September 20, 2024
ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ

ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ

ಚಿಕ್ಕಮಗಳೂರು: ಕನ್ನಡ ನಾಡು ಕಂಡ ಶ್ರೇಷ್ಠ ದಾರ್ಶನಿಕ ಸರ್ವಜ್ಞ ಎಂದು ಚಾಮರಾಜನಗರ ಜಿಲ್ಲೆಯ ಹರವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್ ಹರವೆ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಇಂದು ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸರ್ವಜ್ಞ ವೈಚಾರಿಕ ತ್ರಿಪದಿಗಳ ಚಕ್ರವರ್ತಿ, ಜನರ ನಡುವೆ ಬದುಕಿದ ಜನಪದ ವರಕವಿ ಸರ್ವಜ್ಞನಿಗಾಗಿ ಒಂದು ಗಾದೆ ಹುಟ್ಟಿಕೊಂಡಿರುವುದು ಒಂದು ವಿಶೇಷ ಏನೆಂದರೆ ಆಡು ಮುಟ್ಟಾದ ಸೊಪ್ಪಿಲ್ಲ ಸರ್ವಜ್ಞ ಹೇಳದ ಪದವಿಲ್ಲ, ಅಂದರೆ ಸರ್ವಜ್ಞ ಎಲ್ಲ ವಿಷಯಗಳನ್ನು ಬಲ್ಲವ ಎಂದರ್ಥ ಎಂದು ಹೇಳಿದರು.

ಸರ್ವಜ್ಞ ಕವಿಯು ಮೂರು ಸಾಲಿನಲ್ಲಿ ಮಹಾಕಾವ್ಯಗಳ, ಮಹಾಗ್ರಂಥಗಳ ಸಾರವನ್ನು ಹಿಡಿದಿಟ್ಟಿದ್ದಾನೆ. ತುಳಸಿ ದಾಸರು ಹೇಳುವಂತೆ ಗಾಗರ್ವೆ ಸಾಗರ ಅಂದರೆ ಕೊಡದಲ್ಲಿ ಸಾಗರವನ್ನು ತುಂಬಿಸುವಂತೆ ೩ ಸಾಲಿನ ಪದ್ಯದಲ್ಲಿ ಸರ್ವಜ್ಞ ಮಹಾ ಕವಿಯು ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತುಂಬಿಟ್ಟಿದ್ದಾನೆ. ಈ ಸಾಹಿತ್ಯದ ತ್ರಿಪದಿಗಳ ವಿಶೇಷವೇನೆಂದರೆ ಷಟ್ಪದಿಯ ರೂಪದಲ್ಲಿ ಛಂದಸ್ಸನ್ನು ಕಾಣುತ್ತೇವೆ. ಪ್ರತಿ ಸಾಲಿನ ಎರಡನೆಯ ಅಕ್ಷರ ಪ್ರಾಸವಾಗಿರುವುದು ಸರ್ವಜ್ಞನ ತ್ರಿಪದಿಗಳ ವಿಶೇಷ ಲಕ್ಷಣವಾಗಿದೆ. ಸರ್ವಜ್ಞನು ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಚಿತ್ರಲತೆ ತ್ರಿಪದಿ ಎಂಬ ಮೂರು ಪ್ರಕಾರದಲ್ಲಿ ತತ್ವ ಬೋಧಿಸಿರುವುದನ್ನು ಆತನ ವಚನಗಳಲ್ಲಿ ಕಾಣುತ್ತೇವೆ.

ಸರ್ವಜ್ಞನು ನಾಲ್ಕು ಗೋಡೆ ಮಧ್ಯೆ ಪಾರಂಪರಿಕ ಮತ್ತು ಸಾಂಪ್ರದಾಯಿಕ ಶಿಷ್ಟ ಶಿಕ್ಷಣವನ್ನು ಪಡೆಯದೆ ಜನಸಾಮಾನ್ಯರು, ಕಾರ್ಮಿಕರು, ರೈತರ ಮಧ್ಯೆ ಇದ್ದು, ಎಲ್ಲರೊಂದಿಗೆ ಬಾಳಿ ಬದುಕಿ ಮಹಾ ಜ್ಞಾನ ಪರ್ವತವೇ ಆಗಿದ್ದು ಒಂದು ವಿಶೇಷ ಎಂದು ತಿಳಿಸಿದರು.

ನಮ್ಮ ಕನ್ನಡ ಸಾಹಿತ್ಯದಲ್ಲಿ ಒಂದಲ್ಲೊಂದು ರೀತಿಯಲ್ಲಿ ಕವಿಗಳು ರಾಜಾಶ್ರಯ, ಆಡಳಿತ, ಜನಪ್ರತಿನಿಧಿಗಳ ಓಲೈಕೆ ಮಾಡುವ ಸಾಹಿತ್ಯವನ್ನು ರಚಿಸಿರುವುದು ಅಲ್ಲಲ್ಲಿ ಕಂಡು ಬರುತ್ತದೆ. ಇದಕ್ಕೆ ಅಪವಾದವೆಂಬಂತೆ ಅನೇಕ ಕವಿಗಳು ಕನ್ನಡದಲ್ಲಿದ್ದಾರೆ. ಆದರೆ ರಾಜಾಶ್ರಯವನ್ನು ಧಿಕ್ಕರಿಸಿ ಜನಸಾಮಾನ್ಯರ ಮಧ್ಯೆ ಬದುಕಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಸರ್ವಜ್ಞ ಕವಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಮಾಜದ ಶ್ರೇಷ್ಠ ಮನೋವಿಜ್ಞಾನಿಯಾಗಿ, ಸಮಾಜ ವಿಜ್ಞಾನಿಯಾಗಿ, ಒಬ್ಬ ಮಹಾ ವೈದ್ಯನಾಗಿ ಕೃಷಿಕನಾಗಿ, ಪಂಡಿತವಾಗಿ, ಒಬ್ಬ ಮಹಾ ತತ್ವ ಜ್ಞಾನಿಯಾಗಿ ಯೋಗಿಯಾಗಿ, ಜನಪದ ಕವಿಯಾಗಿ ಹೀಗೆ ಅನೇಕ ಭೂಮಿಕೆಗಳಲ್ಲಿ ಸರ್ವಜ್ಞನನ್ನು ಕಾಣಬಹುದು. ಇತ್ತೀಚಿನ ಜಾಗತಿಕ ಪಿಡುಗುಗಳಾದ ಜಾತಿ, ಮತ, ಧರ್ಮ ಸಂಘರ್ಷದ ನಾಶಕ್ಕೆ ಸರ್ವಜ್ಞ ವಚನಗಳು ದಿವ್ಯ ಜೌಷಧಿಗಳಾಗಿ ಕಂಡು ಬರುತ್ತವೆ. ವಿಶ್ವ ಮಾನವತೆ, ವಿಶ್ವ ಕುಟುಂಬ, ಮಾನವೀಯ ಮೌಲ್ಯಗಳ ನೆಲೆಗಟ್ಟನ್ನು ಆತನ ತ್ರಿಪದಿಯಲ್ಲಿ ಕಾಣಬಹುದು ಎಂದರು ತಿಳಿಸಿದರು.

ಉಪವಿಭಾಗಾಧಿಕಾರಿಗಳ ಕಛೇರಿಯ ಉಪ ತಹಸೀಲ್ದಾರ್ ಶಾರದಾ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್, ತಾಲ್ಲೂಕು ಕಛೇರಿಯ ಉಪ ತಹಸೀಲ್ದಾರ್ ರಾಮ್‌ರಾವ್ ದೇಸಾಯಿ ಹಾಗೂ ಕುಂಬಾರ ಸಮುದಾಯದ ಮುಖಂಡ ಅಶೋಕ್, ಮುಂತಾದವರು ಉಪಸ್ಥಿತರಿದ್ದರು.

Saint Kavi Sarvajna Jayanti Program

About Author

Leave a Reply

Your email address will not be published. Required fields are marked *