September 21, 2024

ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ

0
ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ

ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ

ಶೃಂಗೇರಿ: ಶೃಂಗೇರಿ ತಾಲ್ಲೂಕಿನ ನಿಲಂದೂರು ಗ್ರಾಮದ ಹೆಗ್ಗರಸು ಮತ್ತು ಹುಲುಗಾರಿನ ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕವನ್ನು ಶಾರದಾ ಪೀಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ನೆರವೇರಿಸಿದರು.

೩೦೦ ವರ್ಷದ ಇತಿಹಾಸವಿರುವ ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ದೇವಸ್ಥಾನದ ಸಮೀಪ ನವೀಕೃತ ಹೊಸ ದೇಗುಲವನ್ನು ನಿರ್ಮಿಸಿ, ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳನ್ನು ಪ್ರತಿಷ್ಠಾಪಿಸಲಾಯಿತು. ಕುಂಭಾಭಿಷೇಕದ ಅಂಗವಾಗಿ ಮಂಗಳವಾರ ಗಣಪತಿ ಹೋಮದೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮ, ವಾಸ್ತು ಹೋಮ, ಶಾಂತಿ ಹೋಮ, ಜಲಾಧಿವಾಸ, ಪ್ರಸಾದ ಶುದ್ಧಿ, ಪ್ರಾಸಾದ ಪರಿಗ್ರಹ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ದಿಗ್ಬಲಿ, ಅಧಿವಾಸ ಹೋಮ, ಷೋಡಶಕಲಾನ್ಯಾಸ, ಸಪ್ತಾದಿವಾಸ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.

ಗುರುವಾರ ಬೆಳಿಗ್ಗೆ ಶಾರದಾ ಪೀಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಗಳು ಆಗಮಿಸಿ, ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮಿಗೆ ಪಂಚಾಮೃತಭಿಷೇಕ, ರುದ್ರಾಭಿಷೇಕದ ಬಳಿಕ ಮಹಾಮಂಗಳಾರತಿ ನೆರವೇರಿಸಿದರು. ದೇಗುಲದ ಶಿಖರಕ್ಕೆ ಕುಂಭಾಭಿಷೇಕ ನೆರವೇರಿಸಿದರು. ಕುಂಭಾಭಿಷೇಕದ ಹಿನ್ನಲೆಯಲ್ಲಿ ರಸ್ತೆಯನ್ನು ತಳಿರು, ತೋರಣ, ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಹೆಗ್ಗರಸು, ಹುಲುಗಾರು, ಹಡಗಿನಕೊಪ್ಪ, ಕಿರುಕೋಡಿಗೆ, ಮರಿಗೆಬೈಲು, ಹೊಸ್ಕೆರೆ, ನಲ್ಲೂರು, ಅಣ್ಕುಳಿ, ನಿಲಂದೂರು ಮತ್ತು ಇತರೆ ಮುಂತಾದ ೨೦ ಗ್ರಾಮದ ಸಾವಿರಾರು ಜನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕುಂಭಾಭಿಷೇಕ ನಡೆದ ಬಳಿಕ ವಿಧುಶೇಖರಭಾರತೀ ಸ್ವಾಮೀಜಿ ಅವರು ಅನುಗ್ರಹ ಭಾಷಣ ಮಾಡಿ ಮಾತನಾಡಿ, ‘ಸನಾತನ ಧರ್ಮದ ಉಳಿವಿಗಾಗಿ ಶಂಕರಚಾರ್ಯ ಕೊಡುಗೆ ಅನನ್ಯ. ಸನಾತನ ಧರ್ಮದ ಮೇಲೆ ಎಷ್ಟೇ ದಾಳಿ ನಡೆಸಿದರೂ ಧರ್ಮ ಉಳಿದುಕೊಂಡಿದೆ. ದೇವರು ಲೋಕ ಕಲ್ಯಾಣಕ್ಕಾಗಿ ಹಲವಾರು ರೂಪದಲ್ಲಿರುತ್ತಾರೆ ಆದರೆ ಚೈತನ್ಯ ಒಂದೇ. ಭಗವಂತನ ಅನುಗ್ರಹವಿಲ್ಲದೇ ಯಾರೊಬ್ಬರು ಸುಖವಾಗಿ ಜೀವನ ನಡೆಸಲು ಅಸಾಧ್ಯ. ಎಲ್ಲರೂ ಅವರವರ ಲೌಕಿಕ ಜೀವನದ ನಡುವೆ ಭಗವಂತನ ಸ್ಮರಣೆ ನಿತ್ಯವೂ ಮಾಡಬೇಕು. ಧಾರ್ಮಿಕ ಜೀವನ ಶಾಸ್ತ್ರೋತ್ತವಾಗಿ ಇರಬೇಕು. ಲೌಕಿಕ ಜೀವನದಲ್ಲಿ ಕಾನೂನು ಅಳವಡಿಸಿಕೋಳ್ಳಬೇಕು.

ಭಗವಂತನ ಆರಾಧನೆಯೂ ಹಲವಾರು ರೀತಿಯಲ್ಲಿದ್ದು, ನಿಮ್ಮ ಇಷ್ಟಕ್ಕೆ ಅನುಸಾರವಾಗಿ ಸ್ವಾಮಿಯ ಸ್ಮರಣೆ ದೇವಸ್ಥಾನಕ್ಕೆ ತೆರಳಬೇಕು. ನಮ್ಮ ಧರ್ಮಾನುಸಾರ ಬದುಕು ನಡೆಸಿ, ಉತ್ತಮ ಸಂಸ್ಕಾರ ಬೆಳಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ನಾವೆಷ್ಟೇ ಸಂಪತ್ತು, ವಸ್ತು ಸಂಪಾದಿಸಿದರೂ ಒಂದಲ್ಲ ಒಂದು ದಿನ ದೇಹತ್ಯಾಗದ ನಂತರ ಅವೆಲ್ಲವನ್ನು ಬಿಟ್ಟು ಹೋಗಬೇಕು. ಜೀವನದಲ್ಲಿ ಮಾಡಿದ ಸತ್ಕಾರ್ಯ ಮಾತ್ರ ನಮ್ಮ ಮರಣದ ನಂತರವೂ ಉಳಿಯುತ್ತದೆ. ಒಳ್ಳೆಯ ಕೆಲಸದಿಂದ ಆತ್ಮಕ್ಕೆ ಸಂತೋಷ ದೊರಕುತ್ತದೆ’ ಎಂದರು.

ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ‘ನಮ್ಮ ಪೂರ್ವಜರು ಪ್ರಮುಖ ಆಸ್ತಿಯಾಗಿ ನಮಗೆ ಉಳಿ, ಸುತ್ತಿಗೆಯನ್ನು ಬಿಟ್ಟು ಹೋಗಿದ್ದಾರೆ. ಅದರಿಂದ ದೇಶದಲ್ಲಿ ಹೆಸರು ಮಾಡಲು ಸಾಧ್ಯವಾಯಿತು’ ಎಂದರು.

ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಎಚ್.ಎಸ್ ಸಂಪತ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಣ್ಕುಳಿ ಲಕ್ಷ್ಮೀಶ, ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್, ಕುಂಚೂರು ದುರ್ಗಾಪರಮೇಶ್ವರಿ ದೇವಾಲಯದ ಅಧ್ಯಕ್ಷ ಶ್ರೀನಿವಾಸ್ ಗೌಡ, ತಲ್ಲೂರಂಗಡಿ ದೇವಾಲಯದ ಅಧ್ಯಕ್ಷ ಶಿವನಂದಾ ಹೆಗ್ಡೆ, ಪದಾಧಿಕಾರಿಗಳಾದ ಎಚ್.ಎಸ್ ನಟೇಶ್, ಭಾಸ್ಕರ್ ನಾಯ್ಕ, ಶೋಭಾ ಸಂಪತ್, ಸುದರ್ಶನ್, ಶ್ರೇಯಸ್, ಭಾನುಪ್ರಕಾಶ್, ಚೇತನ್, ಅರ್ಚಕ ಶೃಂಗೇಶ್ವರ ಭಟ್, ಶಿವನಂದ ರಾವ್ ಇದ್ದರು

Prana Pratistha Mahotsava of Shanta Mallikarjuna Swami and Parivar Devas

About Author

Leave a Reply

Your email address will not be published. Required fields are marked *