September 7, 2024

ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ

0
ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಯುವ ಜಾಗೃತಿಗಾಗಿ ಯುವ ಸಂವಾದ ಕಾರ್ಯಕ್ರಮ

ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಯುವ ಜಾಗೃತಿಗಾಗಿ ಯುವ ಸಂವಾದ ಕಾರ್ಯಕ್ರಮ

ಚಿಕ್ಕಮಗಳೂರು:  ಮುಂಬರುವ ಲೋಕಸಭೆ ಚುನಾವಣೆ ದೇಶದ ಚುನಾವಣೆ. ಮಕ್ಕಳು, ಯುವ ಜನರ ಭವಿಷ್ಯದ ಚುನಾವಣೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.

ಅವರು ನಗರದ ಲಕ್ಷ್ಮೀಶನಗರ ಬಡಾವಣೆಯ ಸಮುದಾಯಭವನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಯುವ ಜಾಗೃತಿಗಾಗಿ ಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಶ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ನಲ್ಲಿ ಸಿಕ್ಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಎರಡೂ ದೇಶದ ನಾಯಕರ ಜೊತೆ ಮಾತನಾಡಿ ೪೮ ಗಂಟೆಗಳ ಕಾಲ ಯುದ್ಧ ನಿಲ್ಲಿಸಿ ವಿಶೇಷ ವಿಮಾನಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದರು ಎಂದರು.

ಒಬ್ಬ ವಿದ್ಯಾರ್ಥಿ ಆಕಸ್ಮಿಕವಾಗಿ ಸಾವಪ್ಪಿದ್ದಕ್ಕೆ ಮೋದಿ ಕಾರಣ ಎಂದು ವಿರೋಧಿಗಳು ಬೊಬ್ಬೆ ಹೊಡೆದರು. ಆದರೆ ೩೨ ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಮೋದಿ ಕಾರಣ. ಅದಕ್ಕಾಗಿ ಮೋದಿ ಬೇಕು ಎಂದರು.

ಅದೇ ರೀತಿ ಸಿರಿಯಾ, ಇಸ್ರೇಲ್, ಇರಾನ್, ಆಫ್ಘಾನಿಸ್ತಾನಗಳಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆತರಲಾಯಿತು. ಅವರೊಂದಿಗೆ ಪಾಕಿಸ್ಥಾನ, ಶ್ರೀಲಂಕ ಸೇರಿದಂತೆ ಹಲವು ದೇಶದ ಜನರು ಭಾರತದ ಬಾವುಟ ಹಿಡಿದು ಜೈಕಾರ ಹಾಕುತ್ತ ಸುರಕ್ಷಿತವಾಗಿ ಅವರ ದೇಶಕ್ಕೆ ಮರಳಿದರು. ಈ ಕಾರಣಕ್ಕೆ ಮೋದಿ ಇದ್ದರೆ ಯಾವುದೂ ಅಸಾಧ್ಯವಲ್ಲ ಅದಕ್ಕಾಗಿ ಮೋದಿ ಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಲಕ್ಷಾಂತರ ಜನ ಸಾಯುತ್ತಾರೆ ಎಂದು ಬೇರೆ ದೇಶದವರು ಮಾತನಾಡಿದರು. ಆದರೆ ಮೋದಿ ಅವರು ನಮ್ಮ ದೇಶದ ಜನರನ್ನು ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಎರಡು ಬಾರಿ ಉಚಿತ ಲಸಿಕೆ ಕೊಡಿಸಿದರು ಎಂದರು.

ಉಚಿತ ಲಸಿಕೆ ಅಷ್ಟೇ ಅಲ್ಲ. ಆ ಕಷ್ಟದ ಕಾಲದಲ್ಲಿ ಗರೀಬಿ ಕಲ್ಯಾಣ ಯೋಜನೆ ಮೂಲಕ ಸತತವಾಗಿ ೧೦ ಕೆಜಿ ಅಕ್ಕಿ ಕೊಟ್ಟಿದ್ದು ಮೋದಿ. ಈಗ ೫ ಕೆಜಿ ಮನೆ ಮನೆಗೆ ಬರುತ್ತಿರುವ ಅಕ್ಕಿ ಸಹ ಮೋದಿ ಕೊಡುತ್ತಿರುವುದು. ಮೋದಿ ಕೊಡುವುದು ಬಂದ್ ಆದರೆ ಒಂದು ಕೆಜಿ ಅಕ್ಕಿ ಕೊಡುವ ಯೋಗ್ಯತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದರು.

ಇಷ್ಟು ಮಾತ್ರವಲ್ಲ ಇಡೀ ಜಗತ್ತಿನ ಉದ್ದಗಲಕ್ಕೆ ಗೌರವ ಜಾಸ್ತಿ ಆಗಲು ಮೋದಿ ಕಾರಣ. ಜಗತ್ತಿನ ಅತ್ಯಂತ ಪ್ರಭಾವಿ ನಾಯಕ ನಮ್ಮ ಮೋದಿ ಎಂದು ಸರ್ವೆಯಲ್ಲಿ ಪಾಲ್ಗೊಂಡ ಶೇ.೭೮ ರಷ್ಟು ಮಂದಿ ಅನುಮೋದನೆ ಮಾಡಿದ್ದಾರೆ ಅದಕ್ಕಾಗಿ ಮೋದಿ ಬೇಕು ಎಂದರು.

ಇದರೊಂದಿಗೆ ದೇಶದ ಬಡವರಿಗೆ ಉಜ್ವಲ ಗ್ಯಾಸ್ ಸಂಪರ್ಕ, ಪ್ರತಿಹಳ್ಳಿಯ ಎಲ್ಲ ಮನೆಗಳಿಗೆ ವಿದ್ಯುತ್, ಆರೋಗ್ಯ ರಕ್ಷಣೆಗೆ ಆಯುಷ್ಮಾನ್ ಯೋಜನೆ, ಸ್ವನಿಧಿ ಯೋಜನೆ, ಸ್ಟಾರ್ಟ್‌ಅಪ್ ಯೋಜನೆ, ಮುದ್ರಾ ಯೋಜನೆಗಳನ್ನು ಜಾರಿಗೆ ತಂದರು ಇದೆಲ್ಲವನ್ನು ಯುವ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೋತೋಷ್ ಕೋಟ್ಯಾನ್ ಮಾತನಾಡಿ, ೧೮ ಲೋಕಸಭೆಗೆ ಸಧ್ಯದಲ್ಲೇ ಚುನಾವಣೆ ನಡೆಯಲಿದೆ. ಅದಕ್ಕೆ ೧೮ ವರ್ಷ ತುಂಬಿದ ಯುವ ಮತದಾರರನ್ನು ಜೋಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾ.ಪಂ., ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯುವಕರು ಇಂದಿನಿಂದಲೇ ಯುವ ಮತದಾರರನ್ನು ಮತಗಟ್ಟೆಗೆ ಕರೆತಂದು ಬಿಜೆಪಿಗೆ ಮತದಾನ ಮಾಡಿಸುವ ಸಂಬಂಧ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆ ದೇಶವನ್ನು ಗೆಲ್ಲಿಸುವ ಚುನಾವಣೆ, ಕಳೆದ ೧೦ ವರ್ಷಗಳಿಂದ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಣಿವರಿಯದೆ ಕೆಲಸ ಮಾಡಿದ್ದಾರೆ. ದೇಶವನ್ನು ಇನ್ನಷ್ಟು ಉನ್ನತ ಸ್ಥಿತಿಗೆ ಕೊಂಡೊಯ್ಯುವ ಸಲುವಾಗಿ ಯುವ ಮತದಾರರು ಮತ್ತೊಮ್ಮೆ ನಮ್ಮ ನಮ್ಮ ಬೂತ್‌ಗಳಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳನ್ನು ತಂದು ಕೊಡುವ ಕೆಲಸ ಮಾಡಬೇಕು ಎಂದರು.

ನಗರಸಭೆ ಸದಸ್ಯೆ ಉಮಾದೇವಿ ಕೃಷ್ಣಪ್ಪ, ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್ ಸೇರಿದಂತೆ ಸ್ಥಳೀಯ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು. ಪುನೀತ್ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.

A youth dialogue program for youth awareness about Central Govt.’s public programs

About Author

Leave a Reply

Your email address will not be published. Required fields are marked *

You may have missed