September 19, 2024

ಲೋಕಸಭಾ ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಸಮರ್ಥ ಅಭ್ಯರ್ಥಿ

0
ಎಐಟಿ ವೃತ್ತದ ಸಮೀಪವಿರುವ ಒಕ್ಕಲಿಗರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಎಐಟಿ ವೃತ್ತದ ಸಮೀಪವಿರುವ ಒಕ್ಕಲಿಗರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿ ಸಿಕ್ಕಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಎರಡು ವರ್ಷ ಸಂಸದರಾಗಿದ್ದಾಗ ಹೇಗೆ ಕೆಲಸ ಮಾಡಿ ಜನಾನುರಾಗಿಯಾಗಿದ್ದರು ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಉಡುಪಿ ಮತ್ತು ಚಿಕ್ಕಮಂಗಳೂರು ಕ್ಷೇತ್ರಗಳು ಸ್ವತಂತ್ರ ಕ್ಷೇತ್ರವಾಗುವವರೆಗೂ ಜಯಪ್ರಕಾಶ್ ಹೆಗ್ಡೆ ಅವರನ್ನೇ ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಇಂಧನ ಹಾಗು ಜಿಲ್ಲಾ ಉಸ್ತವಾರಿ ಸಚಿವ ಕೆ.ಜೆ.ಜಾರ್ಜ್ ಜನರಲ್ಲಿ ಮನವಿ ಮಾಡಿದರು.

ನಗರದ ಎಐಟಿ ವೃತ್ತದ ಸಮೀಪವಿರುವ ಒಕ್ಕಲಿಗರ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರಿಗೂ ದೇವರ ಮೇಲೆ ಭಯ ಭಕ್ತಿ ಇರುತ್ತದೆ. ಒಂದೊಂದು ಧರ್ಮದವರು ಒಂದೊಂದು ರೀತಿ ದೇವರನ್ನು ಕಂಡುಕೊಂಡಿದ್ದಾರೆ. ಎಲ್ಲ ದೇವರುಗಳು ಹೇಳುವುದು ಒಳ್ಳೆಯದನ್ನೇ. ಹೀಗಿರುವಾಗ ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಡುವುದು ಸರಿಯಲ್ಲ ಎಂದರು.

ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಟೂರಿಂಗ್ ಟಾಕೀಸ್ ಇದ್ದಂತೆ. ಅವರು ಎಲ್ಲೂ ಒಂದು ಕಡೆ ನೆಲೆ ನಿಂತಿಲ್ಲ. ಬೆಂಗಳೂರಿನಲ್ಲಿ ಚುನಾವಣೆ ಸೋತ ಶೋಭಾ ಕರಂದ್ಲಾಜೆ ಬಳಿಕ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬಂದು ೨ ಬಾರಿ ಸಂಸದರಾದರು. ಇಲ್ಲಿ ಏನು ಕೆಲಸ ಮಾಡದಿದ್ದರಿಂದಾಗಿ ಬಿಜೆಪಿ ಕಾರ್ಯಕರ್ತರೇ ಅವರನ್ನು ಓಡಿಸಿದ್ದಾರೆ. ಹೀಗಾಗಿ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ ಎಂದು ಹೇಳಿದರು.

ಕೋಟ ಶ್ರೀನಿವಾಸ್ ಪೂಜಾರಿ ಅವರು ನಾಲ್ಕು ತಿಂಗಳ ಹಿಂದಷ್ಟೇ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹೀಗಿರುವಾಗ ಅವರನ್ನು ಸಂಸತ್ ಚುನಾವಣೆಗೆ ನಿಲ್ಲಿಸಿ ಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ಬೇರೆಯವರಿಗೆ ನೀಡಲು ಬಿಜೆಪಿ ಉಪಾಯ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಪಕ್ಷದಲ್ಲಿಯೇ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ. ಪರಿಷತ್ ವಿಪಕ್ಷ ಸ್ಥಾನವನ್ನು ಬೇರೆಯವರಿಗೆ ನೀಡಬೇಕು ಎಂಬ ಕಾರಣಕ್ಕೆ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಲಾಗಿದೆ. ಇಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಮೋಸ ಹೋಗಿದ್ದಾರೆ ಎಂದು ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಡಜನರ ಬದುಕನ್ನು ಗಟ್ಟಿಗೊಳಿಸಲು ಗ್ಯಾರಂಟಿ ನೀಡಿದರೆ ಬಿಜೆಪಿ ನಾಯಕರು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಜೊತೆಗೆ ರಾಜ್ಯ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದಾಗ ಇದೆ ನಾಯಕರು ಚರ್ಚೆ ಮಾಡುವುದಿಲ್ಲ. ಹೀಗೆ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಜನರು ತಮ್ಮ ಕೈಯನ್ನು ತಾವು ಬಲಪಡಿಸಿಕೊಂಡಂತಾಗುತ್ತದೆ. ನಾನು ಜನರ ಧ್ವನಿಯಾಗಿ ಕೆಲಸ ಮಾಡುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಏನೇನು ಬೇಕು ಅದನ್ನು ಮಾಡುವ ಕೆಲಸ ಮಾಡುತ್ತೇನೆ. ಜನರ ಮಧ್ಯೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ. ಇದರೊಂದಿಗೆ ಅಭಿವೃದ್ಧಿಗೂ ಒತ್ತು ನೀಡುತ್ತೇನೆ ಎಂದು ಹೇಳಿದರು.

ಜನರ ಮತವನ್ನು ಪಡೆದು ಅಧಿಕಾರಕ್ಕೆ ಬಂದ ಮೇಲೆ ಕೆಲಸ ಮಾಡದೆ ಬೆಂಗಳೂರಿನಲ್ಲಿ ಕೂರಬಾರದು. ಹೀಗೆ ಮಾಡಿದರೆ ಅದು ಜನರಿಗೆ ಮೋಸ ಮಾಡಿದಂತೆ. ನಾನು ಎರಡು ವರ್ಷ ಸಂಸದನಾಗಿದ್ದಾಗ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತಿ ಮಟ್ಟಕ್ಕೂ ತೆರಳಿ ಕೆಲಸ ಮಾಡಿದ್ದೇನೆ. ಈ ಬಾರಿ ಜನ ನನ್ನನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಾರೆ ಎಂಬುದನ್ನು ಜನ ನಿರ್ಧಾರ ಮಾಡಬೇಕು. ಬಿಜೆಪಿಗರಿಗೆ ನನ್ನ ಮೇಲೆ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ನನ್ನ ಹೇಳಿಕೆಗಳನ್ನು ತಿರುಚ್ಚುವ ಮೂಲಕ ಆರೋಪ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಫಲ ಕೊಡುವುದಿಲ್ಲ ಎಂದು ಕುಟುಕಿದರು.

ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ವಹಿಸಿದ್ದರು. ಶಾಸಕರಾದ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಮಾಜಿ ಸಚಿವೆ ಮೋಟಮ್ಮ, ಪ್ರಮುಖರಾದ ಬಿ.ಪಿ.ಹರೀಶ್, ಮಂಜೇಗೌಡ ಮತ್ತಿತರರಿದ್ದರು.

A meeting of Congress workers held at Okkaligara Bhawan near AIT circle

About Author

Leave a Reply

Your email address will not be published. Required fields are marked *

You may have missed