September 19, 2024

ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚದಂತೆ ಕ್ರಮ ವಹಿಸಿ ಸಚಿವ ಕೆ.ಜೆ. ಜಾರ್ಜ್

0
ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಡೆದ ಸಭೆ

ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಡೆದ ಸಭೆ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಕಂಡು ಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್‌ಡಿ ಪರೀಕ್ಷೆ ಮಾಡಿಸಬೇಕು ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಿನ್ನೆ (ಭಾನುವಾರ) ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜ್ವರ ಪ್ರಕರಣಗಳಿಗೆ ಕೆಎಫ್‌ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು ವಾಡಿಕೆಯಂತೆ ಈ ವರ್ಷವೂ ಜಿಲ್ಲೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಕೆ.ಎಫ್.ಡಿ. ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು.

ರೋಗ ಪ್ರಸರಣ ಸಾಮಾನ್ಯವಾಗಿ ಬೇಸಿಗೆಯಲ್ಲಿ ಇದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಹಾಗೂ ಅಗತ್ಯ ಜೌಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ಸೋಂಕಿತರಿಗೆ ಎ.ಬಿ.ಎ.ಆರ್.ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕು ಜನರಲ್ಲಿ ಕಾಯಿಲೆ ಕುರಿತು ಅರಿವು ಮೂಡಿಸಲು ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕಾಡಂಚಿನ ಜನರಿಗೆ ಡಿಇಪಿಎ ತೈಲವನ್ನು ವಿತರಿಸಬೇಕು. ಕಾಡಿಗೆ ತೆರಳುವ ಸಂದರ್ಭದಲ್ಲಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗುವಂತೆ ಅವರಲ್ಲಿ ಅರಿವು ಮೂಡಿಸಿ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಭರತ್ ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಜನವರಿ ೨೦೨೪ ರಿಂದ ಇಲ್ಲಿಯವರೆಗೆ ಒಟ್ಟು ೩೮೭ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗ ಜಿಲ್ಲೆಯ ವಿಡಿಎಲ್ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಅವುಗಳಲ್ಲಿ ೫೧ ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ೨ ಜನರು ಮೃತಪಟ್ಟಿದ್ದಾರೆ. ಕೊಪ್ಪ ತಾಲ್ಲೂಕಿನಲ್ಲಿ ೩೨೨ ರಕ್ತ ಮಾದರಿಗಳ ಪೈಕಿ ೩೮ ಪ್ರಕರಣಗಳು ಪಾಸಿಟಿವ್ ಎಂದು ವರದಿಯಾಗಿದೆ.

ಎನ್.ಆರ್. ಪುರ ತಾಲ್ಲೂಕಿನಲ್ಲಿ ೩೪ ರಕ್ತದ ಮಾದರಿಗಳಲ್ಲಿ ೧೦ ಪಾಸಿಟಿವ್ ಪ್ರಕರಣಗಳು, ಶೃಂಗೇರಿ ತಾಲ್ಲೂಕಿನಲ್ಲಿ ೨೨ ರಕ್ತದ ಮಾದರಿಗಳಲ್ಲಿ ೧ ಪಾಸಿಟಿವ್ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ೦೯ ರಕ್ತದ ಮಾದರಿಗಳಲ್ಲಿ ೨ ಪಾಸಿಟಿವ್ ಎಂದು ದೃಢಪಟ್ಟಿದೆ. ಜಿಲ್ಲೆಯ ಒಟ್ಟು ೭೪ ಟಿಕ್‌ಪೂಲ್ (ಉಣ್ಣೆ)ಗಳನ್ನು ಸಂಗ್ರಹಿಸಿ ವಿಡಿಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಯಾವುದೇ ಪಾಸಿಟಿವ್ ಎಂದು ವರದಿಯಾಗಿಲ್ಲ.

ಕೊಪ್ಪ ೦೫, ಎನ್.ಆರ್. ಪುರ ೦೩ ಹಾಗೂ ಶೃಂಗೇರಿಯಲ್ಲಿ ೦೧ ಮಂಗಗಳು ಮರಣ ಹೊಂದಿದ್ದು ಜಿಲ್ಲೆಯಲ್ಲಿ ಒಟ್ಟು ೦೯ ಮಂಗಗಳು ಮರಣ ಹೊಂದಿವೆ. ಇವುಗಳ ಪೈಕಿ ಯಾವುದೇ ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದಿಲ್ಲ.

ಜಿಲ್ಲೆಯಲ್ಲಿ ವರದಿಯಾದ ಒಟ್ಟು ೫೧ ಕೆಎಫ್‌ಡಿ ಪ್ರಕರಣಗಳಲ್ಲಿ ೩೬ ಪ್ರಕರಣಗಳು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಉಳಿದ ೧೩ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಟಿಕ್‌ಗಳ ಸಂಗ್ರಹಣೆ, ಜ್ವರ ಸಮೀಕ್ಷೆ ಹಾಗೂ ಮಂಗಗಳ ಸಾವಿನ ಸಮೀಕ್ಷೆಗಳನ್ನು ಸಕ್ರಿಯವಾಗಿ ಕೈಗೊಳ್ಳಲಾಗಿದೆ.

ಅರಣ್ಯ ಹಾಗೂ ಎಸ್ಟೇಟ್‌ಗಳಲ್ಲಿನ ಸಾರ್ವಜನಿಕರಿಗೆ ಡಿಇಪಿಎ ತೈಲ ವಿತರಣೆ ಮಾಡಲಾಗುತ್ತಿದೆ. ಕಾಡಿನಲ್ಲಿ ವಾಸಿಸುವ ಹಾಗೂ ಕಾಡಿಗೆ ಹೋಗಿ ಬರುವ ಸಾರ್ವಜನಿಕರಿಗೆ ಅವರು ಧರಿಸುವ ಬಟ್ಟೆಯ ಬಗ್ಗೆ ಕಾಡಿಗೆ ಹೋಗುವ ಮೊದಲು ಡಿಇಪಿಎ ತೈಲವನ್ನು ಹಚ್ಚಿಕೊಳ್ಳುವಂತೆ, ಕಾಡಿನಿಂದ ಬಂದ ನಂತರ ಧರಿಸಿದ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ ಶುಚಿಗೊಳಿಸುವಂತೆ ಹಾಗೂ ಕಾಡಿನಿಂದ ಬಂದ ತಕ್ಷಣ ಬಿಸಿ ನೀರಿನ ಸ್ನಾನ ಮಾಡಿ ಮನೆಯೊಳಗೆ ಹೋಗುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜ್ವರ ಪರೀಕ್ಷೆಗೆ ಬೇರೆ ಜಿಲ್ಲೆಗೆ ರಕ್ತದ ಮಾದರಿಯನ್ನು ಕಳುಹಿಸಿ ಅಲ್ಲಿಂದ ವರದಿ ಬರಲು ಸಮಯ ತೆಗೆದುಕೊಳ್ಳುವ ಕಾರಣ ಜಿಲ್ಲೆಯಲ್ಲಿಯೇ ಪ್ರಯೋಗಾಲಯವನ್ನು ತೆರೆಯುವಂತೆ ಸಚಿವರು ಸೂಚಿಸಿದರು.

ಸಭೆಯಲ್ಲಿ ಶಾಸಕರುಗಳಾದ ಹೆಚ್.ಡಿ. ತಮ್ಮಯ್ಯ, ನಯನ ಮೋಟಮ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಡಾ. ಮಂಜುನಾಥ್, ಎಲ್ಲಾ ತಾಲ್ಲೂಕುಗಳ ವೈದ್ಯಾಧಿಕಾರಿಗಳು ಹಾಜರಿದ್ದರು.

A meeting was held on measures taken to control monkey disease

About Author

Leave a Reply

Your email address will not be published. Required fields are marked *

You may have missed