September 20, 2024

ಹಿರೇಮಗಳೂರಿನ ಕೋದಂಡರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವ

0
ಹಿರೇಮಗಳೂರಿನ ಕೋದಂಡರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವ

ಹಿರೇಮಗಳೂರಿನ ಕೋದಂಡರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವ

ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಮಂಗಳವಾರ ವೈಭವದಿಂದ ನಡೆಯಿತು.

ಉತ್ಸವದ ಪ್ರಯುಕ್ತ ನಸಕು ಹರಿಯುತ್ತಿದ್ದಂತೆ ವೇದವಿದ್ವಾಂಸರಿಂದ ಕನ್ನಡ ರಾಮನಿಗೆ ವಸಂತ ಸೇವೆ, ತೋಮಾಲೆ ಸೇವೆ, ಸುಪ್ರಭಾತ ಸೇವೆ, ವಿಶೇಷ ಅಲಂಕಾರ, ಬ್ರಹ್ಮರಥ ಶಾಂತಿ ಹೋಮ, ಯಾತ್ರಾ ದಾನ, ಶ್ರೀ ಕೃಷ್ಣಗಂಧೋತ್ಸವ, ಮಂಟಪಸೇವೆ ಜರುಗಿದವು.

ಮೂಲ ರಾಮನಿಗೆ ಮಹಾಮಂಗಳಾರತಿ ನಂತರ ಮಧ್ಯಾಹ್ನದ ವೇಳೆಗೆ ಕನ್ನಡ ರಾಮನ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಸಾಂಪ್ರದಾಯಿಕ ನಾದಸ್ವರ ಮತ್ತು ಗ್ರಾಮೀಣ ವಾದ್ಯಗಳ ನಡುವೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಮನೆಗಳ ಮುಂದೆ ರಂಗವಲ್ಲಿ ಹಾಕಿ ಉತ್ಸವ ಮೂರ್ತಿಯನ್ನು ಸ್ವಾಗತಿಸಿದ ಗ್ರಾಮಸ್ಥರು ಆರತಿ ಎತ್ತಿ ಇಡಿಗಾಯಿ ಒಡೆದು ಬೀಳ್ಕೊಟ್ಟರು, ಮೆರವಣಿಗೆಯ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಈ ವೇಳೆ ಭಕ್ತರಿಂದ ನಡೆದ ಭಜನೆ, ಜಯಘೋಷ, ವಿಪ್ರರಿಂದ ವೇದಘೋಷ, ದಾಸಯ್ಯಗಳಿಂದ ಶಂಖ ಜಾಗಟೆಗಳ ಮತ್ತು ನಾದಸ್ವರ, ಗ್ರಾಮೀಣ ವಾದ್ಯಗಳ ನಾದ ಮುಗಿಲು ಮುಟ್ಟಿತು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಪಾಂಚರಾತ್ರ ಆಗಮೋಕ್ತ ಕ್ರಮದಲ್ಲಿ ಬಲಿ ಪೂಜೆ ಸೇರಿದಂತೆ ಧಾರ್ಮಿಕ ವಿದಿವಿಧಾನಗಳು ಜರುಗಿದವು. ಸಹಸ್ರಾರು ಭಕ್ತರ ನಡುವೆ ಬ್ರಹ್ಮರಥವನ್ನು ಎಳೆಯಲಾಯಿತು.

ಈ ವೇಳೆ ಭಕ್ತರು ರಥದತ್ತ ಬಾಳೆಹಣ್ಣನ್ನು ತೂರಿ ಸಂಭ್ರಮಿಸಿದರು, ರಾಮ ನಾಮ ಸಂಕೀರ್ತನೆ, ಸಂಗೀತ ಸೇವೆ, ಭಜನೆ ಉತ್ಸವದುದ್ದಕ್ಕೂ ನಡೆಯಿತು. ರಥೋತ್ಸವದ ನಂತರ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆದರೆ, ಗ್ರಾಮದ ಮನೆಮನೆಗಳಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು.

ಮಳೆ, ಬೆಳೆ ಸಮೃದ್ದಿಯಾಗಿ ಲೋಕಕ್ಕೆ ಸುಭೀಕ್ಷವಾಗುವಂತೆ ಪ್ರಾರ್ಥಿಸಲಾಯಿತು, ನಂತರ ದಾಸಯ್ಯರಿಂದ ಶಂಖನಾದ, ನಾದಸ್ವರ, ಗ್ರಾಮೀಣ ವಾದ್ಯಗಳು ಮತ್ತು ಭಜನಾ ತಂಡಗಳೊಂದಿಗೆ ಬ್ರಹ್ಮ ರಥವನ್ನು ಎಳೆಯಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳು, ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಉತ್ಸವದಲ್ಲಿ ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು.

ಇದೇ ವೇಳೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಮಾತನಾಡಿ, ಇಂದಿನ ರಥೋತ್ಸವ ಮಾನವೀಯ ಮೌಲ್ಯಗಳೊಂದಿಗೆ ಜಾತ್ಯತೀತವಾಗಿ ನಾವೆಲ್ಲ ಒಂದು, ನಾವೆಲ್ಲ ಬಂಧುಗಳು ಎನ್ನುವ ರೀತಿ ಆಚರಿಸಲ್ಪಟ್ಟಿದೆ. ನಮ್ಮ ಗ್ರಾಮದ ಎಲ್ಲ ಜನರು ದೇವರಿಗೆ ಹಾರವನ್ನು ಅರ್ಪಿಸಿ ಶ್ರದ್ಧೆಯಿಂದ ಪ್ರಾರ್ಥಿಸಿದ್ದಾರೆ. ಎಂದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Brahma Rathotsava of Kodandaramachandra Swami of Hiremagaluru

About Author

Leave a Reply

Your email address will not be published. Required fields are marked *