September 19, 2024

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೫,೭೨,೯೫೮ ಮತದಾರರು

0
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು ೧೫,೭೨,೯೫೮ ಮತದಾರರಿದ್ದಾರೆ. ಕುಂದಾಪುರ, ಉಡುಪಿ, ಕಾಪು, ಕಾರ್ಕಳ ತಾಲ್ಲೂಕುಗಳು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ೮,೧೨,೧೫೭, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ನಾಲ್ಕು ತಾಲ್ಲೂಕುಗಳಲ್ಲಿ ೭,೬೦,೮೦೧ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಡೂರು ತಾಲ್ಲೂಕು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು, ೨,೦೭,೧೩೪ ಮತದಾರರಿದ್ದು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದು ಹೇಳಿ, ಜಿಲ್ಲೆಯಾದ್ಯಂತ ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನೀತಿ ಸಂಹಿತೆಯನ್ನು ಪ್ರತಿಯೊಂದು ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ನ್ನು ಘೋಷಣೆ ಮಾಡಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ ೨೬ ಕ್ಕೆ ಮತದಾನ ನಡೆಯಲಿದ್ದು, ಜೂನ್ ೪ಕ್ಕೆ ಮತ ಎಣಿಕೆ ನಡೆಯಲಿದೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾರ್ಚ್ ೨೮ ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.

ನಾಮಪತ್ರ ಸಲ್ಲಿಸಲು ಏಪ್ರಿಲ್ ೦೪ ಕೊನೆಯ ದಿನವಾಗಿದ್ದು, ಏಪ್ರಿಲ್ ೦೫ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ ೦೮ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಏಪ್ರಿಲ್ ೨೬ ಕ್ಕೆ ಮತದಾನ ನಡೆಯಲಿದ್ದು, ಜೂನ್ ೦೪ ಕ್ಕೆ ಮತ ಎಣಿಕೆ ನಡೆಯಲಿದೆ. ಜೂನ್ ೦೬ ಕ್ಕೆ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗುತ್ತದೆ ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿರುವುದರಿಂದ ರಾಜಕೀಯ ಸಭೆ ಸಮಾರಂಭಕ್ಕೆ ಪರವಾನಗಿ ಕಡ್ಡಾಯವಾಗಿದೆ. ಜಿಲ್ಲಾಧಿಕಾರಿಗಳ ಕಛೇರಿ ಅಥವಾ ತಾಲ್ಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅಥವಾ ಸುವಿಧಾ ಮೂಲಕ ಪರವಾನಗಿ ಪಡೆಯಬೇಕು. ಅತಿಥಿ ಗೃಹಗಳು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಗ್ರಹಣದಲ್ಲಿರುವುದರಿಂದ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಪ್ರವಾಸ ಮಂದಿರ ನಿಷೇಧಿಸಲಾಗಿದೆ ಎಂದರು.

ಮತದಾರರ ಮೇಲೆ ಪ್ರಭಾವ ಬೀರುವ ಸರ್ಕಾರಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು ಆದರೆ ಕುಡಿಯುವ ನೀರು, ಬರ ಪರಿಹಾರ ಕಾರ್ಯಗಳು ಎಂದಿನಂತೆ ನಡೆಯಲಿದೆ. ಇದಕ್ಕೆ ಅಡ್ಡಿಯಿಲ್ಲ ಎಂದು ಹೇಳಿದ ಅವರು. ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಚುನಾವಣೆ ಘೋಷಣೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳ ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬಂಟಿಂಗ್ಸ್, ಬ್ಯಾನರ್‍ಸ್, ಭಿತ್ತಿಪತ್ರ ಹಾಗೂ ಕಟೌಟ್‌ಗಳನ್ನು ತೆರವುಗೊಳಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದ ಅವರು ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸದವರು ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕದ ಹತ್ತು ದಿನಗಳ ಮುಂಚಿತವಾಗಿ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದ ಅವರು ೮೫ ವರ್ಷ ಮೇಲ್ಪಟ್ಟ ವಯೋವೃದ್ಧರು, ವಿಶೇಷ ಚೇತನರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ಮತದಾರರ ಮನೆಗೆ ೧೨-ಡಿ ನಮೂನೆ ನೀಡಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಅಪರ ಜಿಲ್ಲಾಧಿಕಾರಿ ಕನಕರಡ್ಡಿ ನಾರಾಯಣರಡ್ಡಿ ಹಾಜರಿದ್ದರು.

Total voters in Udupi-Chikkamagaluru Lok Sabha constituency are 1572958

 

About Author

Leave a Reply

Your email address will not be published. Required fields are marked *

You may have missed