September 20, 2024

ಕೆ.ಎಸ್.ಆರ್.ಟಿ.ಸಿ.‌ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ

0
ಸಾರಿಗೆ ಬಸ್ ನಿಲ್ದಾಣದ ಅಂಗಡಿಗಳಿಗೆ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ದಿಢೀರ್‌ ಭೇಟಿ

ಸಾರಿಗೆ ಬಸ್ ನಿಲ್ದಾಣದ ಅಂಗಡಿಗಳಿಗೆ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ದಿಢೀರ್‌ ಭೇಟಿ

ಚಿಕ್ಕಮಗಳೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಳಿಗೆಗಳಲ್ಲಿ ತಿಂಡಿ-ತಿನಿಸುಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ನೀಡುವ ಮೂಲಕ ವ್ಯಾಪಾರ ಮಾಡಬೇಕೆಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎಚ್ಚರಿಸಿದರು.

ಅವರು ಇಂದು ಸಾರಿಗೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲ ಎಂಬ ಸಾರ್ವಜನಿಕರಿಂದ ಬಂದ ದೂರನ್ನಾಧರಿಸಿ ದಿಢೀರ್ ಭೇಟಿನೀಡಿ ಪರಿಶೀಲಿಸಿ ಸಂಬಂಧಿಸಿದ ಅಂಗಡಿಯವರಿಗೆ ಸ್ವಚ್ಛತೆ ಕಾಪಾಡುವುದರ ಜೊತೆಗೆ ತಿನಿಸುಗಳನ್ನು ಸುರಕ್ಷಿತವಾಗಿಡಬೇಕೆಂದು ಸೂಚಿಸಿದರು.

ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ರೋಗ-ರುಜಿನಗಳಿಗೆ ತುತ್ತಾಗುವ ಸಂಭವ ಇರುವುದರಿಂದ ತಿಂಡಿ-ತಿನಿಸುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಇಲ್ಲದಿದ್ದರೆ ನಗರಸಭೆಯಿಂದ ಪರವಾನಗಿಯನ್ನು ರದ್ದುಮಾಡಿ ಅಂಗಡಿಗೆ ಬೀಗ ಹಾಕಲಾಗುವುದೆಂದು ಎಚ್ಚರಿಸಿದರು.

ನಗರದ ನಾಗರೀಕರು ತಮ್ಮ ಮನೆಗಳ ಮುಂದೆ ಸ್ವಚ್ಛತೆ ಕಾಪಾಡಬೇಕು. ಡೆಂಗ್ಯೂ ಜ್ವರ ಹರಡುತ್ತಿರುವುದರಿಂದ ಚರಂಡಿಗಳಲ್ಲಿ ಹಾಗೂ ನೀರು ಸಂಗ್ರಹಾಗಾರಗಳನ್ನು ಸ್ವಚ್ಛವಾಗಿಡಬೇಕು. ಪರಿಸರ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಸದೆ ಈಗ ಬಯೋ ಪ್ಲಾಸ್ಟಿಕ್ ಬಳಸುವಂತೆ ಮನವಿ ಮಾಡಿದರು.

ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಬಸ್ ನಿಲ್ದಾಣದಲ್ಲಿ ಶೌಚಾಲಯ ಪಕ್ಕದಲ್ಲಿಯೇ ತಿಂಡಿ-ತಿನಿಸುಗಳನ್ನು ಅಂಗಡಿಗಳವರು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ನಾಳೆಯಿಂದಲೇ ಸ್ವಚ್ಛತೆ ಕಾಪಾಡಬೇಕು, ತಿನಿಸುಗಳನ್ನು ಸುರಕ್ಷಿತವಾಗಿಡಬೇಕು ಎಂಬ ಬಗ್ಗೆ ಕೆಎಸ್‌ಆರ್‌ಟಿಸಿ ಡಿಸಿ ಮತ್ತು ಡಿಪೋ ಮ್ಯಾನೇಜರ್‌ಗೆ ಸೂಚನೆ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇಡೀ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರೀಕರು ಸ್ವಚ್ಛತೆ ಕಾಪಾಡಬೇಕು. ಬಸ್ ನಿಲ್ದಾಣದ ಅಂಗಡಿಗಳವರು ನಾಳೆಯಿಂದಲೇ ಸರಿಪಡಿಸಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂಗಡಿಗಳನ್ನು ಮುಚ್ಚಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

City Council President Varasiddi Venugopal made a sudden visit to the shops of the transport bus station

About Author

Leave a Reply

Your email address will not be published. Required fields are marked *