September 20, 2024
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಗವನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಗವನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ

ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಭಾರತ ಶಕ್ತಿಶಾಲಿ, ಬಲಿಷ್ಠ, ಸ್ವಾಭಿಮಾನಿಯಾಗಿ ಹೊರಹೊಮ್ಮಬೇಕಾದರೆ ಬಿಜೆಪಿ ಪಕ್ಷದ ಕೈಗೆ ಅಧಿಕಾರ ಕೊಡಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮತದಾರರಲ್ಲಿ ಮನವಿ ಮಾಡಿದರು.

ಅವರು ಇಂದು ಸಮೀಪದ ಗವನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇದು ಕೇವಲ ಬಜೆಪಿ ಕಾರ್ಯಕರ್ತರ ಭಾವನೆಯಲ್ಲ. ಹಿಂದುತ್ವದ ಆಧಾರವೂ ಅಲ್ಲ. ದೇಶದಲ್ಲಿರುವ ಪ್ರತಿಯೊಬ್ಬ ರಾಷ್ಟ್ರ ಭಕ್ತರೂ ಕೂಡ ಈ ದೇಶ ಒಳ್ಳೆಯದಾಗಬೇಕಾದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ. ಆದ್ದರಿಂದ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.

ಜನರಲ್ಲಿ ಈ ಅಭಿಪ್ರಾಯ ಸ್ವಾಭಾವಿಕವಾಗಿರುವುದನ್ನು ಇಂದು ನಾವು ಕಾಣುತ್ತಿದ್ದೇವೆ. ಇದು ಮತವಾಗಿ ಪರಿವರ್ತನೆಯಾಗಬೇಕಾದರೆ ಪ್ರತೀ ಮನೆ ಮನೆಗೆ ಭೂತ್ ಮಟ್ಟದಲ್ಲಿ ಭೇಟಿ ನೀಡಿ ಈ ರಾಷ್ಟ್ರೀಯ ಕಾರ್ಯಕ್ಕೆ ಬಿಜೆಪಿಗೆ ಮತನೀಡಿ ಎಂದು ಮನವರಿಕೆ ಮಾಡಲು ತಾವುಗಳೆಲ್ಲರೂ ಪ್ರಚಾದಲ್ಲಿ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪೂರ್ಣ ಪ್ರಮಾಣದ ಸಿದ್ದತೆ ಮಾಡಿಕೊಂಡಿದೆ. ಏ.೩ ರಂದು ನಾಮಪತ್ರ ಸಲ್ಲಿಸಲು ಎಲ್ಲಾ ರೀತಿಯ ಪೂರ್ವಭಾವಿ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ೪, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ವಿಶಾಲವಾದ ಲೋಕಸಭಾ ಕ್ಷೇತ್ರ ಇದಾಗಿದ್ದು, ಈ ನಿಟ್ಟಿನಲ್ಲಿ ಪ್ರತೀ ಮತಗಟ್ಟೆ ಭೇಟಿಮಾಡಲು ಕಷ್ಟಸಾಧ್ಯವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಎಲ್ಲೆಲ್ಲಿ ಸಂಪರ್ಕ ಮಾಡಬೇಕೆಂದು ಪಕ್ಷ ಸೂಚಿಸುತ್ತದೆಯೋ ಅಲ್ಲೆಲ್ಲಾ ಮತ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

ಈ ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ವ್ಯಕ್ತಿಗತವಾಗಿ ಹೊಸ ವ್ಯಕ್ತಿಯಾಗಿದ್ದು ಕಳೆದ ನಾಲ್ಕು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಜಗದೀಶ್ ಶೆಟ್ಟರ್, ಬಿ.ಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಈ ಮೂರು ಮುಖ್ಯಮಂತ್ರಿಗಳೊಂದಿಗೆ ಮೂರು ಭಾರಿ ಸಚಿವನಾಗಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ವಿಪಕ್ಷ ನಾಯಕನಾಗಿಯೂ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ ಎಂದರು.

ರಾಜ್ಯಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಬಡವರ ಪರವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯಪಾಲರು ಧಾರ್ಮಿಕ ದತ್ತಿ ಬಿಲ್ಲನ್ನು ತಿರಸ್ಕರಿಸಿದಾಗ ಹಿಂದುತ್ವದ ಆಧಾರದಲ್ಲಿ ಭಕ್ತರಿಗೆ ಅನುಕೂಲವಾಗಲೆಂದು ಅಭಿವೃದ್ಧಿಗೆ ಪೂರಕವಾಗಿ ಮನವರಿಕೆ ಮಾಡಿ ಜಾರಿಗೆ ತಂದಿರುವುದಾಗಿ ಹೇಳಿದರು.

ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ಕೋಟಾ ಶ್ರೀನಿವಾಸ ಪೂಜಾರಿ ಅವರು ಸರಳ ಸಜ್ಜನ ರಾಜಕಾರಣಿಯಾಗಿದ್ದು, ದೇಶಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಅಷ್ಟೇ ಅಲ್ಲ. ಜಗತ್ತಿನಲ್ಲಿ ಭಾರತಕ್ಕೊಂದು ಗೌರವ ಬಂದಿದೆ. ಆ ನಿಟ್ಟಿನಲ್ಲಿ ಮತದಾರರು ಬಿಜೆಪಿಗೆ ಮತ ನೀಡಿಬೇಕು. ಭಾರತದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದಾಗ ಯುದ್ಧ ನಡೆದ ಸಂದರ್ಭದಲ್ಲಿ ಅವರನ್ನು ಸುರಕ್ಷಿತವಾಗಿ ಕರೆತರಲಾಯಿತು. ಇದು ಭಾರತದ ತಾಕತ್ತು. ಇದಕ್ಕೆ ನಿಮ್ಮ ಮತ ಕಾರಣ ಎಂದು ತಿಳಿಸಿದರು.

ವಂದೇ ಮಾತರಂ ಎಂದು ಘೋಷಣೆ ಬರಬೇಕಾದರೆ ಬಿಜೆಪಿ ಗೆಲ್ಲಲೇಬೇಕು. ನರೇಂದ್ರ ಮೋದಿ ಪ್ರಧಾನಿಯಾಗಬೇಕು. ತುಕುಡೆ ಗ್ಯಾಂಗ್‌ಗೆ ಮತ ನೀಡಿದರೆ ಸೈನಿಕರಿಗೆ ಕಲ್ಲು ಹೊಡೆದು ಘೆರಾವು ಮಾಡುತ್ತಾರೆ ಎಂದು ಆರೋಪಿಸಿದರು.

ನಿಂತ ನೆಲ ಕುಸಿದರೆ ಮನೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ ಅವರು ಆದ್ದರಿಂದ ಇದು ದೇಶ ಉಳಿಸುವ ಚುನಾವಣೆಯಾಗಿದ್ದು, ಕಳೆದ ಹತ್ತು ತಿಂಗಳಲ್ಲಿ ಸರ್ಕಾರ ಜಿಲ್ಲೆಗೆ ಏನು ಹೊಸ ಯೋಜನೆ ನೀಡಿದೆ ಎಂದು ಪ್ರಶ್ನಿಸಿದ ಅವರು ನಾವು ನಮ್ಮ ಸರ್ಕಾರ ಜಾರಿ ಮಾಡಿದ್ದ ಯೋಜನೆಗಳಿಗೆ ಹಾಲಿ ಶಾಸಕರು ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆಂದು ಟೀಕಿಸಿದರು.

ದೇಶದಲ್ಲಿ ರಾಕ್ಷಸಿ ಮತಾಂಧರೀಯ ಕ್ರೌರ್ಯಗಳಿವೆ. ಇವರನ್ನು ಕೊಬ್ಬಿಸಲು ಕೆಲವು ಪಕ್ಷಗಳ ರಾಜಕೀಯ ನೀತಿ ಕಾರಣ ಆದ್ದರಿಂದ ನಿಮ್ಮ ಮತ ರಾಷ್ಟ್ರೀಯತೆಗೆ ಬಲ ನೀಡಿ ಅಭಿವೃದ್ಧಿಗೆ ಆದ್ಯತೆ ಕೊಡುತ್ತದೆ. ಬಡವರಿಗೆ ಶಕ್ತಿ ಕೊಡುತ್ತವೆ. ಮತಾಂಧರ ಕೊಬ್ಬು ಇಳಿಸುತ್ತೇವೆಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜು, ಮುಖಂಡರಾದ ಕಲ್ಮರುಡಪ್ಪ, ಕೋಟೆ ರಂಗನಾಥ್, ಕೆ.ಪಿ ವೆಂಕಟೇಶ್, ಶ್ರೀಧರ್ ಉರಾಳ್, ಗವನಹಳ್ಳಿ ಶ್ರೀನಿವಾಸ್, ಕೇಶವ್, ಮತ್ತಿತರರು ಉಪಸ್ಥಿತರಿದ್ದರು.

Udupi-Chikkamagaluru Lok Sabha Constituency BJP Candidate Kota Srinivasa Pujari Starts Election Campaign in Gavanahalli Village

About Author

Leave a Reply

Your email address will not be published. Required fields are marked *