September 19, 2024
ಚಿಕ್ಕಮಗಳೂರಿನ ಕೆಂಪನಹಳ್ಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ

ಚಿಕ್ಕಮಗಳೂರಿನ ಕೆಂಪನಹಳ್ಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ

ಚಿಕ್ಕಮಗಳೂರು: ಕಾಫಿಯನಾಡಿನಾದ್ಯಂತ ಮುಸ್ಲಿಂ ಸಮುದಾಯದವರು ಗುರುವಾರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಂ ಜನಾಂಗದವರು ಚಂದ್ರವನ್ನು ನೋಡಿ ಮರು ದಿನ ಹಬ್ಬವನ್ನು ಆಚರಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪ್ರತೀತಿ.

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಚಿಕ್ಕಮಗಳೂರು ನಗರದಲ್ಲಿ ರಂಜಾನ್ ಆಚರಣೆ ಸಂಭ್ರಮದಿಂದ ಕೂಡಿತ್ತು. ಹಬ್ಬದ ಹ್ನಿನಲೆಯಲ್ಲಿ ಖರೀದಿ ಜೋರಾಗಿತ್ತು. ಮಹಿಳೆಯರು, ಮಕ್ಕಳು ಇಲ್ಲಿನ ಎಂ.ಜಿ. ರಸ್ತೆ, ಅಂಡೆಛತ್ರದ ಬಳಿ ಪ್ರತಿ ದಿನ ಸಂಜೆ ಹೊಸ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಬುಧವಾರ ರಾತ್ರಿ ೧೧ ಗಂಟೆಯವರೆಗೆ ಈ ಪ್ರದೇಶದಲ್ಲಿ ಖರೀದಿ ಜೋರಾಗಿತ್ತು.

ಗುರುವಾರ ಬೆಳಿಗ್ಗೆ ಹೊಸ ಬಟ್ಟೆಯನ್ನು ಧರಿಸಿ, ದಾರಿಯ ಉದ್ದಕ್ಕೂ ಅಲ್ಲಾನ ಸ್ಮರಣೆ ಮಾಡುತ್ತಾ ಈದ್ಗಾ ಮೈದಾನದ ಕಡೆಗೆ ತೆರಳಿದರು. ೧೦ ಗಂಟೆಯ ವೇಳೆಗೆ ಮುಸ್ಲಿಂ ಸಮುದಾಯ ಸಂಘ ಹೆಚ್ಚಾಗಿತ್ತು. ಚಿಕ್ಕಮಗಳೂರಿನ ಕೆಂಪನಹಳ್ಳಿ ಈದ್ಗಾ ಮೈದಾನದಲ್ಲಿ ಸುಮಾರು ೧೨ ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು.

ಧರ್ಮ ಗುರುಗಳು ಉಪನ್ಯಾಸ ನೀಡಿದರು. ಪ್ರಾರ್ಥನೆಯ ಬಳಿಕ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ನಗರದ ವಿಜಯಪುರದ ಈದ್ಗಾ ಮೈದಾನದಲ್ಲೂ ಇದೇ ವಾತಾವರಣ, ಸಂಭ್ರಮ ಕಂಡು ಬಂದಿತು. ಮನೆಯಲ್ಲೂ ಕೂಡ ಹಬ್ಬದ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಒಟ್ಟಾರೆ ಪ್ರತಿ ವರ್ಷದಂತೆ ಈ ಬಾರಿಯೂ ಸಡಗರದಿಂದ ರಂಜಾನ್ ಆಚರಿಸಲಾಯಿತು.

Ramadan celebration by Muslim community

 

 

About Author

Leave a Reply

Your email address will not be published. Required fields are marked *

You may have missed