September 16, 2024

ಸರ್ಕಾರದಿಂದ ಉಚಿತವಾಗಿ ಕಾಮಧೇನು ಗೋಶಾಲೆಗೆ 5 ಎಕರೆ ಜಾಗ

0
ನಗರ ಸಮೀಪದ ಕಾಮಧೇನು ಗೋಶಾಲೆಗೆ ಶಾಸಕ ಎಚ್.ಡಿ.ತಮ್ಮಯ್ಯ ಭೇಟಿ

ನಗರ ಸಮೀಪದ ಕಾಮಧೇನು ಗೋಶಾಲೆಗೆ ಶಾಸಕ ಎಚ್.ಡಿ.ತಮ್ಮಯ್ಯ ಭೇಟಿ

ಚಿಕ್ಕಮಗಳೂರು: ನಗರ ಸಮೀಪದ ಕಾಮಧೇನು ಗೋಶಾಲೆಗೆ ಇಂದಾವರ ಸ.ನಂ.೩೩ ರಲ್ಲಿ ೫ ಎಕರೆ ಜಾಗವನ್ನು ಸರ್ಕಾರದಿಂದ ಉಚಿತವಾಗಿ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ಭಾನುವಾರ ಗೋಶಾಲೆ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ವಯಸ್ಸಾದ ಗೋವುಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಕೊಡುವಂತಾಗಬಾರದು. ಗೋವುಗಳನ್ನು ಪೂಜೆ ಮಾಡುವ ದೇಶದಲ್ಲಿ ಹುಟ್ಟಿರುವವರು ನಾವು. ಎಲ್ಲವನ್ನೂ ಮಾತೆಗೆ ಹೋಲಿಸಿದ ದೇಶ ಯಾವುದಾದರೂ ಇದ್ದರೆ ಅದು ಭಾರತ ದೇಶ. ಗೋವನ್ನೂ ಗೋಮಾತೆ ಎಂದು ಕರೆಯುತ್ತೇವೆ. ಈ ಕಾರಣಕ್ಕೆ ಈ ದೇಶದಲ್ಲಿ ಹುಟ್ಟಿದ ಮೇಲೆ ಏನಾದರು ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.

ರಾಜಕಾರಣಿಗಳು ಏನಾದರೂ ಮಾಡುವಾಗ ಶೇ.೧೦ ರಷ್ಟಾದರೂ ಸ್ವಾರ್ಥ ಇರುತ್ತದೆ. ಆದರೆ ಗೋಶಾಲೆಗೆ ತಮ್ಮ ದುಡಿಮೆಯಲ್ಲೇ ಒಂದು ಭಾಗ ಕೊಟ್ಟು ನಿಸ್ವಾರ್ಥದಿಂದ ಕೆಲಸ ಮಾಡುವವರನ್ನು ಅಭಿನಂದಿಸಲೇ ಬೇಕು ಎಂದು ತಿಳಿಸಿದರು.

ಇದಕ್ಕೆ ನಾವು ಸರ್ಕಾರದಿಂದ ಸಹಕಾರವನ್ನು ಕೊಡುತ್ತೇನೆ. ನಾವು ರಾಸುಗಳನ್ನು ಸಾಕಿದವರು ನಮಗೂ ಹಸುಗಳ ಬಗ್ಗೆ ವಿಶೇಷವಾದ ಅಭಿಮಾನವಿದೆ. ನಮ್ಮದು ಸಾಮಾನ್ಯ ರೈತರ ಕುಟುಂಬ. ಈಗ ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದರು.

ರೈತರಿಗೆ ಸಮಸ್ಯೆಗಳಿವೆ, ಕಚೇರಿಗಳಲ್ಲಿ ಸಮಸ್ಯೆ ಇದೆ. ಅದಕ್ಕೆಲ್ಲ ಸ್ಪಂದಿಸಿ ಕೆಲಸ ಮಾಡುತ್ತೇನೆ. ಸಾರ್ವಜನಿಕರಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಊರಿನಲ್ಲಿ ಶಾಂತಿ ನೆಲಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಗೋಶಾಲೆಯ ಮುಖೇಶ್ ಮಾತನಾಡಿ ಕಳೆದ ೨೦೧೯ ರಿಂದಲೂ ಗೋಶಾಲೆ ನಡೆಯುತ್ತಿದೆ. ೧೬೫ ಜಾನುವಾರುಗಳು ಇಲ್ಲಿ ಆಶ್ರಯ ಪಡೆದಿವೆ. ಒಟ್ಟು ೫ ಎಕರೆ ಜಮೀನಿನಲ್ಲಿ ಗೋಶಾಲೆ ನಡೆಯುತ್ತಿದೆ. ಗೋವಿನಲ್ಲಿ ಮುಕ್ಕೂಟಿ ದೇವರಿದ್ದಾರೆ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ನಾವು ಅಮೂಲ್ಯ ಸೇವೆ ಮಾಡುತ್ತಿದ್ದೇವೆ ಎಂದು ನಂಬಿದ್ದೇವೆ ಎಂದರು.

ಇದಕ್ಕಾಗಿ ಸರ್ಕಾರದಿಂದ ೫ ರಿಂದ ೮ ಎಕರೆ ಜಮೀನು ಮಂಜೂರು ಮಾಡಿಸಿ ಕೊಡಬೇಕು ಎಂದು ಮನವಿ ಮಾಡುತ್ತೇವೆ. ಇದಾದಲ್ಲಿ ಮುಂದೆ ಇನ್ನಷ್ಟು ಉತ್ತಮವಾಗಿ ಗೋಶಾಲೆ ನಡೆಸಲು ಅವಕಾಶವಾಗುತ್ತದೆ ಎಂದರು.

ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಯಿಖಾನೆಗೆ ಸಾಗಿಸುವ ಗೋವುಗಳನ್ನು ರಕ್ಷಿಸಿ ಆಶ್ರಯ ಕೊಡುವ ಉದ್ದೇಶದಿಂದ ಈ ಗೋಶಾಲೆ ಆರಂಭಿಸಲಾಗಿದೆ. ಇದಕ್ಕೆ ಅಯ್ಯಣ್ಣ ಶೆಟ್ಟರು ಜಮೀನು ನೀಡಲು ಮುಂದೆ ಬಂದ ಕಾರಣ ತಾಲ್ಲೂಕಿನಲ್ಲೇ ಮೊದಲ ಬಾರಿಗೆ ಗೋಶಾಲೆ ಅಭಿವೃದ್ಧಿ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಫುಲ್‌ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಗ್ರಾ.ಪಂ.ಅಧ್ಯಕ್ಷ ಐ.ಡಿ.ಚಂದ್ರಶೇಖರ್, ಗೋಶಾಲೆ ಸಂಸ್ಥಾಪಕ ಭಗವಾನ್ ರಾಂ, ಗೋಶಾಲೆ ಅಧ್ಯಕ್ಷ ಸಂಜೀವ್ ಸುವರ್ಣ ಇತರರು ಇದ್ದರು.

5 acre land for Kamadhenu Goshala free of charge from Govt

About Author

Leave a Reply

Your email address will not be published. Required fields are marked *