September 20, 2024

ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬದ್ದ

0
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ ಪತ್ರಿಕಾಗೋಷ್ಠಿ

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನಪರವಾದ ಮಹತ್ವಾಕಾಂಕ್ಷೆ ಯೋಜನೆಗಳಾದ ೫ ಗ್ಯಾರಂಟಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಬದ್ದವಾಗಿರುವುದಾಗಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದ್ದು ಶೇ.೯೬ ರಷ್ಟು ಜಾರಿಮಾಡಿ ರಾಜ್ಯದಲ್ಲೇ ಜಿಲ್ಲೆ ೯ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಈ ಐದು ಗ್ಯಾರಂಟಿ ಯೋಜನೆಗಳು ಭಾರತ ದೇಶದಲ್ಲಿ ಮಾದರಿಯಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬೇರೆ-ಬೇರೆ ರಾಜ್ಯಗಳು ಇದನ್ನು ಅನುಸರಿಸುತ್ತಿರುವುದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಜನ ಪ್ರಿಯತೆ ಹೆಚ್ಚು ಮಾಡಿದೆ ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಜಿಲ್ಲಾಡಳಿತ ನಮ್ಮ ಸಮಿತಿಯೊಂದಿಗೆ ಸಹಕರಿಸಲಿದೆ. ಅಪರ ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು ೫ ಜನ ಉಪಾಧ್ಯಕ್ಷರು, ೧೫ ಸದಸ್ಯರನ್ನೊಳಗೊಂಡ ಒಟ್ಟು ೨೧ ಪದಾಧಿಕಾರಿಗಳ ಸಮಿತಿ ಇದಾಗಿರುತ್ತದೆ ಎಂದು ತಿಳಿಸಿದರು.

ನಾಗರೀಕರು ಆತಂಕಕ್ಕೆ ಒಳಗಾಗಬಾರದು. ಅರ್ಹ ಫಲಾನುಭವಿಗಳು ನಮ್ಮನ್ನು ಸಂಪರ್ಕಿಸಿದರೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಒದಗಿಸಲು ಬದ್ದವಾಗಿರುವುದಾಗಿ ಹೇಳಿದ ಶಿವಾನಂದಸ್ವಾಮಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಕೂಡಲೇ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ವಿನಂತಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಮಾಸಾಂತ್ಯಕ್ಕೆ ೨.೪೪೯೭೬ ಮಹಿಳೆಯರಿಗೆ ೨ ಸಾವಿರ ರೂನಂತೆ ೪೯ ಕೋಟಿ ರೂಗಳನ್ನು ವ್ಯಯಮಾಡಲಾಗಿದೆ. ಈ ಸಂಬಂಧ ಬಾಕಿ ಇದ್ದ ೧೨ ಸಾವಿರ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ೧೧ ಸಾವಿರ ಅರ್ಜಿಗಳನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಮಾ.೨೮ ಕ್ಕೆ ಈ ಅರ್ಜಿಗಳಿಗೆ ಸೌಲಭ್ಯಗಳು ತಲುಪಲಿದೆ ಎಂದು ತಿಳಿಸಿದರು.

ಶಕ್ತಿಯೋಜನೆಯಡಿ ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಕಡೂರು ಈ ಮೂರು ಕೆಎಸ್‌ಆರ್‌ಟಿಸಿ ಘಟಕಗಳಿಂದ ಒಟ್ಟು ೧.೫೩ ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ೫೬ ಕೋಟಿ ರೂ ವೆಚ್ಚವಾಗಿದೆ. ಈ ಹಣವನ್ನು ಹಂತ ಹಂತವಾಗಿ ನಿಗಮಗಳಿಗೆ ಸರ್ಕಾರ ತುಂಬಲಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ೨.೯೫ ಲಕ್ಷ ಗ್ರಾಹಕರು ಜಿಲ್ಲೆಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಅನ್ನಭಾಗ್ಯದಲ್ಲಿ ೨.೩೯ ಲಕ್ಷ ಜನ ಪ್ರಯೋಜನ ಪಡೆಯುತ್ತಿದ್ದು, ಯುವನಿಧಿಯಲ್ಲಿ ೬೩೩ ನಿರುದ್ಯೋಗ ಯುವಕ-ಯುವತಿಯರಿಗೆ ಈವರೆಗೆ ೧೭ ಲಕ್ಷ ರೂ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ೫ ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು ೮೦ ಕೋಟಿ ರೂ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿದ ಸರ್ಕಾರ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರುಗಳಿಗೆ ಜಿಲ್ಲೆಯ ಶಾಸಕರುಗಳಿಗೆ ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಸಮಿತಿ ಉಪಾಧ್ಯಕ್ಷರುಗಳಾದ ಎಸ್.ಎನ್ ಮಂಜುನಾಥ್, ಸಮೀಉಲ್ಲಾ ಶರೀಫ್, ಚಂದ್ರಮೌಳಿ ಉಪಸ್ಥಿತರಿದ್ದರು.

Effective implementation of Panch Guarantee Schemes

About Author

Leave a Reply

Your email address will not be published. Required fields are marked *