September 19, 2024
ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ

ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ

ಚಿಕ್ಕಮಗಳೂರು:  ಲೋಕಸಭಾ ಸಾರ್ವತ್ರಿಕ ಚುನಾವಣೆ -೨೦೨೪ರ ಅಂಗವಾಗಿ ನಗರದ ಎಂ.ಜಿ. ರಸ್ತೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ ವತಿಯಿಂದ ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ಎಂ.ಜಿ. ರಸ್ತೆಯಲ್ಲಿ ಮತದಾನದ ಜಾಗೃತಿಗಾಗಿ ಯೋಗ, ಝಂಬಾ ಸ್ಲೋ  ಸೈಕಲ್ ರೇಸ್ ಮತ್ತು ಸ್ಲೋ ಬೈಕ್ ರೇಸ್, ನೇರ ನಡಿಗೆ ಮತ್ತು ಹಿಂಬದಿ ನಡಿಗೆ, ಫನ್‌ಗೇಮ್ಸ್, ರಂಗೋಲಿ, ಮಹಿಳೆಯರಿಗೆ ತರಕಾರಿ ತಿನ್ನುವ ಸ್ಪರ್ಧೆ, ಪುರುಷರಿಗೆ ಮುದ್ದೆ ತಿನ್ನುವ ಸ್ಪರ್ಧೆ, ಶ್ವಾನ ಪ್ರದರ್ಶನ  ಸೇರಿದಂತೆ ಬೆಳಿಗ್ಗೆ ಯಿಂದ ಸಂಜೆಯ ವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಮಾತನಾಡಿ ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯು ಬಳಸಿಕೊಂಡು ವಿವೇಚನೆಯಿಂದ ಅರ್ಹ ವ್ಯಕ್ತಿಗೆ ಮತ ನೀಡುವ ಮೂಲಕ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮುಂದಾಗಬೇಕು. ಈ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದೆ ದೇಶದ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿನಾಕಾರಣ ದೂಷಿಸುವ ಬದಲು ಚುನಾವಣೆಯಲ್ಲಿ ಮತದಾನ ಮಾಡಿ ವಿಶ್ವಾಸಾರ್ಹ ಸರ್ಕಾರ ರಚನೆಯಲ್ಲಿ ಮತದಾರರು ಪಾಲ್ಗೊಳ್ಳಬೇಕು. ವ್ಯವಸ್ಥೆಯ ಸುಭದ್ರತೆಗಾಗಿ ಮತದಾನದ ಮಹತ್ವವನ್ನು ನಾವೆಲ್ಲರೂ ಅರಿಯಬೇಕು. ಉತ್ತಮ ವ್ಯಕ್ತಿಗಳ ಆಯ್ಕೆಗೆ ಸಂವಿಧಾನ ನಮಗೆ ನೀಡಿದ ಮತದಾನದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಏಪ್ರಿಲ್ ೨೬ರ ಮತದಾನದ ದಿನದಂದು ಪ್ರತಿಯೊಬ್ಬ ಅರ್ಹ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ ನಗರ ಪ್ರದೇಶದಲ್ಲಿ ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಮತದಾನದಿಂದ ದೂರ ಉಳಿಯದೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸಲು ಸ್ವೀಪ್ ಸಮಿತಿಯಿಂದ ಇಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಮತದಾರರಿಗೆ ಮತಚಲಾಯಿಸಲು ಅನುಕೂಲವಾಗುವಂತೆ ಮತದಾರರ ಚೀಟಿಯನ್ನು ವಿತರಿಸಲಾಗುತ್ತಿದೆ. ಮತದಾರರು ಏಪ್ರಿಲ್ ೨೬ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಬಾರದು, ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ತರಕಾರಿ ತಿನ್ನುವ ಸ್ಪರ್ಧೆಯಲ್ಲಿ (ಮಹಿಳೆಯರು) ಲಕ್ಷ್ಮೀ ಪ್ರಥಮ, ಸುಮ ದ್ವಿತೀಯ ಹಾಗೂ ಹೇಮಾವತಿ ತೃತೀಯ, ಸ್ಲೋ ಸೈಕಲ್ ಸ್ಪರ್ಧೆಯಲ್ಲಿ (ಮಹಿಳೆಯರು) ನಂದಿನಿ ಪ್ರಥಮ, ಯಶಸ್ವಿನಿ ದ್ವಿತೀಯ, ಇಂಚರ ತೃತೀಯ, ಸ್ಲೋ ಬೈಕ್ ಸ್ಪರ್ಧೆ (ಮಹಿಳೆಯರು) ಸುಮಾಂಜಲಿ ಪ್ರಥಮ, ರುದ್ರಾಂಭಿಕ ದ್ವಿತೀಯ, ಪುರುಷರ ಸ್ಲೋ ಸೈಕಲ್ ಸ್ಪರ್ಧೆಯಲ್ಲಿ ಅಜಯ್ ಐ.ಎಂ. ಪ್ರಥಮ, ಮಂಜು ದ್ವಿತೀಯ, ಧರ್ಮ ಆರ್. ತೃತೀಯ ಸ್ಲೋ ಬೈಕ್ ಸ್ಪರ್ಧೆಯಲ್ಲಿ ಕಿರಣ್ ಪ್ರಥಮ, ಶ್ರೀನಿವಾಸ ದ್ವಿತೀಯ ಸ್ಥಾನ ಗಳಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Voting awareness in the city

About Author

Leave a Reply

Your email address will not be published. Required fields are marked *

You may have missed