September 19, 2024

ಶ್ರೀಗುರು ನಿರ್ವಾಣಸ್ವಾಮಿ ಮಠದ ಜಾತ್ರೆಗೆ ತೆರೆ

0
ಶ್ರೀಗುರು ನಿರ್ವಾಣಸ್ವಾಮಿ ಮಠದ ಜಾತ್ರೆಗೆ ತೆರೆ

ಶ್ರೀಗುರು ನಿರ್ವಾಣಸ್ವಾಮಿ ಮಠದ ಜಾತ್ರೆಗೆ ತೆರೆ

ಚಿಕ್ಕಮಗಳೂರು:  ಶ್ರೀಗುರು ನಿರ್ವಾಣಸ್ವಾಮಿಗಳವರ ಮಠದಲ್ಲಿ ಶ್ರೀಮಲ್ಲೇಶ್ವರಸ್ವಾಮಿ ಹಾಗೂ ಪಲ್ಲಕ್ಕಿಅಮ್ಮನವರ ಬಿದಿಗೆಯ ಅಡ್ಡಪಲ್ಲಕ್ಕಿ ಉತ್ಸವ ಭಕ್ತಾದಿಗಳ ಶ್ರದ್ಧಾಭಕ್ತಿಯೊಂದಿಗೆ ನಡೆದು ಹತ್ತುದಿನಗಳ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.

ಪಶ್ಚಿಮಘಟ್ಟ ಸಾಲಿನ ಪದತಲದಲ್ಲಿ ನಗರದಿಂದ ೭ಕಿ.ಮೀ.ದೂರದ ಕೈಮರ ಸಮೀಪದ ಹೊಸಹಳ್ಳಿ ಶ್ರೀಗುರು ನಿರ್ವಾಣಸ್ವಾಮಿಗಳವರ ಮಠದಲ್ಲಿ ಒಡಮೂಡಿರುವ ಶ್ರೀಮಲ್ಲೇಶ್ವರಸ್ವಾಮಿ ಉತ್ಸವಮೂರ್ತಿಗೆ ಜಾತ್ರಾ ಮಹೋತ್ಸವದಲ್ಲಿ ವಿಶೇಷಪೂಜೆ, ರಥಸೇವೆ, ಅಭಿಷೇಕ, ಪಲ್ಲಕ್ಕಿಉತ್ಸವಗಳು ಧರ್ಮದರ್ಶಿ ಎನ್.ಮಹೇಶ್ ಮತ್ತು ಕಾರ್‍ಯದರ್ಶಿ ಎನ್.ಎಂ.ಅಜಯ್ ನೇತೃತ್ವದಲ್ಲಿ ಸಾಂಗವಾಗಿ ನೆರವೇರಿತು.

ಬುಧವಾರ ಮಧ್ಯಾಹ್ನ ಸೂರ್‍ಯನೆತ್ತಿ ಸುಡುವ ವೇಳೆಗೆ ಹೊಸಹಳ್ಳಿ, ಮಾವಿನಹಳ್ಳಿ, ಪುಟ್ಟೇನಹಳ್ಳಿ, ತೋಟದಹಳ್ಳಿ, ಹಿತ್ತಲಮುಕ್ಕಿ ಐದೂರಿನ ಜನ ಮಠದ ಹೊರ ಆವರಣದಲ್ಲಿ ಜಾತ್ರೆಕಟ್ಟೆಯ ಮೇಲೆ ಗದ್ದುಗೆಯಾಗಿದ್ದ ಶ್ರೀಮಲ್ಲೇಶ್ವರಸ್ವಾಮಿಗೆ ವಿಶೇಷಪೂಜೆ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಸಮಯ ಸರಿದಂತೆ ಸುತ್ತಲಿನ ಊರಿನ ಜನರೊಂದಿಗೆ ಹೊರಜಿಲ್ಲೆಯ ಭಕ್ತಾದಿಗಳೂ ಆಗಮಿಸಿ ಪಲ್ಲಕ್ಕಿಹೊತ್ತು ಮಠದ ಎರಡುಸುತ್ತು ಬಂದ ನಂತರ ಗರ್ಭಗುಡಿಯೊಳಗೆ ಉತ್ಸವಮೂರ್ತಿಯನ್ನು ಕರೆದೊಯ್ಯಲಾಯಿತು.

ಪುಟ್ಟಬಾಲಕ ಕಳಸವನ್ನು ಹೊತ್ತು ಸಾಗಿದರೆ, ಹಳ್ಳಿವಾದ್ಯಕ್ಕೆ ಹೆಜ್ಜೆಹಾಕಿದ ಐದೂರು ಯುವಕರು ನಿರ್ವಾಣಸ್ವಾಮಿಗಳು ಹಾಗೂ ಮಲ್ಲೇಶ್ವರಸ್ವಾಮಿಯ ಪವಾಡಗಳನ್ನು ಪದ್ಯದ ರೂಪದಲ್ಲಿ ಹಾಡಿ ಕೊಂಡಾಡಿದರು. ಕೆಲಕಾಲ ಸುಗ್ಗಿಕುಣಿತವೂ ನಡೆಯಿತು. ಮುತ್ತೈದೆಯರ ಮಂಗಳಾರತಿಯ ನಂತರ ಬಿದಿಗೆ ಪಲ್ಲಕ್ಕಿ ಉತ್ಸವ ಪೂರ್ಣಗೊಂಡಿತು.

ಕಾಳಗದ ಹಬ್ಬದಿಂದ ಜಾತ್ರೆಯ ಕೆಲಸಕಾರ್‍ಯಗಳ ಪ್ರಾರಂಭವಾಯಿತು. ಅಂದು ತಳಿರುತೋರಣ ಶ್ರೀಮಠಕ್ಕೆ ಕಟ್ಟಿದ ನಂತರ ಐದೂರಿನಲ್ಲಿ ಕುಟುಂಬದ ವೈಯಕ್ತಿಕ ಕಾರ್‍ಯಕ್ರಮಗಳು ನಿಷೇಧಗೊಂಡಿತ್ತು. ಜಾತ್ರೆಯ ತಯಾರಿಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಅನುಕೂಲವಾಗಲೆಂದು ನೂರಾರುವರ್ಷಗಳಿಂದ ಈ ಕಟ್ಟುಪಾಡು ವಿಧಿಸಿಕೊಳ್ಳಲಾಗಿದೆ.

೧೯೪೭ನೆಯ ಶುಭಕೃತ್ ನಾವಸಂತ್ಸರ ಪಾಲ್ಗುಣ ಸಪ್ತಮಿ ಏಪ್ರಿಲ್೧ರ ಸೋಮವಾರ ಪೂರ್ವಾಹ್ನ ಶ್ರೀಮಠದಲ್ಲಿ ವಿಶೇಷಪೂಜೆಯೊಂದಿಗೆ ಜಾತ್ರೆ ಅಧಿಕೃತವಾಗಿ ಆರಂಭಗೊಂಡಿತ್ತು. ಅಂದು ಮಧ್ಯಾಹ್ನ ರಥೋತ್ಸವ, ಕಳಸಪೂಜೆ ನಡೆದಿದ್ದು, ರಾತ್ರಿ ಮಹಾರಥೋತ್ಸವ ನಡೆದಿತ್ತು. ಅಷ್ಟಮಿಯ ಮಂಗಳವಾರ ಹಗಲು ಘಳಿಗೆ ತೇರು ನಡೆಯಿತು. ನವಮಿಯ ಬುಧವಾರ ಬೆಳಗ್ಗೆ ಓಕಳಿ ಮಂಟಪಪೂಜೆ ನೆರವೇರಿಸಲಾಗಿತ್ತು.

ಅಮವಾಸ್ಯೆಯ ಸೋಮವಾರ ಏ.೮ರಂದು ಧ್ವಜಾರೋಹಣ ಸಂತರ್ಪಣೆ ಭಕ್ತಾದಿಗಳ ಮುಡಿತೆಗೆಸುವುದು ಹರಕೆ ಹಾಡ್ಯಗಳನ್ನು ಒಪ್ಪಿಸಿ ದರ್ಶನಾಶೀರ್ವಾದ ಪಡೆದರು. ಕ್ರೋಧಿನಾಮಸಂತ್ಸರ ಪಾಡ್ಯದ ಮಂಗಳವಾರ ಬೆಳಗ್ಗೆ ಶ್ರೀಸ್ವಾಮಿಯ ಅಡ್ಡಪಲ್ಲಕಿ ಉತ್ಸವ ಆರಂಭಗೊಂಡಿತು.

ರಾತ್ರಿ ಅಲಂಕೃತ ಅಡ್ಡಪಲ್ಲಕ್ಕಿಯನ್ನು ಐದಾರು ಕಿ.ಮೀ.ದೂರದ ಗಾಳಿಹಳ್ಳಿಮಠಕ್ಕೆ ಕರೆದೊಯ್ಯಲಾಯಿತು. ಗಾಳಿಹಳ್ಳಿ ಶ್ರೀಸಿದ್ದೇಶ್ವರಸ್ವಾಮಿ ಅಡ್ಡಪಲ್ಲಕ್ಕಿಯೊಂದಿಗೆ ಹೊಸಹಳ್ಳಿ ಪಲ್ಲಕ್ಕಿಹರ ತಲುಪಿದ ಎರಡು ಪಾಲಕಿಗಳನ್ನು ಭಕ್ತಾದಿಗಳು ಪೂಜೆಸಲ್ಲಿಸಿ ಎದುರುಗೊಂಡರು.

ಮಂಗಳವಾದ್ಯ ತಾರಕಕ್ಕೇರಿದಂತೆ ಎರಡೂ ಪಲ್ಲಕ್ಕಿಗಳು ಹರದತುಂಬೆಲ್ಲ ವೇಗವಾಗಿ ಸಂಚರಿಸಿ ಭಕ್ತರಿಗೆ ಆಶೀರ್ವದಿಸಿದವು. ಜಾತ್ರಾ ಕಟ್ಟೆಯಮೇಲೆ ಕೆಲಕಾಲ ಎರಡೂ ಪಲ್ಲಕ್ಕಿಗಳನ್ನಿರಿಸಿ ಪೂಜಿಸಲಾಯಿತು. ಅಲ್ಲಿಂದ ಗಾಳಿಹಳ್ಳಿ ಶ್ರೀಸಿದ್ದೇಶ್ವರಸ್ವಾಮಿ ಪಲ್ಲಕ್ಕಿ ಹಿಂತಿರುಗಿದರೆ ಶ್ರೀಗುರು ಮಲ್ಲೇಶ್ವರಸ್ವಾಮಿ ಪಲ್ಲಕ್ಕಿಯು ವಿವಿಧ ಗ್ರಾಮಗಳಲ್ಲಿ ಪೂಜೆಸ್ವೀಕರಿಸಿ ಶ್ರೀಗುರು ನಿರ್ವಾಣಸ್ವಾಮಿ ಹಿಂತಿರುಗುವ ವೇಳೆಗೆ ಮಧ್ಯರಾತ್ರಿ ಮೀರಿದ್ದರೂ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ. ಶ್ರೀಮಠದ ಸುತ್ತ ಪಲ್ಲಕ್ಕಿಉತ್ಸವ ಸಾಂಪ್ರದಾಯಕವಾಗಿ ನಡೆದು ಬೆಳಗಿನಜಾವ ತಪೋಕಟ್ಟೆಯ ಮೇಲೆ ಗದ್ದುಗೆಯಾಯಿತು.

ಕೊನೆಯ ದಿನವಾದ ಬುಧವಾರ ಶ್ರೀಮಲ್ಲೇಶ್ವರಸ್ವಾಮಿ, ಶ್ರೀಪಲ್ಲಕ್ಕಿಅಮ್ಮ ಹಾಗೂ ಶ್ರೀಗುರು ನಿರ್ವಾಣಸ್ವಾಮಿಗೆ ವಿಶೇಷ ಪೂಜೆ, ನೈವೇದ್ಯ ಸಮರ್ಪಣೆ ನಂತರ ಸಿಹಿಯೂಟದ ಸಂತರ್ಪಣೆ ನಡೆಯಿತು. ಐದೂರಿನ ಗ್ರಾಮಸ್ಥರಿಗೆ ತೆಂಗಿನಕಾಯಿಯ ಗೌರವವನ್ನು ಧರ್ಮದರ್ಶಿ ಮಹೇಶ್ ಮತ್ತು ಕಾರ್‍ಯದರ್ಶಿ ಅಜಯ್ ಸಮರ್ಪಿಸಿ, ಕೃತಜ್ಞತೆ ಸಲ್ಲಿಸಿದರು. ಸಂಜೆಯ ಪೂಜೆಯ ನಂತರ ಈವರ್ಷದ ಜಾತ್ರಾ ಮಹೋತ್ಸವ ಪೂರ್ಣಗೊಂಡಿತು.

Sriguru Nirvanaswamy Mutt fair

About Author

Leave a Reply

Your email address will not be published. Required fields are marked *

You may have missed