾಖೆಗೆ ಕೂಡಲೇ ಮಾಹಿತಿ ನೀಡುವಂತೆ ಸ್ಥಳೀಯರಿಗೆ ತಿಳಿಸಿ ಎಂದು ಅಧಿಕಾರಿಗಳಿಗೆ ಹೇಳಿದ ಅವರು ಸ್ಥಳೀಯರ ಸಹಕಾರದಿಂದ ಮಾತ್ರ ಇಂತಹ ಅಪಾಯದಿಂದ ಪಾರಾಗಲು ಸಾಧ್ಯ. ಬೆಂಕಿ ಅವಘಡಗಳು ಸಂಭವಿಸುವ ಪ್ರದೇಶಗಳಲ್ಲಿ ಬೆಂಕಿ ರೇಖೆಯನ್ನು ನಿರ್ಮಿಸುವಾಗ ಸ್ಥಳೀಯ ಎಸ್ಟೇಟ್ ಹಾಗೂ ರೆಸಾರ್ಟ್, ಹೋಂ ಸ್ಟೇ ಮಾಲೀಕರುಗಳಿಗೆ ಮಾಹಿತಿ ನೀಡಿ ಎಚ್ಚರಿಕೆಯಿಂದ ನಿರ್ವಹಿಸುವಂತೆ ತಿಳಿಸಿದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕರಪತ್ರ, ಭಿತ್ತಿ ಪತ್ರಗಳ ಮೂಲಕ ಅರಿವು ಮೂಡಿಸಬೇಕು. ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ಇಲಾಖೆಯನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ ಹಾಗೂ ಟೋಲ್ ಫ್ರೀ ನಂಬರನ್ನು ಪ್ರಕಟಿಸಬೇಕು. ಇದನ್ನು ಶೀಘ್ರವಾಗಿ ಎಲ್ಲಾ ತಹಸೀಲ್ದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಸಂಖ್ಯೆ, ಟೋಲ್ ಫ್ರೀ ನಂಬರನ್ನು ಪ್ರಕಟಿಸುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಮಾತನಾಡಿ ಬೆಂಕಿ ಅವಘಡಗಳು ಸಂಭವಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸಿ ಅಲ್ಲಿ ಕಾವಲುಗಾರರನ್ನು ನೇಮಿಸಬೇಕಲ್ಲದೆ ಸ್ಥಳೀಯರೊಂದಿಗೆ ಸಂಪರ್ಕದಲ್ಲಿದ್ದು ಬೆಂಕಿ ರೇಖೆಯನ್ನು ಸೂಕ್ತವಾಗಿ ಮಾಡಿ ಅನಾಹುತಗಳು ನಡೆಯದಂತೆ ಕ್ರಮ ವಹಿಸಬೇಕು ಎಂದರು.

ವೀಡಿಯೋ ಸಂವಾದದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಜರಿದ್ದರು.

Video interaction of forest department officials in Keswan

About Author

Leave a Reply

Your email address will not be published. Required fields are marked *