September 8, 2024

ಪ್ರಜ್ವಲ್ ರೇವಣ್ಣ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ

0
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್ ರೇಖಾ ಹುಲಿಯಪ್ಪಗೌಡ ಸುದ್ದಿಗೋಷ್ಠಿ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್ ರೇಖಾ ಹುಲಿಯಪ್ಪಗೌಡ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ರಾಜಕೀಯ ಇತಿಹಾಸದಲ್ಲೇ ದುರಂತ ಘಟನೆಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್ ರೇಖಾ ಹುಲಿಯಪ್ಪಗೌಡ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇದರ ನೈತಿಕ ಹೊಣೆ ಹೊತ್ತು ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಬೇಕು. ಜೊತೆಗೆ ಜೆಡಿಎಸ್ ಪಕ್ಷವನ್ನು ತಕ್ಷಣವೇ ವಿಸರ್ಜಿಸಬೇಕೆಂದು ಒತ್ತಾಯಿಸಿದರು.

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ ರೇವಣ್ಣ ಇವರು ಮಹಿಳೆಯರ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ದೂರಿದರು.

ಮೃಗಗಳಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ವರ್ತಿಸಿದ್ದಾರೆ. ಕರ್ನಾಟಕದ ರಾಜಕಾರಣಕ್ಕೆ ಬಳಿದ ಅಳಿಸಲಾಗದ ಮಸಿ. ಕರ್ನಾಟಕದವರೊಬ್ಬರು ದೇಶದ ಪ್ರಧಾನಮಂತ್ರಿಗಳಾಗಿದ್ದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಕನ್ನಡಿಗರ ಮುಖಕ್ಕೆ ಬಳಿದ ಮಸಿಯಾಗಿದೆ ಎಂದು ಲೇವಡಿ ಮಾಡಿದರು.

ತನ್ನ ಮನೆಯಲ್ಲೇ ಇದ್ದ ಮೊಮ್ಮಗನ ಈ ಕೃತ್ಯಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ನೈತಿಕ ಹೊಣೆ ಹೊರಬೇಕು. ಹಾಗೂ ಸರ್ಕಾರ ಈ ಪ್ರಕರಣವನ್ನು ವಿಶೇಷ ತನಿಖಾತಂಡ ರಚಿಸಿ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ ಎಂದರು.

ಆರೋಪಿಯಾಗಿರುವ ರೇವಣ್ಣ ರವರನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ವಿದೇಶಕ್ಕೆ ರಾತ್ರೋ ರಾತ್ರಿ ಪಲಾಯನ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಅವರ ಕುಟುಂಬದವರು ಧೈರ್ಯಗೆಡದೆ ಆರೋಪಿಯ ಮೇಲೆ ದೂರು ದಾಖಲಿಸಿ ಶಿಕ್ಷೆ ಕೊಡಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ದೂರು ನೀಡಲು ಸಂತ್ರಸ್ತ ಮಹಿಳೆಯರು ಯಾರೇ ಮುಂದೆ ಬಂದರೂ ಅವರಿಗೆ ನಾವು ಮತ್ತು ನಮ್ಮ ಪಕ್ಷ ರಕ್ಷಣೆ ಕೊಡಿಸುವುದಲ್ಲದೆ ಎಲ್ಲಾ ರೀತಿಯ ನೆರವು ನೀಡಲು ಬದ್ಧರಾಗಿರುತ್ತೇವೆ ಎಂದು ಭರವಸೆ ನೀಡಿದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಮಾತನಾಡಿ ಶಾಸಕ ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೂಮಿ ಮೇಲೆ ಇರಲು ನಾಲಾಯಕ್ ಎಂದು ಹೇಳಿದರು.

ಕಳೆದ ೩೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಇಂತಹವರ ಜೊತೆಯಲ್ಲಿದ್ದು ಅಸಹ್ಯವೆನಿಸುತ್ತದೆ ಎಂದು ಹೇಳಿದ ದೇವರಾಜ್ ಅವರು ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ರಾಜಕೀಯ ಅಥವಾ ಚುನಾವಣಾ ದ್ವೇ?ದಿಂದ ನಡೆದಿಲ್ಲ ಈ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯವರಾಗಲಿ ಶೋಭಾ ಕರಂದ್ಲಾಜೆ ಅವರಾಗಲಿ ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.

ಈ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರ ಫಲಿತಾಂಶ ಬಂದರೆ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಗಡಿಪಾರು ಮಾಡಬೇಕು. ಇದರೊಂದಿಗೆ ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಭಾನಸುಲ್ತಾನ, ಮಾಜಿ ಜಿಲ್ಲಾಪಂಚಾಯಿತಿ ಸದಸ್ಯೆ ಹೇಮಾವತಿ ಇದ್ದರು.

Prajwal Revanna’s case is an incident that brings down the heads of the civil society

About Author

Leave a Reply

Your email address will not be published. Required fields are marked *

You may have missed