September 19, 2024

ಕುವೆಂಪು ಕಲಾ ಮಂದಿರದಲ್ಲಿ ಜಾಗೃತ ಮತದಾರರ ಸಮಾವೇಶ

0
ಕುವೆಂಪು ಕಲಾ ಮಂದಿರದಲ್ಲಿ ಪ್ರಜಾಪ್ರಭುತ್ವದ ಹಬ್ಬ-೨೦೨೪ ಅಂಗವಾಗಿ ನಡೆದ ನೋಟಾ ಬೇಡ ಓಟು ಹಾಕಿ ಕಾರ್ಯಕ್ರಮ

ಕುವೆಂಪು ಕಲಾ ಮಂದಿರದಲ್ಲಿ ಪ್ರಜಾಪ್ರಭುತ್ವದ ಹಬ್ಬ-೨೦೨೪ ಅಂಗವಾಗಿ ನಡೆದ ನೋಟಾ ಬೇಡ ಓಟು ಹಾಕಿ ಕಾರ್ಯಕ್ರಮ

ಚಿಕ್ಕಮಗಳೂರು:  ‘ನೋಟಾ’ಬೇಡ ‘ಓಟು’ಹಾಕಿ. ನಂಬಿಕೆ ಮತ್ತು ನೈತಿಕತೆಯ ಬದುಕು ನಮ್ಮದು. ದೇಶದ ಜನ, ಆಸ್ತಿ, ಪರಂಪರೆ ನನ್ನದ್ದೆಂದುಕೊಳ್ಳುವ ಭಾವ ರಾಷ್ಟ್ರೀಯತೆ ಎಂದು ಖ್ಯಾತ ವಾಗ್ಮಿ, ರಂಗಕರ್ಮಿ, ಚಿಂತಕ, ನಿರ್ದೇಶಕ ಎಸ್.ಎನ್.ಸೇತುರಾಂ ಅಭಿಪ್ರಾಯಿಸಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಪ್ರಜಾಪ್ರಭುತ್ವದ ಹಬ್ಬ-೨೦೨೪ ಅಂಗವಾಗಿ ಸುಗಮಸಂಗೀತಗಂಗಾ, ಸಂಸ್ಕಾರಭಾರತಿ, ಯುವಬ್ರಿಗೇಡ್, ವಂದೇಮಾತರಂ ಟ್ರಸ್ಟ್, ವಿವೇಕ ಜಾಗೃತ ಬಳಗ, ನಾದಚೈತನ್ಯ, ಅಖಿಲಭಾರತೀಯ ಸಾಹಿತ್ಯ ಪರಿಷದ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ‘ಜಾಗೃತ ಮತದಾರರ ಸಮಾವೇಶ’ದಲ್ಲಿ ‘ರಾಷ್ಟ್ರೀಯತೆ ಹತ್ತು ಹಲವು ಮುಖಗಳು’ ಕುರಿತಂತೆ ಉಪನ್ಯಾಸ ನೀಡಿದ ಅವರು, ಮತದಾರರೊಂದಿಗೆ ಸಂವಾದಿಸಿದರು.

ದೇಶದ ಆಗು-ಹೋಗು, ಸರಿ-ತಪ್ಪು ತುಲನೆಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ವಿವೇಚನೆಗೆ ಬೇಕಾದ ಜ್ಞಾನ ಮತ್ತು ಯೋಗ್ಯತೆ ನಮ್ಮಲ್ಲಿರಬೇಕು. ದೇಶದ ಸಾಧನೆ ಕೀಳಾಗಿ ನೋಡುವುದು ಬೇಡ, ಅನೇಕ ಸಂಗತಿಗಳು ಸುಳ್ಳಿರಬಹುದು. ಆದರೆ ಆಗುತ್ತಿರುವ ಸಕಾರಾತ್ಮಕ ಅಂಶಗಳನ್ನು ಗುರುತಿಸೋಣ. ನಮ್ಮವರ ಗೆಲುವಿಗೆ ಸಂತಸಪಡೋಣ, ಆಳುವವರ ಬಗ್ಗೆ ಸ್ಪಷ್ಟತೆ ಬೇಕು. ದೇಶ, ಜನ, ಸುತ್ತಲಿನ ವಸ್ತುಗಳೆಲ್ಲ ನನ್ನದೇ ಎಂಬ ಭಾವವೇ ರಾಷ್ಟ್ರೀಯತೆಯ ಲಕ್ಷಣ ಎಂದರು.

ಅಪಸವ್ಯಗಳ ಮೂಲಕ ಕಾನೂನನ್ನು ಅಳೆಯಬೇಡಿ. ಬದಲಾವಣೆಯನ್ನು ತೆರೆದ ಕಣ್ಣಿನಿಂದ ಗಮನಿಸಬೇಕು. ನಮ್ಮ ಎಚ್ಚರ ನಮಗಿರಬೇಕು. ನೋಟಾ ಚಲಾಯಿಸುವುದರಿಂದ ಏನೂ ಪ್ರಯೋಜನವಿಲ್ಲ. ಬದುಕು, ಆಲೋಚನಾ ಲಹರಿಯನ್ನು ಆಳುವುದು ನೈತಿಕತೆ. ಇದು ಸಾವಿರಾರು ವರ್ಷಗಳಿಂದ ತಲೆತಲೆಮಾರಿನಿಂದ ಹರಿದು ಬಂದಿದೆ. ಪ್ರೀತಿಸಲು ಕಾರಣ ಬೇಕಿಲ್ಲ. ಆದರೆ ದ್ವೇಷಿಸಲು ಕಾರಣವಿರಬೇಕು. ಬದುಕಿಗೆ ಒಂದುಮಾಪನ ನೈತಿಕತೆ ಎಂದವರು ಬಣ್ಣಿಸಿದರು.

ದಾಸ್ಯದಿಂದ ಆಚೆ ಬರೋಣ. ಸಾವಿರವರ್ಷಗಳ ದಾಸ್ಯದ ಪರಿಣಾಮ ನಮ್ಮ ಆಲೋಚನೆಗಳಲ್ಲೂ ಪ್ರಭಾವಿಸಿದೆ. ದೇವಸ್ಥಾನ, ಪೂಜೆ, ಪದ್ಧತಿ ತಲೆತಲಾಂತರದಿಂದ ಬಂದಿರುವುದನ್ನು ಕೆಲವರು ಟೀಕಿಸುತ್ತಾರೆ. ಪದ್ಧತಿ ಪಾಲನೆಯಾಗದಿದ್ದರೆ ದೇವಸ್ಥಾನಕ್ಕೆ ಹೋಗಬೇಕಾದವರು ಹೋಗುವುದಿಲ್ಲ. ಆಸಕ್ತರು ಹೋಗದಿದ್ದರೆ ಪಾಳುಬಿದ್ದು ಲೂಟಿಕೋರರ ಪಾಲಾಗುತ್ತವೆ ಎಂಬುದನ್ನು ನೆನಪಿಡಬೇಕೆಂದರು.

ನಮಗೆ ಸ್ವಾತಂತ್ರ್ಯಬಂದು ೭೦ವರ್ಷ ದೇಶಕ್ಕೆ ಅಗಾಧವಲ್ಲ. ಸಾಕಷ್ಟು ಬೆಳೆದಿದ್ದೇವೆ. ಕೆಟ್ಟದಿನಗಳನ್ನೂ ಕಂಡಿರಬಹುದು. ಬೇಜವಾಬ್ದಾರಿಯಿಂದ ಹಿಂದೆ ಉಳಿದಿರಬಹುದು. ೧೪೦ಕೋಟಿ ಜನರಿಗೆ ಊಟ ಹಾಕುತ್ತಿರುವ ದೇಶ ನಮ್ಮದು. ೫೦೦ವರ್ಷಗಳ ಹಿಂದೆಯೆ ಸುಂದರ ದೇವಾಲಯ ಕಟ್ಟಿದವರು ನಾವು, ಆದರೆ ಬ್ರಿಟಿಷರು ದೇವಾಲಯವಿರಲಿ ತಮ್ಮ ಮನೆಕಟ್ಟಿಕೊಳ್ಳಲು ಇಲ್ಲಿಗೆ ಬಂದವರು. ಇಲ್ಲಿದ್ದಾಗ ಲೂಟಿ ಮಾಡಿ ಬದುಕಿದರೆ, ಇಲ್ಲಿಂದ ಹೋದಮೇಲೆ ನಮ್ಮಲ್ಲಿ ಆರ್ಥಿಕ ಅಪರಾಧವೆಸಗಿದ ಮಲ್ಯರಂತಹ ಅಪರಾಧಿಗಳ ಕಾಸಿನಿಂದ ಬದುಕುತ್ತಿದ್ದಾರೆಂದು ಅಪಹಾಸ್ಯ ಮಾಡಿದರು.

ಶಾಂತಿಪ್ರಿಯ ದೇಶವಿದು. ಉತ್ಪಾದಕತೆ ಇದೆ. ದೇಶದಲ್ಲಿ ಅಪಾರ ಸಂಪತ್ತು-ಹಣವೂ ಇದೆ, ಆದರೆ ಸಮರ್ಪಕ ವಿತರಣೆ ಇಲ್ಲ. ನಂಬಿಕೆಯ ಮೇಲೆ ಬದುಕುತ್ತಿದ್ದೇವೆ. ಸ್ವಾಭಾವಿಕವಾಗಿ ನಂಬಿಕೆ ಆಧರಿಸಿರುವುದರಿಂದ ಶಾಂತಿಯಿಂದ ಬದುಕುತ್ತಿದ್ದೇವೆ. ಮನುಷ್ಯನ ಬುದ್ಧಿವಂತಿಕೆ ಪ್ರಮುಖವಾಗಿ ಪ್ರಭಾವಿಸುವುದು ಹಲವು ತಲೆಮಾರಿನಿಂದ ಹರಿದುಬಂದ ಜ್ಞಾನ ಮತ್ತು ಆರೋಗ್ಯ ಪರಿಣಾಮ ಎಂದರು.

ಅನೈತಕತೆ ನಮ್ಮಲ್ಲಿ ಅಪಾರಾಧವಲ್ಲ. ಅಹಿತಕರ ಘಟನೆ ನಡೆದಾಗ ನಿಂತು-ಗಮನಿಸಿ ನೋಡಿದರೆ ಸ್ವಲ್ಪಮಟ್ಟಿನ ಶಿಸ್ತು ಬರುತ್ತದೆ. ಅಧರ್ಮವಲ್ಲದೆಲ್ಲವೂ ನಮಗೆ ಧರ್ಮವೆ. ಅಸತ್ಯವಲ್ಲದ್ದೆಲ್ಲವೂ ಸತ್ಯವೇ. ಧರ್ಮ ಆತ್ಮಕ್ಕೆ ಸಂಬಂಧಪಟ್ಟದ್ದಾದರೆ, ಮತಾಚರಣೆ ದೇಹ-ಇಂದ್ರಿಯಗಳಿಗೆ ಸಂಬಂಧಿಸಿದ್ದು. ಒಬೊಬ್ಬರೇ ನಾವು ಏನೂ ಅಲ್ಲ. ಗುಂಪಾದರೆ ನಾವೇ ಎಲ್ಲ. ನಮ್ಮ ಸುಖಕ್ಕಾಗಿ ಪ್ರಪಂಚವಲ್ಲ. ಆದರೆ ಪ್ರಪಂಚಕ್ಕೆ ನಾನು ಮುಖ್ಯ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಕನಸು ಕಾಣುತ್ತಿದ್ದರೆ ಆಶಾಭಾವ ಮೂಡುತ್ತದೆ. ದೇಶದಲ್ಲಿ ಒಳಿತನ್ನು ನಿರೀಕ್ಷಿಸಬಹುದು. ಒಳ್ಳೆಯವರನ್ನು ಆರಿಸಿದಾಗ ಒಳ್ಳೆಯದೆ ನಡೆಯುತ್ತದೆ. ಹಂಚಿ ತಿನ್ನುವವರು ಡಕಾಯಿತರೆ ಹೊರತು, ದುಡಿಯುವವರಲ್ಲ. ಸುಖಾಸುಮ್ಮನೆ ಯಾರೂ, ಯಾರಿಗೂ ಯಾವುದನ್ನೂ ಕೊಡುವುದಿಲ್ಲ. ನನ್ನ ಬದುಕನ್ನು ನನ್ನ ಚೈತನ್ಯದ ಮೇಲೆ ಬದುಕಬೇಕೆಂಬ ಆಲೋಚನೆಯೆ ನಿಜವಾದ ರಾಷ್ಟ್ರೀಯತೆ ಎಂದು ಸೇತುರಾಂ ವಿಶ್ಲೇಷಿಸಿದರು.

ರಾಮನಿಗೆ ತನ್ನ ಜನ್ಮಭೂಮಿಯಲ್ಲಿ ದೇವಸ್ಥಾನ ಕಟ್ಟಿಕೊಳ್ಳಲು ೫೦೦ವರ್ಷ ಬೇಕಾಯಿತೆಂಬ ಕುಹಕದ ಮಾತು ಪ್ರಸ್ತಾಪಿಸಿದ ಸೇತುರಾಂ, ದೇವಸ್ಥಾನ ನಿರ್ಮಾಣ ರಾಮನಿಗೆ ಬೇಕಿಲ್ಲ. ನಮಗೆ ಬೇಕಿತ್ತು. ಇಷ್ಟುವರ್ಷ ಆ ಯೋಗ್ಯತೆ ನಮಗಿರಲಿಲ್ಲ ಎಂಬುದು ಸತ್ಯಸಂಗತಿ. ರಾಷ್ಟ್ರಕಟ್ಟಲು ಸರ್ಕಾರ ಕೇಳುವ ಹಣ ತೆರಿಗೆ. ಅದರಲ್ಲಿ ನನಗೆ ಪಾಲುಕೊಡಿ ಎನ್ನುವುದು ಲೂಟಿಯ ಲಕ್ಷಣ ಎಂದರು.

ದೇಶದ ಕಾಡು, ನದಿ, ಅದಿರು, ಪ್ರಾಣಿ, ಮರ, ಗುಡ್ಡ ಸೇರಿದಂತೆ ಪರಿಸರವೆಲ್ಲ ಸಂಪತ್ತಲ್ಲ, ಅವೆಲ್ಲವನ್ನೂ ಬಂಡವಾಳವೆಂದು ಪರಿಗಣಿಸುವಂತಾಗಬೇಕು. ಪರಿಸರ ಕರಗುತ್ತಾ ಹೋದರೆ ಭವಿಷ್ಯವಿಲ್ಲ. ಅದರ ಉತ್ಪನ್ನದ ಮೇಲಷ್ಟೇ ಬದುಕಬೇಕು. ಬಂಡವಾಳ ಜಾಸ್ತಿ ಮಾಡಿಕೊಳ್ಳಬೇಕು. ಸಂಪತ್ತು ನೋಡುವ ದೃಷ್ಟಿಕೋನ ಬದಲಾದರೆ ಮಾತ್ರ ದೇಶಕ್ಕೆ ಭವಿಷ್ಯ. ಇಂತಹ ಹತ್ತು ಹಲವು ಬದಲಾವಣೆಗಳನ್ನು ಗಮನಿಸಿ ಆಳುವವರನ್ನು ಆಯ್ಕೆ ಮಾಡಬೇಕು ಎಂದು ಸೇತುರಾಂ ನುಡಿದರು.

ಸುಗಮಸಂಗೀತ ಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ್ ಪ್ರಾಸ್ತಾವಿಸಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾರ ಜಾಗೃತನಾಗಬೇಕು. ಎಷ್ಟೇ ಸಿರಿವಂತನಿದ್ದರೂ ಜನಸಾಮಾನ್ಯರನ್ನು ಮತ ನೀಡುವಂತೆ ಕೋರಬೇಕಾದ ಸ್ಥಿತಿಯೆ ಪ್ರಜಾಪ್ರಭುತ್ವದ ಹಿರಿಮೆ. ಚುನಾವಣೆಗಳು ನಡೆದಂತೆಲ್ಲ ಮತದಾರ ಪಕ್ವಗೊಳ್ಳುತ್ತಿಲ್ಲ ಎಂದು ವಿಷಾದಿಸಿದ ಅವರು, ಮತದಾನ ಮಾಡದಿರುವುದು ಅಪರಾಧ ಎಂದರು.

ಸುಗಮಸಂಗೀತಗಂಗಾ ಅಧ್ಯಕ್ಷ ಮಕ್ಕಳವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ, ವಂದೇಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೀಶ್, ಸಂಸ್ಕಾರಭಾರತಿ ಜಿಲ್ಲಾಧ್ಯಕ್ಷ ನಾಯಕ್ ಸಚ್ಚಿದಾನಂದ, ವಿವೇಕಜಾಗೃತ ಬಳಗದ ಅಧ್ಯಕ್ಷ ಸಿದ್ದಯ್ಯ, ನಾದಚೈತನ್ಯ ಅಧ್ಯಕ್ಷ ಪ್ರೇಂಕುಮಾರ್, ಅಖಿಲ ಭಾರತೀಯ ಸಾಹಿತ್ಯಪರಿಷದ್ ಜಿಲ್ಲಾಧ್ಯಕ್ಷ ಅರವಿಂದದೀಕ್ಷಿತ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಮಂಜುನಾಥ್ ಕಾಮತ್ ವೇದಿಕೆಯಲ್ಲಿದ್ದರು.

ನಗರದ ವಿವಿಧ ಸಂಘಟನೆಗಳ ಗಾಯಕರಿಂದ ಸುಗಮಸಂಗೀತ ಗಮನಸೆಳೆಯಿತ. ಸುಮಾಪ್ರಸಾದ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಸೇರುರಾಂ ಅವರನ್ನು ಗೌರವಿಸಲಾಯಿತು.

Vigilant Voter’s Conference at Kuvempu Kala Mandir

About Author

Leave a Reply

Your email address will not be published. Required fields are marked *

You may have missed