September 20, 2024

ನಗರಸಭೆಯ ೩.೨೪ ಕೋಟಿ ರೂ.ನ ಉಳಿತಾಯ ಬಜೆಟ್‌ಗೆ ಸರ್ವಸದಸ್ಯರ ಅಧಿವೇಶನ ಅನುಮೋದನೆ

0
ನಗರಸಭೆ ಸರ್ವಸದಸ್ಯರ ಅಧಿವೇಶನ

ನಗರಸಭೆ ಸರ್ವಸದಸ್ಯರ ಅಧಿವೇಶನ

ಚಿಕ್ಕಮಗಳೂರು:  ೨೦೨೪-೨೫ ನೇ ಸಾಲಿಗೆ ಚಿಕ್ಕಮಗಳೂರು ನಗರಸಭೆಯ ೩.೨೪ ಕೋಟಿ ರೂ.ನ ಉಳಿತಾಯ ಬಜೆಟ್‌ಗೆ ಸೋಮವಾರ ನಡೆದ ಸರ್ವಸದಸ್ಯರ ಅಧಿವೇಶನ ಅನುಮೋದನೆ ನೀಡಿತು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರು ಒಟ್ಟು ೧೨೧.೦೪ ಕೋಟಿ ರೂ. ಬೃಹತ್ ಬಜೆಟನ್ನು ಮಂಡಿಸಿದರು. ಈ ಪೈಕಿ ೨೩೪.೮೮ ಲಕ್ಷ ರೂ.ಗಳ ಉಳಿತಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಆರಂಭಿಕ ಶಿಲ್ಕು ೨೧೫೩.೬೮ ಲಕ್ಷ ರೂ.ಗಳಿದ್ದು, ಪ್ರಸ್ತುತ ಸಾಲಿನಲ್ಲಿ ವಿವಿಧ ಬಾಬ್ತುಗಳಿಂದ ೯೯೫೦.೬೩ ಲಕ್ಷ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ. ಒಟ್ಟು ೧೨೧೦೪.೩೧ ಲಕ್ಷ ರೂ.ಗಳ ಆದಾಯದಲ್ಲಿ ೧೧೭೭೯.೬೩ ಲಕ್ಷ ರೂ.ಗಳ ವೆಚ್ಚ ನಿರೀಕ್ಷಿಸಲಾಗಿದ್ದು, ೩೨೪.೬೮ ಲಕ್ಷ ರೂ.ಗಳ ಉಳಿತಾಯವನ್ನು ನರೀಕ್ಷಿಸಿದ್ದೇವೆ ಎಂದರು.

ಆದಾಯದ ಮೂಲಗಳು: ಪ್ರತಿ ವರ್ಷದಂತೆ ಈ ಬಾರಿಯೂ ಆಸ್ತಿ ತೆರಿಗೆಯಿದ ಅತೀ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಲಾಗಿದ್ದು. ಒಟ್ಟು ೧೮ ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ.

ಉಳಿದಂತೆ ವಿದ್ಯುತ್ ಅನುದಾನದಿಂದ ೧೧ ಕೋಟಿ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಬ್ತು ೨ ಕೋಟಿ.ರೂ., ನೀರು ಸರಬರಾಜು ಶುಲ್ಕದಿಂದ ೩ ಕೋಟಿ ರೂ., ಅಭಿವೃದ್ಧಿ ಶುಲ್ಕದಿಂದ ೧.೨೦ ಕೋಟಿ ರೂ., ಕಟ್ಟಡ ಪರವಾನಗಿ ಬಾಬ್ತು ೮೨ ಲಕ್ಷ ರೂ., ಒಳ ಚರಂಡಿ ಶುಲ್ಕದಿಂದ ೬೫ ಲಕ್ಷ ರೂ., ವ್ಯಾಪಾರಿ ಪರವಾನಗಿ ಶುಲ್ಕದಿಂದ ೮೦ ಲಕ್ಷ ರೂ., ಖಾತಾ ಬದಲಾವಣೆ ಶುಲ್ಕ ೪೫ ಲಕ್ಷ ರೂ., ಖಾತಾ ಮತ್ತು ಇತರೆ ಪ್ರಗತಿಗಳ ಶುಲ್ಕ ೩೫ ಲಕ್ಷ ರೂ., ರಸ್ತೆ ಅಗೆತ ಮುಂತಾದವುಗಳಿಂದ ೨೦ ಲಕ್ಷ ರೂ., ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಿಂದ ೨.೫೦ ಲಕ್ಷ ರೂ., ಎಸ್‌ಎಫ್‌ಸಿ ವೇತನ ಬಾಬ್ತು ೯.೦೭ ಕೋಟಿ ರೂ., ಅನುಪಯುಕ್ತ ವಸ್ತು ಮಾರಾಟದಿಂದ ೧೫ ಲಕ್ಷ ರೂ. ಹಾಗೂ ಜಾಹಿರಾತು ತೆರಿಗೆಯಿಂದ ೨.೫೦ ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.

ವಿಶೇಷ ಅನುದಾನಗಳು: ವಿಶೇಷ ಅನುದಾನ ಮತ್ತು ಇತರೆ ಯೋಜನೆಗಳಿಂದಲೂ ಒಂದಷ್ಟು ಆದಾಯವನ್ನು ನಿರೀಕ್ಷೆ ಮಾಡಲಾಗಿದೆ. ಅಮೃತ್ ೨.೦ ಯೋಜನೆಯಿಂದ ೬ ಕೋಟಿ ರೂ., ಅಮೃತ್ ನಿರ್ಮಲ ನಗರ ಯೋಜನೆಯಿಂದ ೧.೫೦ ಕೋಟಿ ರೂ., ಸ್ವಚ್ಛ ಭಾರತ್ ಮಿಷನ್ ಯೋಜನೆಯಿಂದ ೫ ಕೋಟಿ ರೂ., ೧೫ ಹಣಕಾಸು ಯೋಜನೆಯಿಂದ ೭ ಕೋಟಿ ರೂ., ವಿಶೇಷ ಅನುದಾನದಿಂದ ೧೫ ಕೊಟಿ ರೂ., ಎಸ್.ಎಫ್‌ಸಿ ಕುಡಿಯುವ ನೀರು ಯೋಜನೆಯಿಂದ ೨೦ ಲಕ್ಷ ರೂ., ಕೇಂದ್ರದ ಡೇನಲ್ಮ್ ಯೋಜನೆಯಿಂದ ೪೦ ಲಕ್ಷ ರೂ., ಸರ್ಕಾರಿ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ೨೬ ಕೋಟಿ ರೂ., ಶೇ.೨೪.೧೦ ರಲ್ಲಿ ೧.೦೮ ಕೋಟಿ ರೂ., ಶೇ.೭.೨೫ ಬಡವರ ಅಭಿವೃದ್ಧಿ ಅನುದಾದಲ್ಲಿ ೩೧ ಲಕ್ಷ ರೂ. ಹಾಗೂ ವಿಶೇಷ ಚೇತನರ ಅಭಿವೃದ್ಧಿಗಾಗಿ ೧೮ ಲಕ್ಷ ರೂ. ಆದಾಯವನ್ನು ನಿರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು.
ನಮ್ಮ ಆಡಳಿತದ ಬಜೆಟ್ ಸಂಪೂರ್ಣ ಅಭಿವೃದ್ಧಿ ಪರ, ಪರಿಸರ ಸ್ನೇಹಿ ಹಾಗೂ ದೂರದೃಷ್ಟಿಯಿಂದ ಕೂಡಿದ್ದು, ನಗರದ ಅಭಿವೃದ್ಧಿಗೆ ಪೂರಕವಾಗಿದೆ. ನಾಗರೀಕರ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.
ನಗರಸಭೆ ಬಜೆಟ್ ದೂರದೃಷ್ಠಿಯಿಲ್ಲದ, ಅಭಿವೃದ್ಧಿಗೆ ಪೂರಕವಲ್ಲದ್ದಾಗಿದೆ ಎಂದು ಬಿಜೆಪಿ ಸದಸ್ಯ ಟಿ.ರಾಜಶೇಖರ್ ಆರೋಪಿಸಿದರು.

ನಗರದ ಅಭಿವೃದ್ಧಿ ದೃಷ್ಠಿಯಿಂದ ಶಾಶ್ವತವಾಗ ದೊಡ್ಡ ಪ್ರಮಾಣದ ಯಾವುದೇ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿಲ್ಲ ಎಂದು ದೂರಿದರು.

ನಗರಸಭೆ ಬಜೆಟ್ ಸರ್ವಸ್ಪರ್ಷಿಯಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಪ್ರಸ್ತಾಪಿತ ಕಾಗಮಾರಿಗಳು ಚಾಚೂ ತಪ್ಪದೆ ಅನುಷ್ಠಾನಗೊಳ್ಳಬೇಕು. ಈ ಬಜೆಟ್‌ಗೆ ನಮ್ಮ ಸಂಪೊರ್ಣ ಸಹಮತವಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

Approval of saving budget of 3.24 crores of municipal council

About Author

Leave a Reply

Your email address will not be published. Required fields are marked *