September 7, 2024

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಪ್ರತಿಭಟನೆ

0
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಪ್ರತಿಭಟನೆ

ಚಿಕ್ಕಮಗಳೂರು: ಹೊಸದಾಗಿ ಆಟೋ ಪರವಾನಗಿ ನೀಡಬಾರದು, ಬಾಡಿಗೆ ದ್ವಿಚಕ್ರ ವಾಹನದ ಪರವಾನಗಿಯನ್ನು ರದ್ದುಪಡಿಸಬೇಕು ಹಾಗೂ ಆಟೋ ಚಾಲಕರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಇಂದು ಆಟೋ ಸಂಚಾರ ಬಂದ್ ಮಾಡಿ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಂದು ಬೆಳಗ್ಗೆ ನಗರದ ತಾಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಗಾರರು ಎಂ.ಜಿ ರಸ್ತೆ ಮೂಲಕ ಸಾಗಿ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.

ನಗರದಲ್ಲಿ ಸುಮಾರು ೪ ಸಾವಿರ ಆಟೋಗಳಿದ್ದು, ಮಹಾನಗರ ಪಾಲಿಕೆಯಾಗಿಲ್ಲ. ಚಿಕ್ಕದಾಗಿರುವ ನಗರದಲ್ಲಿ ಹಾಲಿ ಇರುವ ಆಟೋಗಳಿಗೆ ಬಾಡಿಗೆ ಇಲ್ಲದೆ ಚಾಲಕರು ಮತ್ತು ಮಾಲೀಕರು ಸಂಕಷ್ಟದಲ್ಲಿದ್ದು, ನಗರಕ್ಕೆ ಹೆಚ್ಚಿನ ಆಟೋ ಪರವಾನಗಿಯನ್ನು ನೀಡಲಾಗುತ್ತಿದೆ. ಕೂಡಲೇ ಹೊಸದಾಗಿ ಆಟೋ ಪರವಾನಗಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಸಾರಿಗೆ ಪ್ರಾಧಿಕಾರದ ಸಭೆಯನ್ನು ಕೂಡಲೇ ಕರೆಯಬೇಕು. ನಗರದಲ್ಲಿ ಅನಧಿಕೃತವಾಗಿ ಬಾಡಿಗೆ ದ್ವಿಚಕ್ರವಾಹನ ಸಂಚರಿಸುತ್ತಿದ್ದು, ಹಳದಿ ಬೋರ್ಡ್ ದ್ವಿಚಕ್ರವಾಹನಗಳಿಗೆ ಪರವಾನಗಿ ಇಲ್ಲದೆ ಸಂಚರಿಸುತ್ತಿವೆ. ಈ ಮಧ್ಯೆ ವೈಟ್ ಬೋರ್ಡ್ ದ್ವಿಚಕ್ರ ವಾಹನಗಳನ್ನು ಸಹ ಬಾಡಿಗೆಗೆ ಬಳಸುತ್ತಿರುವುದರಿಂದ ಆಟೋ ಚಾಲಕರಿಗೆ ತುಂಬಲಾಗದ ನಷ್ಟವಾಗುತ್ತಿದೆ. ಕೂಡಲೇ ಇದನ್ನು ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಆಟೋ ಚಾಲಕರಿಗೆ ವಸತಿ ಬಡಾವಣೆ ನಿರ್ಮಾಣ ಮಾಡಿ, ನಿವೇಶನ ಹಂಚಿಕೆ ಮಾಡುವುದರ ಜೊತೆಗೆ ಆಟೋ ಕಾಲೋನಿ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ನಿಗಮ ಮಂಡಳಿಗಳ ಮೂಲಕ ಸರ್ಕಾರದ ನೇರ ಸಾಲ ಸೌಲಭ್ಯ ಆಟೋ ಚಾಲಕರು ಮತ್ತು ಮಾಲಿಕರಿಗೆ ಇದುವರೆಗೆ ದೊರೆಯದೇ ಇರುವುದರಿಂದ ಇನ್ನುಮುಂದೆಯಾದರೂ ಈ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿದ್ದಾರೆ.

ನಗರದ ಎಂ.ಜಿ ರಸ್ತೆ, ಐ.ಜಿ ರಸ್ತೆ, ಮಾರ್ಕೆಟ್ ರಸ್ತೆಯಲ್ಲಿ ೪ ಚಕ್ರ ದ್ವಚಕ್ರ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಇದ್ದು, ಆಟೋಗಳಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಅನಾನುಕೂಲವಾಗಿದ್ದು, ಸೂಕ್ತ ಆಟೋ ನಿಲ್ದಾಣಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ಉದಯ್‌ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕಾರ್ಯದರ್ಶಿ ಜಗದೀಶ್ ಕೋಟೆ, ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ, ಕರವೇ ಕುಮಾರ್, ಕನ್ನಡ ಸೇನೆಯ ಜಯಪ್ರಕಾಶ್ ಮತ್ತಿತರರು ವಹಿಸಿದ್ದರು.

Protest of auto drivers demanding fulfillment of various demands

About Author

Leave a Reply

Your email address will not be published. Required fields are marked *

You may have missed