September 20, 2024

ರೈತರ ಉಂಡೆ ಕೊಬ್ಬರಿ ಖರೀದಿಸುವ ಮೂಲಕ ಸರ್ಕಾರ ನೆರವಿಗೆ ಬರುತ್ತಿದೆ

0
ರಾಗಿ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ

ರಾಗಿ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ

ಚಿಕ್ಕಮಗಳೂರು: ಸಂಕಷ್ಠದಲ್ಲಿರುವ ರೈತರಿಗೆ ಬೆಂಬಲ ಬೆಲೆ ಕೊಟ್ಟು ರಾಗಿ ಹಾಗೂ ಉಂಡೆ ಕೊಬ್ಬರಿ ಖರೀದಿಸುವ ಮೂಲಕ ಸರ್ಕಾರ ನೆರವಿಗೆ ಬರುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಮನವಿ ಮಾಡಿದರು.

ಅವರು ಇಂದು ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯ ಸರ್ಕಾರದ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ತೆರೆಯಲಾದ ರಾಗಿ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ರಾಗಿ ಮಾರಾಟಕ್ಕೆ ೧೧೦೦ ರೈತರು ಹಾಗೂ ಕೊಬ್ಬರಿಗೆ ೫೫೦ ಮಂದಿ ರೈತರು ನೊಂದಾಯಿಸಿದ್ದಾರೆ. ೩೮೪೬ ರೂ. ರಾಗಿಗೆ ಹಾಗೂ ೧೩೫೦೦ ರೂ. ಬೆಂಬಲ ಬೆಲೆ ಕೊಬ್ಬರಿಗೆ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಕಡೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲ್ಲೂಕು ಘೋಷಣೆ ಆಗದಿದ್ದರೂ ಕೇಂದ್ರದ ಕೆಲವು ಮಾನದಂಡಗಳ ಅಡಿ ಬರದ ಕಾರಣ ಘೋಷಣೆ ಆಗಿಲ್ಲ. ಇದು ತಾಂತ್ರಿಕ ಸಮಸ್ಯೆ ಎಂದರು.

ಎಲ್ಲದಕ್ಕೂ ಮನುಷ್ಯ ಪ್ರಯತ್ನ ಇರುತ್ತದೆ. ದೈವ ಕೃಪೆಯೂ ಇರಬೇಕಾಗುತ್ತದೆ. ಬರಗಾಲ ಬರಲಿ ಎಂದು ಯಾವತ್ತೂ ಬಯಸುವುದಿಲ್ಲ. ಒಳ್ಳೆ ಮಳೆ, ಬೆಳೆ ಬಂದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತಮ ಬೆಲೆ ಸಿಕ್ಕಲ್ಲಿ ನಮ್ಮ ರೈತರು ಸರ್ಕಾರದ ಬಳಿ ಕೈಚಾಚುವುದಿಲ್ಲ ಎಂದು ಹೇಳಿದರು.

ಈ ಕಾರಣಕ್ಕೆ ಒಳ್ಳೆ ಮಳೆ, ಬೆಳೆ, ಬೆಲೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು. ಪ್ರಕೃತಿ ಮುಂದೆ ನಾವ್ಯಾರೂ ಇಲ್ಲ. ಆದರೆ ಸಂಕಷ್ಠದ ಸಂದರ್ಭದಲ್ಲಿ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ ಎಂದು ಭರವಸೆ ನೀಡಿದರು.

ಈ ಕೇಂದ್ರದಲ್ಲಿ ೬೫೩೮ ಕ್ವಿಂಟಾಲ್ ಕೊಬ್ಬರಿ ಹಾಗೂ ೨೪೮೫೦ ಕ್ವಿಂಟಾಲ್ ರಾಗಿಯನ್ನು ಖರೀದಿಸಲು ಅವಕಾಶವಿದೆ. ಪ್ರತಿ ರೈತನಿಗೆ ಒಂದು ಎಕರೆಗೆ ೧೦ ಕ್ವಿಂಟಾಲ್ ರಾಗಿ ಹಾಗೂ ತೆಂಗು ಬೆಳೆಯುವವರಿಗೆ ಪ್ರತಿ ಕ್ವಿಂಟಾಲ್‌ಗೆ ೬ ಕ್ವಿಂಟಾಲ್ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ, ಉಂಡೆ ಕೊಬ್ಬರಿ ಖರೀದಿಯ ಪ್ರಾರಂಭವು ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿ, ನಮ್ಮ ರೈತರಿಗೆ ಯಾವುದೇ ರೀತಿ ತೊಂದರೆ ಆಗದ ರೀತಿ ಯೋಜನೆಯನ್ನು ಜಾರಿ ಮಾಡಬೇಕು. ಕೆಲವರು ಹೆಚ್ಚು ರಾಗಿ, ಕೊಬ್ಬರಿ ಬೆಳೆದವರಿದ್ದಾರೆ ಅವರಿಗೆಲ್ಲ ಅನುಕೂಲವಾಗುವಂತೆ ಸರ್ಕಾರದ ಗಮನಕ್ಕೆ ತಂದು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಮಾತನಾಡಿ, ರಾಗಿಗೆ ೩೮೪೬ ರೂ.ಗಳಾಗಿವೆ. ಪ್ರತಿ ರೈತರು ೧ ಎಕರೆಗೆ ೧೦ ಕ್ವಿಂಟಾಲ್‌ನಂತೆ ರಾಗಿ ಮಾರಾಟ ಮಾಡಬಹುದು. ೪ ಎಕರೆ ಹೊಂದಿದ್ದರೆ ೪೦ ಕ್ವಿಂಟಾಲ್ ಮಾರಾಟ ಮಾಡಬಹುದು. ೧೦ ಎಕರೆ ಹೊಂದಿದ್ದರೆ ೧೦೦ ಕ್ವಿಂಟಾಲ್ ಕೊಡಬಹುದು ಇದು ಸರ್ಕಾರದ ನಿರ್ದೇಶನ. ಫ್ರೂಟ್ ಐಡಿಯಲ್ಲಿ ಜಮೀನಿನ ಮಾಹಿತಿ ದಾಖಲಾಗಿದ್ದರೆ ಅದು ನೊಂದಣಿ ಆಗುತ್ತದೆ. ಬಯೋಮೆಟ್ರಿಕ್ ಮೂಲಕವೂ ಈ ವರ್ಷ ನೊಂದಣಿ ಮಾಡಿಕೊಳ್ಳಲಾಗಿದೆ. ಜನವರಿ ೧ ರಿಂದಲೇ ನೊಂದಣಿ ಆರಂಭವಾಗಿದ್ದು, ಮಾರ್ಚ್ ೧ ರ ವರೆಗೆ ನೊಂದಣಿಗೆ ಅವಕಾಶವಿತ್ತು ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಹೆಚ್.ಕೆ.ದಿನೇಶ್ ಹೊಸೂರು, ಕೃಷಿ ಇಲಾಖೆ ಜಂಟೀ ನಿರ್ದೇಶಕಿ ಸುಜಾತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಎಪಿಎಂಸಿ ಕಾರ್ಯದರ್ಶಿ ಅಭಿನಂದನ್ ಇತರರು ಇದ್ದರು.

Inauguration of Millet and Unde Kobberi Purchase Centre

About Author

Leave a Reply

Your email address will not be published. Required fields are marked *